Advertisement

ನಿಷ್ಫಲವಾದ ಉದ್ಯೋಗಿನಿ-ಸಮೃದ್ಧಿ

12:47 PM Aug 03, 2019 | Naveen |

ವೀರಾರೆಡ್ಡಿ ಆರ್‌.ಎಸ್‌.
ಬಸವಕಲ್ಯಾಣ:
ಬೀದಿಬದಿ ವ್ಯಾಪಾರ ಮಾಡುವ ಮಹಿಳಾ ವ್ಯಾಪಾರಿಗಳನ್ನು ಶೋಷಣೆಯಿಂದ ಮುಕ್ತಗೊಳಿಸುವ ಸಲುವಾಗಿ ಸರ್ಕಾರ ಜಾರಿಗೆ ತಂದ ‘ಸಮೃದ್ಧಿ’ ಯೋಜನೆ ಮತ್ತು ಸಾಮಾನ್ಯ, ವಿಧವೆ, ಅಂಗವೀಕಲ ಹಾಗೂ ಸಂಕಷ್ಟಕ್ಕೊಳಗಾದ ಮಹಿಳೆಯರಿಗಾಗಿ ಜಾರಿಗೆ ತಂದ ‘ಉದ್ಯೋಗಿನಿ’ ಯೋಜನೆಗಾಗಿ ಫಲಾನುಭವಿಗಳು ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಿ ಸಂಬಂಧಪಟ್ಟವರು ಎರಡು ವರ್ಷಗಳಿಂದ ಆಯ್ಕೆ ಮಾಡದಿರುವುದರಿಂದ ಮಹಿಳೆಯರು ಈ ಯೋಜನೆಯಿಂದ ವಂಚಿತರಾಗಿದ್ದಾರೆ.

Advertisement

ಉದ್ಯೋಗಿನಿ ಯೋಜನೆ ಸದ್ಬಳಕೆಗಾಗಿ 2017-18ರಲ್ಲಿ ಬಸವಕಲ್ಯಾಣ ತಾಲೂಕಿನಿಂದ ಸಲ್ಲಿಕೆಯಾಗಿದ್ದ ಒಟ್ಟು 158 ಅರ್ಜಿಗಳಲ್ಲಿ 146 ಅರ್ಹವಾಗಿದ್ದು, 12 ತಿರಸ್ಕೃತಗೊಂಡಿದ್ದವು. ಹುಮನಾಬಾದ್‌ ಮತಕ್ಷೇತ್ರಕ್ಕೆ ಒಳಪಡುವ ಗ್ರಾಮಗಳಿಂದ ಒಟ್ಟು 12 ಅರ್ಜಿಗಳಲ್ಲಿ 4 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಮತ್ತು 2018-19ರಲ್ಲಿ ಬಸವಕಲ್ಯಾಣದಿಂದ ಸಲ್ಲಿಕೆಯಾಗಿದ್ದ ಒಟ್ಟು 286 ಅರ್ಜಿಗಳಲ್ಲಿ 277 ಅರ್ಹ ವಾಗಿದ್ದು, 9 ತಿರಸ್ಕೃತಗೊಂಡಿದ್ದವು. ಹುಮನಾಬಾದ್‌ ಮತಕ್ಷೇತ್ರಕ್ಕೆ ಒಳಪಡುವ 751 ಅರ್ಜಿಗಳಲ್ಲಿ 51 ಅರ್ಹವಾದ್ದರೂ ಆಯ್ಕೆ ಪ್ರಕ್ರಿಯೆ ನಡೆದಿಲ್ಲ.

ಸಮೃದ್ಧಿ ಯೋಜನೆ ಲಾಭಕ್ಕಾಗಿ 2017-18ರಲ್ಲಿ ಬಸವಕಲ್ಯಾಣದಿಂದ ಸಲ್ಲಿಕೆಯಾಗಿದ್ದ ಒಟ್ಟು 80 ಅರ್ಜಿಗಳಲ್ಲಿ 65 ಅರ್ಹವಾಗಿದ್ದು, 32 ನೇಮಕ ಮಾಡಲಾಗಿತ್ತು. 2018-19ರಲ್ಲಿ 15 ಅರ್ಜಿಗಳು ಬಂದಿದ್ದು, ಅದರಲ್ಲಿ 9 ತಿರಸ್ಕೃತವಾಗಿ 6 ಅರ್ಹತೆ ಪಡೆದುಕೊಂಡಿದ್ದವು ಎಂದು ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳಾದ ಸಮೃದ್ಧಿ ಯೋಜನೆಯಡಿ 10 ಜನ ಹಾಗೂ ಉದ್ಯೋಗಿನಿ ಯೋಜನೆಯಡಿ 10 ಫಲಾನುಭವಿಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಸಂಬಂಧಪಟ್ಟವರು ಆಯ್ಕೆ ಮಾಡಿಲ್ಲ. ಇದರಿಂದ ಸೌಲಭ್ಯವಿದ್ದರೂ ಜನರಿಗೆ ದೊರಕದಂತಾಗಿದೆ.

ಪ್ರಸಕ್ತ ವರ್ಷದಿಂದ ಉದ್ಯೋಗಿನಿ ಯೋಜನೆಯಡಿ 21 ಹಾಗೂ ಸಮೃದ್ಧಿ ಯೋಜನೆಯಡಿ 17 ಫಲಾನುಭವಿಗಳನ್ನು ಆಯ್ಕೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ ಈ ವರ್ಷವಾದರೂ ಯೋಜನೆಯ ಲಾಭ ಸಿಗುವಂತೆ ಮಾಡಬೇಕು ಎಂಬುದು ಬೀದಿಬದಿ ವ್ಯಾಪಾರ ಮಾಡುವ ಮತ್ತು ಬಡ ಮಹಿಳೆಯರ ಒತ್ತಾಯವಾಗಿದೆ.

Advertisement

ಸರ್ಕಾರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತಂದ ಯೋಜನೆಗಳು ಎರಡು ವರ್ಷಗಳಿಂದ ಇದ್ದೂ ಇಲ್ಲದಂತಾಗಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತ ಜನಪ್ರತಿನಿಧಿಗಳು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರವಾಗಿ ಮುಗಿಸಿ, ಈ ವರ್ಷವಾದರೂ ಯೋಜನೆ ಲಾಭ ಸಿಗುವಂತೆ ಮಾಡಬೇಕು ಎಂಬುದು ಮಹಿಳೆಯರ ಆಶಯವಾಗಿದೆ.

ಯೋಜನೆಗಳಿಂದ ಪ್ರಯೋಜನ
ಸಮೃದ್ಧಿ ಯೋಜನೆಯಡಿ ಆಯ್ಕೆಯಾದ 17 ಬೀದಿಬದಿ ವ್ಯಾಪಾರ ಮಾಡುವ ಫಲಾನುಭವಿಗಳಿಗೆ ತಲಾ 10 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಉದ್ಯೋಗಿನಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕನಿಷ್ಠ 1 ಲಕ್ಷದಿಂದ 3 ಲಕ್ಷದ ವರೆಗೆ ಸಾಲ ಸೌಲಭ್ಯ ನೀಡಲಾಗುವುದು. ಇದರಲ್ಲಿ ಸಾಮಾನ್ಯ ಮಹಿಳೆಯರಿಗೆ ಮತ್ತು ವಿಶೇಷ ವರ್ಗದ ಮಹಿಳೆಯರಿಗೆ ಶೇ.30ರಷ್ಟು ಹಾಗೂ ಪ.ಜಾ.-ಪ.ಪಂ. ವರ್ಗದ ಮಹಿಳೆಯರಿಗೆ ಶೇ.50ರಷ್ಟು ಸಹಾಯಧನ ಸೌಲಭ್ಯ ಇರುತ್ತದೆ.

ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಯೋಜನೆಯಡಿ ಅರ್ಜಿ ಸಲ್ಲಿಸುತ್ತೇವೆ. ಆದರೆ ಎರಡು ವರ್ಷಗಳಿಂದ ಫಲಾನು ಭವಿಗಳನ್ನು ಆಯ್ಕೆ ಮಾಡದಿರುವುದರಿಂದ ನಮ್ಮ ಪಾಲಿಗೆ ಯೋಜನೆಗಳು ಇದ್ದೂ ಇಲ್ಲದಂತಾಗಿವೆ. ಈ ವರ್ಷವಾದರೂ ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳ ಆಯ್ಕೆ ಪ್ರಕ್ರಿಯೆ ಮುಗಿಸಿ, ಯೋಜನೆ ಉಪಯೋಗಕ್ಕೆ ಬರುವಂತೆ ಮಾಡಬೇಕು.
ಹೆಸರು ಹೇಳಲಿಚ್ಛಿಸದ ಮಹಿಳೆ

Advertisement

Udayavani is now on Telegram. Click here to join our channel and stay updated with the latest news.

Next