Advertisement

ಕೆಲಸಕ್ಕೆ ಬಾರದ ಕಸದ ತೊಟ್ಟಿ

03:23 PM Mar 07, 2020 | Naveen |

ಬಸವಕಲ್ಯಾಣ: ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಬೀಳುವ ಕಸವನ್ನು ಒಂದಡೆ ಸಂಗ್ರಹಿಸುವ ಉದ್ದೇಶದಿಂದ ನಗರಸಭೆಯಿಂದ ಲಕ್ಷಾಂತರ ರೂ. ಖರ್ಚು ಮಾಡಿ, ಅಲ್ಲಲ್ಲಿ ಕಸದ ತೊಟ್ಟಿಗಳು ಅಳವಡಿಸಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಕಸದ ತೊಟ್ಟಿಗಳು ಕೆಲಸಕ್ಕೆ ಬಾರದಂತೆ ಆಗಿರುವುದು ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳ ಆಕ್ರೋಷಕ್ಕೆ ಕಾರಣವಾಗಿದೆ.

Advertisement

ಕಸಮುಕ್ತ ಕಲ್ಯಾಣ ಯೋಜನೆಯಡಿ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ, ಹೋಟೆಲ್‌, ಶಾಲೆ, ಮಾರ್ಕೇಟ್‌ ಸೇರಿದಂತೆ ನಗರಸಭೆ ವ್ಯಾಪ್ತಿಯ ಬಡಾವಣೆಗಳ ಎರಡು ಬದಿಯಲ್ಲಿ, ಮನೆ ಮುಂದೆ ಮತ್ತು ನಿತ್ತ ಕಸ ಸಂಗ್ರಹ ವಾಗುವ ಸಾರ್ವಜನಿಕರ ಸ್ಥಳಗಳಲ್ಲಿ ಕಸದ ತೊಟ್ಟಿಗಳನ್ನು ಅಳವಡಿಸಲಾಗಿತ್ತು. ಆದರೆ ನಗರ ಸ್ವಚ್ಛವಾಗುವ ಮುನ್ನವೇ ಕಸದ ತೊಟ್ಟಿಗಳು ಉಪಯೋಗಕ್ಕೆ ಬಾರದಂತೆ ಹಾಳಾಗುತ್ತಿವೆ.

ಈಗಾಗಲೇ ನಾರಾಯಣಪೂರ ಕ್ರಾಸ್‌ ಹಾಗೂ ನಗರದ ಶಾಲಾ-ಕಾಲೇಜು ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಕಸದ ತೊಟ್ಟಿಗಳಲ್ಲಿ ಕೆಲವು ಮುರಿದು ಹೋಗಿವೆ, ಕೆಲವು ಬಿದ್ದಿವೆ. ಕೆಲವು ಕಸದ ತೊಟ್ಟಿ ಹಾಳಾಗಿದ್ದು, ಸ್ಟ್ಯಾಂಡ್ ಮಾತ್ರ ಉಳಿದುಕೊಂಡಿವೆ. ಇದನ್ನು ಗಮನಿಸಿದರೆ ಗುಣಮಟ್ಟದ ಕೆಲಸ ಮಾಡದೆ, ಕಾಟಾಚಾರಕ್ಕಾಗಿ ಕಸದ ತೊಟ್ಟಿಗಳನ್ನು ಅಳವಡಿಸಿರುವುದು ಕಂಡುಬರುತ್ತಿದೆ.

ಬೆಳಗಾದರೆ ಸಾಕು ನಗರಸಭೆ ಸಿಬ್ಬಂದಿ ಬಡಾವಣೆ ಮತ್ತು ರಸ್ತೆಗಳಲ್ಲಿನ ಕಸದ ಜೊತೆಗೆ, ಒಂದು-ಎರಡು ಹಾಳಾದ ಕಸದ ತೊಟ್ಟಿಗಳನ್ನು ನಿತ್ಯ ಟ್ರ್ಯಾಕ್ಟರ್‌ ನಲ್ಲಿ ತುಂಬಿಕೊಂಡು ಹೋಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇನ್ನೂ ಕೆಲವು ತಿಂಗಳುಗಳಲ್ಲಿ ಬಡಾವಣೆ ಮತ್ತು ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಲಾದ ಎಲ್ಲ ಕಸದ ತೊಟ್ಟಿಗಳು ಸಂಪೂರ್ಣ ಉಪಯೋಗಕ್ಕೆ ಬರದಂತೆ ಹಾಳಾಗುತ್ತವೆ ಎಂಬುವುದು ನಿವಾಸಿಗಳ ಮತ್ತು ಸಾರ್ವಜನಿಕರು
ಅಭಿಪ್ರಾಯವಾಗಿದೆ.

ಒಟ್ಟಿನಲ್ಲಿ ಸ್ವಚ್ಛತೆಗಾಗಿ ಲಕ್ಷಾಂತ ರೂ. ಖರ್ಚು ಮಾಡಿ ಅಳವಡಿಸಲಾದ ಕಸದ ತೊಟ್ಟಿಗಳು ಕೆಲವೇ ತಿಂಗಳಲ್ಲಿ ಹಾಳಾಗಿರುವುದರಿಂದ ಅಳವಡಿಸಿಯೂ ವ್ಯರ್ಥವಾದಂತಾಗಿದೆ. ಹೀಗಾಗಿ ಕಸ ಸಂಗ್ರಹಕ್ಕಾಗಿ ತಾತ್ಕಾಲಿಕ ಕಸದ ತೊಟ್ಟಿ ಅಳವಡಿಸುವುದನ್ನು ಬಿಟ್ಟು, ಶಾಶ್ವತ ಪರಿಹಾರ ಮಾಡಬೇಕು ಎಂಬುದು ನಗರ ನಿವಾಸಿಗಳ ಒತ್ತಾಯವಾಗಿದೆ.

Advertisement

ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next