ಬಸವಕಲ್ಯಾಣ: ಇಡೀ ವಿಶ್ವದ ವ್ಯಾಪಾರ, ವಹಿವಾಟು ಹಾಗೂ ಮನುಷ್ಯನ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದ ಕೊರೊನಾ ವೈರಸ್ ಸಾರಿಗೆ ಸಂಸ್ಥೆಯ ಆದಾಯಕ್ಕೂ ಹೊಡೆತ ಕೊಟ್ಟಿದೆ. ಬಸವಕಲ್ಯಾಣ ಎನ್‌ಇಕೆಆರ್‌ಟಿಸಿ ಘಟಕದದಿಂದ ಬೆಂಗಳೂರು, ಹುಬ್ಬಳ್ಳಿ ಹಾಗೂ ಮಹಾರಾಷ್ಟ್ರ ಸೇರಿದಂತೆ ತಾಲೂಕಿನಾದ್ಯಂತ 100ಕ್ಕೂ ಹೆಚ್ಚು ಕಡೆ ಬಸ್ಸ್ ಸಂಚರಿಸುವುದರಿಂದ ನಿತ್ಯ 9ರಿಂದ 10 ಲಕ್ಷ ರೂ. ವರೆಗೆ ಆದಾಯ ಸಂಗ್ರಹವಾಗುತ್ತಿತ್ತು. ಆದರೆ ಒಂದು ವಾರದಿಂದ ಸಂಸ್ಥೆ ನಷ್ಟದಲ್ಲಿ ಸಾಗಿದೆ.
ಕೊರೊನಾ ವೈರಸ್ ಪರಿಣಾಮದಿಂದ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದ್ದು, ಒಂದು ವಾರದಿಂದ ಎನ್‌ಇಕೆಆರ್‌ಟಿಸಿ ಘಟಕಕ್ಕೆ 6ರಿಂದ 7 ಲಕ್ಷ ರೂ. ಮಾತ್ರ ಆದಾಯ ಬರುತ್ತಿದ್ದು, ಈವರೆಗೆ ಸಂಸ್ಥೆಗೆ ಅಂದಾಜು 20 ಲಕ್ಷ ರೂ.ಗಿಂತ ಹೆಚ್ಚು ಆದಅಯ ನಷ್ಟವಾಗಿದೆ ಎಂದು ಸಂಸ್ಥೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಎನ್‌ಇಕೆಆರ್‌ಟಿಸಿ ಘಟಕದ ಹಿತದೃಷ್ಟಿಯಿಂದ ಬಸವಕಲ್ಯಾಣ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಂಚರಿಸುವ 15ರಿಂದ 20 ಮಾರ್ಗಗಳನ್ನು ಬಂದ್ ಮಾಡಿ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಸ್ ಓಡಿಸಲಾಗುತ್ತಿದೆ. ಪ್ರಯಾಣಿಕರ ಕೊರತೆಯಿಂದ ಈಗಾಗಲೇ ಬೆಂಗಳೂರು, ಹುಬ್ಬಳ್ಳಿಗೆ ಸಂಚರಿಸುವ ಬಸ್ ಸ್ಥಗಿತಗೊಳಿಸಲಾಗಿದೆ ಎಂದು ಎನ್ ಇಕೆಆರ್‌ಟಿಸಿ ಘಟಕ ವ್ಯವಸ್ಥಾಪಕ ರವೀಂದ್ರ ಕೆ. ಬಾರಿಭಾಯಿ ತಿಳಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗದಲ್ಲಿ ತುರ್ತು ಪರಿಸ್ಥಿತಿ ಹಾಗೂ ಸಮಸ್ಯೆ ಎದುರಾದಾಗ ಖಾಸಗಿ ವಾಹನಗಳು ಅಥವಾ ಬೈಕ್‌ನಲ್ಲಿ ನಗರಕ್ಕೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ಕೊರೊನಾ ವೈರಸ್ ಜನಜೀವನ ಮೇಲೆ ಪರಿಣಾಮ ಬೀರುವುದರ ಜೊತೆಗೆ ವ್ಯವಹಾರ, ವ್ಯಾಪಾರಕ್ಕೂ ದೊಡ್ಡ ಹೊಡತೆ ಕೊಟ್ಟಿದೆ.
ಪ್ರಯಾಣಿಕರ ಕೊರತೆಯಿಂದ 12 ಮಾರ್ಗಗಳಲ್ಲಿ ನಿತ್ಯ ಸಂಚರಿಸುವ ಬಸ್‌ಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. 30 ಜನ ಸಿಬ್ಬಂದಿಗೆ ರಜೆ ನೀಡಲಾಗಿದ್ದು, ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ರವೀಂದ್ರ ಕೆ.ಬಾರಿಭಾಯಿ,
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಬಸವಕಲ್ಯಾಣ
ವೀರಾರೆಡ್ಡಿ ಆರ್.ಎಸ್.