Advertisement

`ವಚನ’ಕೊಟ್ಟ ಶರಣರು ಪೂಜ್ಯನೀಯರು

04:53 PM Oct 06, 2019 | Naveen |

ಬಸವಕಲ್ಯಾಣ: 12ನೇ ಶತಮಾನಕ್ಕಿಂತ ಮುಂಚೆ ಕನ್ನಡ ಭಾಷೆಯಲ್ಲಿ ಕವಿಗಳು ಸಾಹಿತ್ಯ ರಚನೆ ಮಾಡಿದ್ದರೂ ಅವುಗಳನ್ನು ಜನಸಾಮನ್ಯರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಆದರೆ ಶರಣರು ಜನಸಾಮಾನ್ಯರಿಗೂ ಸರಳವಾಗಿ ಅರ್ಥವಾಗುವ ರೀತಿಯ ಭಾಷೆಯಲ್ಲಿ ವಚನಗಳನ್ನು ರಚಿಸಿದ್ದು, ಅವುಗಳನ್ನು ಅರ್ಥ ಮಾಡಿಕೊಂಡರೆ ಅವರನ್ನು ಪೂಜಿಸುವಂತಾಗುತ್ತದೆ ಎಂದು ಡಾ|ವಾಸು ಹೇಳಿದರು.

Advertisement

ನಗರದ ಹರಳಯ್ಯ ಗವಿಯಲ್ಲಿ ಶರಣ ವಿಜಯೋತ್ಸವ, ನಾಡ ಹಬ್ಬ, ಹುತಾತ್ಮ ದಿನಾಚರಣೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ “ಮಕ್ಕಳ ಅನುಭವ ಮಂಟಪ’ (ಸಂಸತ್ತು) ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ವಚನ ಸಾಹಿತ್ಯ ಕನ್ನಡ ಭಾಷೆ ಮಾತನಾಡುವ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿದೆ. ಅನುಭವ ಮಂಟಪದಿಂದ ಸಮಾಜದ ಬೇರೆ ಬೇರೆ ಜನರಿಗೆ ತಮ್ಮ ವಿಚಾರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ. ಮೇಲು-ಕೀಳಿಲ್ಲದಂತೆ ಸರ್ವರಿಗೂ ಸಮಾನ ಅವಕಾಶ ನೀಡುವುದು ಪ್ರಜಾಪ್ರಭುತ್ವದ ಮೌಲ್ಯವಾಗಿದೆ. ಇಂಥ ಮೌಲ್ಯಗಳು ಕಲ್ಯಾಣ ನೆಲದಿಂದ ಪ್ರಾರಂಭವಾಗಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹರಳಯ್ಯ ಗವಿಯ ಡಾ|ಗಂಗಾಂಬಿಕಾ ಅಕ್ಕ ಮಾತನಾಡಿ, ದೇಶ ಹಾಗೂ ಜನಾಂಗ ಮುಂದುವರಿಯಬೇಕಾದರೆ ಸಂಸತ್ತು ಮೂಲಕ ರಚನೆಯಾಗುವ ಕಾನೂನುಗಳು ಅವಶ್ಯಕ. ಶರಣರ ಸರ್ವಸಮಾನತೆಯ ಪ್ರಜಾಪ್ರಭುತ್ವವಾದಿ ಸಮಾಜ 21ನೇ ಶತಮಾನದ ನಮ್ಮ ಸಮಾಜ ಹೇಗಿರಬೇಕು ಎಂಬುದಕ್ಕೆ ಮುನ್ಸೂಚನೆಯಾಗಿದೆ ಎಂದರು.

ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾದ ವಿಚಾರಗಳನ್ನು ವಚನಕಾರರೆಲ್ಲರೂ ಹೊಂದಿದ್ದರು ಎಂಬುದಕ್ಕೆ ಅವರ ಚಳವಳಿ ಮತ್ತು ವಚನಗಳೇ ಸಾಕ್ಷಿಯಾಗಿವೆ. ಕಲ್ಯಾಣ ರಾಜ್ಯದ ಚಿಂತನೆಗಾಗಿ ಅವಶ್ಯಕವಾದ ಅನುಭವ ಮಂಟಪ ಎಂಬುದು ವಿಶಿಷ್ಟವಾದ ಸಮಾಜೋ-ಧಾರ್ಮಿಕ ಸಂಸತ್ತು ಆಗಿದೆ ಎಂದು ಹೇಳಿದರು.

Advertisement

ಪ್ರಥಮ ದರ್ಜೆಗುತ್ತಿಗೆದಾರ ಗುರುನಾಥ ಕೊಳ್ಳೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಅವರಿಗೆ ಉತ್ತಮ ಸಂಸ್ಕಾರ
ನೀಡಿದರೆ ಸುಂದರ ಸಮಾಜ ಹಾಗೂ ದೇಶ ಕಟ್ಟಲು ಸಾಧ್ಯ. ಮಕ್ಕಳ ಮನಸ್ಸು ಪರಿಶುದ್ಧ ಅವರ ಮನದಲ್ಲಿ ಏನು ಬಿತ್ತುತ್ತೇವೆಯೋ ಅವರು ಮುಂದೆ ಹಾಗೇಯೆ ಬೆಳೆಯುತ್ತಾರೆ. ಅದಕ್ಕಾಗಿ ಅವರಿಗೆ ಉತ್ತಮ ಸಂಸ್ಕಾರ ನೀಡುವುದು ಬಹಳ ಮುಖ್ಯವಾಗಿದೆ ಎಂದು ಸಲಹೆ ನೀಡಿದರು. ಅನುಭವ ಮಂಟಪದ ಕಾರ್ಯದರ್ಶಿ ಡಾ|ಎಸ್‌.ಬಿ.ದುರ್ಗೆ ಅಧ್ಯಕ್ಷತೆ ವಹಿಸಿದ್ದರು. ಅಶೋಕ ನಾಗರಾಳೆ, ಶರಣಬಸಪ್ಪ ಬಿರಾದಾರ, ಜಿಪಂ ಮಾಜಿ ಸದಸ್ಯ ಸಂಜೀವಕುಮಾರ ಕಾಳೇಕರ, ವಿರೂಪಾಕ್ಷಗಾದಗಿ, ವೀರಶೆಟ್ಟಿ ಮಲಶೆಟ್ಟಿ, ಬಸವರಾಜ ಕೋರಕೆ, ಸಂಗಮೇಶ ಅವಸೆ, ಉಮೇಶ ಕುದರೆ, ಸಿದ್ದು ಮೂಲಗೆ, ರಮೇಶ ಕೋಳಾರ, ದೇವೇಂದ್ರ ಕಾದೆಪೂರೆ ಸ್ವಾಗತಿಸಿದರು. ದೇವೇಂದ್ರ ಬರಗಾಲೆ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಸಂಸತ್ತು ಮಾದರಿಯಲ್ಲಿ ಆಯಾ ಖಾತೆಯ ಮಂತ್ರಿಗಳು ವಿರೋಧ ಪಕ್ಷದವರಿಗೆ ವಚನಗಳ ಮೂಲಕ ಉತ್ತರ ನೀಡಿ ಜನರಿಗೆ ಅನುಭವ ಮಂಟಪ ನೆನಪಿಗೆ ತಂದುಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next