Advertisement
ತಾಲೂಕಿನ ವ್ಯಾಪ್ತಿಗೆ ಒಳಪಡುವ ಅಂಗನವಾಡಿ ಕೇಂದ್ರಗಳಿಗೆ ಅಡುಣೆ ಕೋಣೆ, ವಿದ್ಯುತ್, ಸಂಪರ್ಕ, ಫ್ಯಾನ್, ಶೌಚಾಲಯ ಹಾಗೂ ನೀರಿನ ವ್ಯವಸ್ಥೆ, ಕೈತೋಟ ಸೇರಿದಂತೆ ಪ್ರತಿಯೊಂದು ಸೌಲಭ್ಯಗಳು ಕಲ್ಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಕಾರ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಬಹುತೇಕ ಅಂಗನವಾಡಿ ಕೇಂದ್ರಗಳು ಕನಿಷ್ಟ ಸೌಲಭ್ಯಗಳಿಂದ ವಂಚಿತವಾಗಿದ್ದು, ಕೆಲವು ಸಂರಕ್ಷಣೆ ಇಲ್ಲದೇ ಸಂಪೂರ್ಣವಾಗಿ ಹಾಳಾಗಿವೆ. ಮತ್ತೆ ಕೆಲವುಕಡೆ ಸ್ವ ಆಸಕ್ತಿಯಿಂದ ಅಂಗನವಾಡಿ ಕೇಂದ್ರಗಳನ್ನು ಇತರರಿಗೆ ಮಾದರಿ ಆಗುವಂತೆ ಆಕರ್ಷಕವಾಗಿ ನಿರ್ಮಿಸಲಾಗಿದೆ.
Related Articles
Advertisement
240 ಅಂಗನವಾಡಿ ಕೇಂದ್ರಗಲ್ಲಿ ಪ್ರತ್ಯೇಕ ಅಡುಗೆ ಕೋಣೆ ವ್ಯವಸ್ಥೆ ಇಲ್ಲ. ಹೀಗಾಗಿ ಮಕ್ಕಳಿಗೆ ಕಲಿಸುವ ಕೋಣೆಗಳಲ್ಲಿ ಅಥವಾ ಹೊರಗಡೆ ಮಕ್ಕಳಿಗಾಗಿ ಅಡುಗೆ ಮಾಡುವ ಅನಿವಾರ್ಯತೆ ಇದೆ. ಆದರೂ ಅಡುಗೆ ಕೋಣೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲು ಮುಂದಾಗುತ್ತಿಲ್ಲ ಎಂಬುದು ಸಿಬ್ಬಂದಿಗಳ ಆರೋಪವಾಗಿದೆ.
ಕೇಂದ್ರ ಸರ್ಕಾರ ದೇಶವನ್ನು ಬಯಲು ಬಹಿರ್ದೆಶೆ ಮುಕ್ತವಾಗಿಸಲು ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಆದರೆ ಅಂಗನವಾಡಿ ಕೇಂದ್ರದ ಸಿಬ್ಬಂದಿ ಶೌಚಕ್ಕಾಗಿ ಬಯಲು ಪ್ರದೇಶವನ್ನೆ ಅವಲಂಬಿಸಿದ್ದಾರೆ.
411 ಅಂಗನವಾಡಿ ಕೇಂದ್ರಗಳ ಪೈಕಿ ಕೇವಲ 54 ಕೇಂದ್ರಗಳಲ್ಲಿ ಮಾತ್ರ ಶೌಚಾಲಯ ವ್ಯವಸ್ಥೆ ಇರುವುದು ಶೋಚನೀಯ ಸಂಗತಿಯಾಗಿದೆ. 140 ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದ ಅಂಗನವಾಡಿ ಕೇಂದ್ರಗಳಿಗೆ ಬಾವಿ ಹಾಗೂ ಕೊಳವೆ ಬಾವಿಗಳ ನೀರೆ ಗತಿಯಾಗಿದೆ. ಇದರಿಂದ ಮಕ್ಕಳಿಗೆ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಬರಾಜು ಮಾಡುವುದು ಅವಶ್ಯವಾಗಿದೆ.
ಅಂಗನವಾಡಿ ಕೇಂದ್ರಗಳಿಗೆ ಕಲ್ಪಿಸಲಾದ ವಿದ್ಯುತ್ ಸಂಪರ್ಕಕ್ಕೆ ಸಂಬಂಧ ಪಟ್ಟ ಇಲಾಖೆ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಇದರಿಂದ ವಿದ್ಯುತ್ ತಂತಿಗಳು ಅಲ್ಲಲ್ಲಿ ಜೋತು ಬಿದ್ದಿವೆ ಹಾಗೂ ಬೋರ್ಡ್ ಸಂಪೂರ್ಣವಾಗಿ ಹಾಳಾಗಿವೆ. ಹೀಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಅಳವಡಿಸಲಾದ ಫ್ಯಾನ್ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿವೆ. ಜಿಪಂ ರಾಜೇಶ್ವರ ಕ್ಷೇತ್ರದಲ್ಲಿ ಅಂಗನವಾಡಿ ಕೇಂದ್ರಗಳನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ.
ಅಂಗನವಾಡಿ ಕೇಂದ್ರಗಳ ನವೀಕರಣಕ್ಕಾಗಿ ಜಿಪಂನಿಂದ ಬಂದ ಅನುದಾನವನ್ನು ರಾಜೇಶ್ವರ ಕ್ಷೇತ್ರದಲ್ಲಿ ಜಿಪಂ ಸದಸ್ಯ ಗುಂಡುರೆಡ್ಡಿ ಕಮಲಾಪೂರೆ ಅವರ ಆಸಕ್ತಿಯಿಂದ, ಮಕ್ಕಳನ್ನು ಅಂಗನವಾಡಿ ಕೇಂದ್ರದ ಕಡೆ ಸೇಳೆಯಲು ರೈಲ್ವೆ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇದು ಇತರರಿಗೆ ಮಾದರಿಯಾಗಿವೆ.
ಅಂಗನವಾಡಿ ಕೇಂದ್ರಗಳ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಾಗ ಅಥವಾ ಸಾರ್ವಜನಿಕರಿಂದ ದೂರು ಬಂದಾಗ ನಾವು ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತರುವುದರ ಜೊತೆಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಸರ್ಕಾರಿ ಜಾಗವಿಲ್ಲದ ಕಾರಣ ನೂತನ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಆಗುತ್ತಿಲ್ಲ. ಹೀಗಾಗಿ ಹಂತ-ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು.ಶಾರದಾ ಎನ್. ಕಲಮಲ್ಕರ್
ಸಿಡಿಪಿಒ, ಬಸವಕಲ್ಯಾಣ