ಬಸವಕಲ್ಯಾಣ: ಕೋವಿಡ್ ವೈರಸ್ ನಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಇರುವುದರಿಂದ ಏ.26ರಿಂದ ಮೂರು ದಿನ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಬಿ.ನಾರಾಯಣರಾವ್ ಹೇಳಿದರು.
ಬಸವ ಜಯಂತಿ ಅಂಗವಾಗಿ ನಗರದ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಯಾವುದೇ ಸಭೆ ಹಾಗೂ ಉತ್ಸವಗಳು ವಿಜೃಂಭಣೆಯಿಂದ ಆಚರಿಸುವಂತಿಲ್ಲ. ಹೀಗಾಗಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿ ಅಧ್ಯಕ್ಷರು, ಸದಸ್ಯರು ಸೇರಿದಂತೆ 30 ಜನರಿಗೆ ಮಾತ್ರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಅಂದು ಬೆಳಗ್ಗೆ 7:00ಕ್ಕೆ ನಗರದ ಬಸವೇಶ್ವರ ದೇವಸ್ಥಾನದಲ್ಲಿ ಪೂಜಾ ವಿಧಾನ ಮುಗಿಸಬೇಕು. ಸಂಜೆ 20 ಜನ ಮಹಿಳೆಯರ ಸಮ್ಮುಖದಲ್ಲಿ ತೊಟ್ಟಿಲು ಕಾರ್ಯಕ್ರಮ ನೆರವೇರಿಸಬೇಕು ಮತ್ತು ಏ.28ರಂದು 30 ಜನರ ಸಮ್ಮುಖದಲ್ಲಿ ರಥಕ್ಕೆ ಪೂಜೆ ಸಲ್ಲಿಸಿ ಕೈ ಮುಗಿದು ಬರಬೇಕು ವಿನಹ ಯಾವುದೇ ಸಮಾರಂಭ ನಡೆಸುವಂತಿಲ್ಲ ಎಂದು ಹೇಳಿದರು.
ಬಸವಕಲ್ಯಾಣ ಸಹಾಯಕ ಆಯುಕ್ತ ಭಂವರ್‌ಸಿಂಗ್ ಮೀನಾ ಮಾತನಾಡಿ, ಬಸವಕಲ್ಯಾಣ ನಗರದಲ್ಲಿ ಈಗಾಗಲೇ ಕೊರೊನಾ ಸೋಂಕು ದೃಢ ಪಟ್ಟಿರುರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಇನ್ನೂ ವರದಿ ಬಾಕಿ ಉಳಿದುಕೊಂಡಿವೆ. ಆದ್ದರಿಂದ ತಾಲೂಕು ಆಡಳಿತ ನೀಡಿರುವ ಆದೇಶದಂತೆ ಜಯಂತಿ ಆಚರಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ, ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಅನೀಲಕುಮಾರ ರಗಟೆ, ಸಿಪಿಐ ನ್ಯಾಮೆನಾಡಗೌಡ, ಮಲ್ಲಿಕಾರ್ಜುನ ಯಾತನೂರ, ಪಿಎಸ್‌ಐ ಸುನೀಲಕುಮಾರ ಇದ್ದರು.