Advertisement

ತಳ ಕಾಣುತ್ತಿದೆ ಮುಲ್ಲಾಮಾರಿ

11:23 AM Jul 24, 2019 | Team Udayavani |

ಬಸವಕಲ್ಯಾಣ: ಪ್ರಸಕ್ತ ವರ್ಷ ಮುಂಗಾರು ಮಳೆ ಆರಂಭವಾಗಿ ಎರಡು ತಿಂಗಳು ಕಳೆಯುತ್ತ ಬಂದರೂ ತಾಲೂಕಿನಲ್ಲಿ ನಿರೀಕ್ಷೆಯಷ್ಟು ಮಳೆ ಸುರಿದಿಲ್ಲ. ಹೀಗಾಗಿ ಬಸವಕಲ್ಯಾಣ ತಾಲೂಕಿನ ಖೇರ್ಡಾ (ಬಿ) ಗ್ರಾಮದ ಮುಲ್ಲಾಮಾರಿ ಜಲಾಶಯ ನೀರಿನ ಮಟ್ಟ ಇಳಿಮುಖವಾಗುತ್ತಿದೆ.

Advertisement

ಜಲಾಶಯ 1ಟಿಎಂಸಿ ನೀರು ಶೇಖರಣೆ ಸಾಮರ್ಥ್ಯ ಹೊಂದಿರುವ ಈ ಜಲಾಶಯವು ಹುಮನಾಬಾದ ತಾಲೂಕಿನ ಹಳ್ಳಿಖೇಡ (ಕೆ), ಧನ್ನೂರ್‌ (ಆರ್‌) ಹಾಗೂ ಕಲಬುರಗಿ ಜಿಲ್ಲೆ ಸೊಂತ, ಚಿತ್ತಕೋಟಾ, ಗೊಬ್ಬರವಾಡಿ, ಕಿಣ್ಣಿ ಸೇರಿದಂತೆ ವಿವಿಧ ಗ್ರಾಮಗಳ ಜನರಿಗೆ ಕುಡಿಯಲು ಹಾಗೂ ಜಮೀನುಗಳಿಗೆ ನೀರು ಕೊಡುವ ಸಂಜೀವಿನಿಯಾಗಿತ್ತು. ಆದರೆ ಮಳೆ ಕೊರತೆಯಿಂದ ಜಲಾಶಯಕ್ಕೆ ಹೊಸ ನೀರು ಹರಿದು ಬಂದಿಲ್ಲ. ಹೀಗಾಗಿ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಹಾಗಾಗಿ ಕುಡಿಯಲು ಮತ್ತು ಜಮೀನುಗಳಿಗೆ ನೀರು ಹರಿಸುವುದನ್ನು ಕೂಡ ಬಂದ್‌ ಮಾಡಲಾಗಿದೆ.

ಜಲಾಶಯದಲ್ಲಿ ಸದ್ಯ 0.142 ಟಿಎಂಸಿ ನೀರಿದ್ದು, ತಳಮಟ್ಟದ ನೀರು 0.082 ಹಾಗೂ ಒಟ್ಟು 0.224 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಸದ್ಯ ಒಳಹರಿವು ಮತ್ತು ಹೊರ ಹರಿವೂ ಇಲ್ಲ. ಆರ್‌ಬಿಸಿ 0.0. ಮತ್ತು ಎಲ್ಬಿಸಿ 0.00 ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಲಾಶಯ ಮೇಲ್ದಂಡೆ ಯೋಜನೆಯ ವೇಸ್ಟ್‌ವೇರ್‌ ನಾಲೆಯಿಂದ, ಎಡ ಮತ್ತು ಬಲದಂಡೆ ಕಾಲುವೆಯಿಂದ ನೀರು ಹರಿಯುವ ಬದಲು, ಹನಿ ನೀರಿಲ್ಲದೆ ನಾಲೆಗಳು ಮರಭೂಮಿಯಂತಾಗಿ ಬಿರುಕು ಬಿಟ್ಟಿದ್ದು, ಸುತ್ತಮುತ್ತಲಿನ ಪ್ರದೇಶ ಬಿಕೋ ಎನ್ನುತ್ತಿದೆ.

ಕೆಲ ವರ್ಷಗಳಿಂದ ಮಳೆ ಕೈ ಕೊಡುತ್ತಿದ್ದು, ಈ ವರ್ಷವಾದರೂ ಉತ್ತಮ ಮಳೆ ಆಗುತ್ತದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತು ಸಾರ್ವಜನಿಕರಿಗೆ ಚಿಂತೆಯಲ್ಲಿಯೇ ಕಾಲ ಕಳೆಯುವಂತೆ ಮಾಡಿದೆ.

Advertisement

ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ ಹಳ್ಳ-ಕೊಳ್ಳಗಳಲ್ಲಿಯೂ ನೀರಿಲ್ಲ. ಕೊಳವೆ ಬಾವಿ ಮತ್ತು ತೆರೆದ ಬಾವಿಗಳಿಗೂ ಹೊಸ ನೀರು ಬಂದಿಲ್ಲ. ಇನ್ನೂ ಕೆಲ ದಿನಗಳಲ್ಲಿ ಮಳೆ ಬಾರದಿದ್ದರೆ ಪರಿಸ್ಥಿತಿ ಇನ್ನೂ ಹದಗೆಡಲಿದೆ.

ಮೇ ತಿಂಗಳವರೆಗೆ ಮುಲ್ಲಾಮಾರಿ ಜಲಾಶಯ ನೀರನ್ನು ಬಳಕೆ ಮತ್ತು ಜಾನುವಾರುಗಳಿಗಾಗಿ ಬಿಡಲಾಗುತ್ತಿತ್ತು. ಮಳೆಗಾಲ ಪ್ರಾರಂಭದವಾದ ನಂತರ ನೀರು ಹರಿಸುವುದನ್ನು ಬಂದ್‌ ಮಾಡಲಾಯಿತು. ಆದರೆ ಮಳೆ ಕೊರತೆಯಿಂದ ಜಲಾಶಯದಲ್ಲಿ ನಿರೀಕ್ಷೆಗೆ ತಕ್ಕಂತೆ ನೀರು ಸಂಗ್ರಹವಾಗಿಲ್ಲ. ಇದರಿಂದ ರೈತರು ಮಳೆ ನೀರಿನ ಮೇಲೆಯೇ ಅವಲಂಬನೆಯಾಗುವ ಸ್ಥಿತಿಯಿದೆ.
•ಲಿಂಗರಾಜ ಪಾಟೀಲ,
ಮುಲ್ಲಾಮಾರಿ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ, ಖೇರ್ಡಾ(ಬಿ)

Advertisement

Udayavani is now on Telegram. Click here to join our channel and stay updated with the latest news.

Next