Advertisement

ರಾಜ್ಯದಲ್ಲಿದೆ 95 ಲಕ್ಷ ರೆಡ್ಡಿ ಜನ ಸಂಖ್ಯೆ

01:05 PM Jan 20, 2020 | Naveen |

ಬಸವಕಲ್ಯಾಣ: ಆಂಧ್ರ ಪ್ರದೇಶದಲ್ಲಿ 1.10 ಕೋಟಿ ರೆಡ್ಡಿ ಜನ ಇದ್ದರು. ಆದರೆ ತೆಲಂಗಾಣ ಮತ್ತು ಆಂಧ್ರಪ್ರದೇಶ ಬೇರೆ-ಬೇರೆ ಆದ ಮೇಲೆ ಅಲ್ಲಿ ಸಂಖ್ಯೆ ಕಡಿಮೆ ಆಗಿದ್ದು ಕರ್ನಾಟಕದಲ್ಲಿ ಸದ್ಯ 95 ಲಕ್ಷ ಜನಸಂಖ್ಯೆ ಇದೆ ಎಂದು ಮಾಜಿ ಸಚಿವ ಗಾಲಿ ಜರ್ನಾಧನರೆಡ್ಡಿ ಹೇಳಿದರು.

Advertisement

ನಗರದ ಮಾತಾ ಮಹಾದೇವಿ ಕಲ್ಯಾಣ ಮಂಟಪದಲ್ಲಿ ರವಿವಾರ ಜೈ ಭಾರತ ಮಾತಾ ಸೇವಾ ಸಮಿತಿ ಹಾಗೂ ಬೆಂಗಳೂರು ಹೇಮ-ವೇಮ ರೆಡ್ಡಿ ಜನ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ತತ್ವಜ್ಞಾನಿ, ಮಹಾಯೋಗಿ ವೇಮನ ಅವರ 608ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಸಮಾಜ ಬಾಂಧವರು ಒಗ್ಗಟ್ಟಿ ನಿಂದ ಭಾಗವಹಿಸಿದ ಫಲದಿಂದ ಇಂದು ಸರ್ಕಾರವೇ ಹೇಮ-ವೇಮ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ ಎಂದು ಅವರು, ಸಾರ್ವಜನಿಕವಾಗಿ ಹೊರ ಬರುವ ಕಾರ್ಯಕ್ರಮವನ್ನು ಬಸವಕಲ್ಯಾಣ ಶರಣರ ನಾಡಿನಿಂದ ಪ್ರಾರಂಭ ಮಾಡುತ್ತೇನೆ ಎಂದು ತಿಳಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹುಮನಾಬಾದ ಅಥವಾ ಬಸವಕಲ್ಯಾಣದಿಂದ ಗುಂಡುರೆಡ್ಡಿ ಅವರಿಗೆ ಟಿಕೆಟ್‌ ನೀಡುವಂತೆ ಹೇಳಿದ್ದೆ. ಆದರೆ ಹಿರಿಯರ ಮಾತಿಗೆ ಬೆಲೆ ಕೊಟ್ಟಿದ್ದರಿಂದ ಅದು ತಪ್ಪಿ ಹೋಗಿದೆ. ಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಗುಂಡುರೆಡ್ಡಿ ಅವರಿಗೆ ಒಳ್ಳೆಯ ಸಮಯ ಬರಲಿದೆ ಎಂದು ಭವಿಷ್ಯ ನುಡಿದರು.

12 ವರ್ಷಗಳ ಹಿಂದೆ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದಕ್ಕೆ ನಾನು ಪ್ರಮುಖ ಕಾರಣವಾಗಿದ್ದೆ ಎಂಬ ಹೆಮ್ಮೆ ನನಗಿದೆ. ಆದರೆ ಕೆಲ ಸಮಸ್ಯೆಗಳಿಂದ ರಾಜಕೀಯದಿಂದ ದೂರ ಉಳಿದಿದ್ದೆನೆ ವಿನಃ ಯಾರ ಭಯದಿಂದ ಅಲ್ಲ. ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿ ದಂಡೆಯ ಮೇಲೆ 300 ಎಕರೆ ಭೂಮಿಯಲ್ಲಿ ಶಿವನ ಹಾಗೂ ಹೇಮ-ವೇಮನ ಮೂರ್ತಿ ಸ್ಥಾಪನೆ ಮಾಡಿ, ಎಲ್ಲ ಜಾತಿಯ ಮಕ್ಕಳಿಗೆ ಶಿಕ್ಷಣ ನೀಡುವ ಕನಸು ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.

Advertisement

ನೇತೃತ್ವ ವಹಿಸಿದ್ದ ಶ್ರೀಕ್ಷೇತ್ರ ಹೆಡಗಿಮುದ್ರಾ ಶ್ರೀ ಶಾಂತಮಲ್ಲಿಕಾರ್ಜುನ ಪಂಡಿತರಾಧ್ಯ ಶಿವಾಚಾರ್ಯರು ಹಾಗೂ ತ್ರಿಪೂರಾಂತ ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಮಾಜಿ ಸಚಿವ ಜನಾರ್ಧನರೆಡ್ಡಿ ಅವರು ಕಾರ್ಯಕ್ರಮಕ್ಕೆ ಬಂದಿರುವುದು ಖುಷಿ ತಂದಿದೆ ಹಾಗೂ ಸಮಾಜ ಬಾಂಧವರು ಹೇಮ-ವೇಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಬಸವಕಲ್ಯಾಣದಲ್ಲಿ ಇಂತಹ ಐತಿಹಾಸಿಕ ಕಾರ್ಯಕ್ರಮ ನಡೆಸಿದ ಹಿರಿಮೆ ಇಲ್ಲಿನ ಜನತೆಗೆ ಹಾಗೂ ಜಿಪಂ ಸದಸ್ಯ ಗುಂಡುರೆಡ್ಡಿ ಅವರಿಗೆ ಸಲ್ಲುತ್ತದೆ. ಸಮಾಜ ಸಂಘಟನೆ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆದುಕೊಳ್ಳುವ ಸಂಘಟನೆ ಆಗಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ನಮ್ಮ ಪರಂಪರೆಯಿಂದ ಬಂದ ಕೃಷಿ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕ ನರಸಿಂಗರೆಡ್ಡಿ ಗಂದ್ಲೇಗಾಂವ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ವಿವಿಧ ಬೇಡಿಕೆಗಳ ಕುರಿತು ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಅವರ ಗಮನಕ್ಕೆ ತಂದರು. ನಿರಗೂಡಿ ಶ್ರೀ ಹವಾ ಮಲ್ಲಿನಾಥ ಮುತ್ಯಾ ಹಾಗೂ ರೇಕುಳಗಿ ಎನ್‌.ಬಿ.ರೆಡ್ಡಿ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ಜೈ ಭಾರತ ಮಾತಾ ಸೇವಾ ಸಮಿತಿ ಹಾಗೂ ಕಲ್ಯಾಣ ಕರ್ನಾಟಕ ಹೇಮ ವೇಮ ರೆಡ್ಡಿ ಜನ ಸಂಘದ ಅಧ್ಯಕ್ಷ ಗುಂಡುರೆಡ್ಡಿ ಕಮಲಾಪೂರೆ ಅಧ್ಯಕ್ಷತೆ ವಹಿಸಿದ್ದರು.

ಹೇಮ-ವೇಮ ರೆಡ್ಡಿ ಜನಸಂಘದ ಕಾರ್ಯಾಧ್ಯಕ್ಷ ಲಲ್ಲೇಶರೆಡ್ಡಿ, ಜಿಪಂ ಸದಸ್ಯ ರವೀಂದ್ರರೆಡ್ಡಿ, ರಾಜರೆಡ್ಡಿ ಶಾಬಾದಿ, ಮಾಣಿಕರೆಡ್ಡಿ, ಸಿ.ಎಲ್‌.ರೆಡ್ಡಿ, ರವಿರೆಡ್ಡಿ ಸೇಡೋಳ, ಬ್ರಹ್ಮಾರೆಡ್ಡಿ, ನರಸಾರೆಡ್ಡಿ, ರಾಮಲಿಂಗಾರೆಡ್ಡಿ ಗದ್ಲೇಗಾಂವ್‌, ಶರಣರೆಡ್ಡಿ, ಮನೋಹರರೆಡ್ಡಿ, ನಾರಾಯಣರೆಡ್ಡಿ, ಸಂಜುರೆಡ್ಡಿ, ಕೃಷ್ಣಾರೆಡ್ಡಿ, ಮಂಜುನಾಥ ರೆಡ್ಡಿ, ಬ್ಯಾಂಕ್‌ರೆಡ್ಡಿ, ಶ್ರೀನಿವಾಸರೆಡ್ಡಿ ಮಾಲಿಪಾಟೀಲ, ಶ್ರೀನಿವಾಸರೆಡ್ಡಿ ಹಣಮಂತವಾಡಿ ಹಾಗೂ ಸಾವಿರಾರು ಜನ ಸಮಾಜ ಬಾಂಧವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next