ಬಸವಕಲ್ಯಾಣ: ಸಣ್ಣ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀಳುವಂತಹ ಪಬ್ಜಿ ಗೇಮ್ಸ್ ಮತ್ತು ಅನ ಧಿಕೃತ ವೆಬ್‌ಸೈಟ್ ನೋಡಲು ಆಸ್ಪದ ನೀಡುತ್ತಿರುವ ನಗರದ ಶ್ರೀನಿಧಿ ಕಂಪ್ಯೂಟರ್ ಕೇಂದ್ರದ ಮೇಲೆ ಬುಧವಾರ ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ ಹಾಗೂ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು.
ವಿವಿಧ ಪ್ರಾಥಮಿಕ ಶಾಲೆ ಮಕ್ಕಳು ಗುಂಪು-ಗುಂಪಾಗಿ ಕುಳಿತುಕೊಂಡು ಪಬ್ಜಿಗೇಮ್ ಆಡುತ್ತಿರುವುದು ಗಮನಿಸಿದರು. ಬಳಿಕ ಎಲ್ಲ ಮಕ್ಕಳನ್ನು ಹೊರಕ್ಕೆ ಹಾಕಿಸಿದರು. ನಿಮ್ಮ ಮಕ್ಕಳಿಗೆ ಇದೇ ರೀತಿ ಆಟ ಕಲಿಸಿ ಕೋಡ್ತಿರಾ ಎಂದು ಅಂಗಡಿ ಮಾಲೀಕನನ್ನು ಪ್ರಶ್ನಿಸಿದರು. ಇದರಿಂದ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ. ಮಕ್ಕಳು ಮುಂದೆ ಯಾವ ಮಟ್ಟಕ್ಕೆ ಹೋಗುತ್ತಾರೆ ಎಂಬುದು ನಿಮಗೆ ಗೊತ್ತಾ ಎಂದು ತರಾಟೆಗೆ ತೆಗೆದುಕೊಂಡರು.
ಕಂಪ್ಯೂಟರ್ ಸೆಂಟರ್‌ನಲ್ಲಿ 10 ವರ್ಷದೊಳಗಿನ ಮಕ್ಕಳು ಬಂದರೆ, ಪಠ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಮಾತ್ರ ನೋಡಲು ಅವಕಾಶ ಮಾಡಿಕೊಡಬೇಕು. ಆದರೆ ಏನಾದರೂ ಮಾಡಿಕೊಳ್ಳಲಿ ಎಂದು ಬಿಟ್ಟರೆ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಎಚ್ಚರಿಸಿದರು. ನಂತರ ಕಂಪ್ಯೂಟರ್ ಅಂಗಡಿಗೆ ಬೀಗ ಹಾಕಿದರು. ಪೊಲೀಸ್ ಹಾಗೂ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು.
ಸಾಮಾಜಿಕ ಜಾಲತಾಣಗಳಿಂದ ಮತ್ತು ಮೊಬೈಲ್ ಹಾವಳಿಯಿಂದ 10 ವರ್ಷದೊಳಗಿನ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಮಕ್ಕಳು ಕಂಪ್ಯೂಟರ್ ಕೇಂದ್ರಕ್ಕೆ ಹೋದಾಗ ಪೋಷಕರು ಅವರ ಮೇಲೆ ನಿಗಾವಹಿಸಬೇಕು ಮತ್ತು ಸೆಂಟರ್ ಮಾಲೀಕರು ಮಕ್ಕಳು ಪಠ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ನೋಡುತ್ತಿದ್ದಾರೆ ಅಥವಾ ಕಾನೂನು ಬಾಹಿರವಾದ ವೆಬ್‌ಸೈಟ್ ನೋಡುತ್ತಿದ್ದಾರೆಯೇ ಎಂಬುವುದನ್ನು ಗಮನಿಸಬೇಕು. ಒಂದು ವೇಳೆ ಕಾನೂನು ಬಾಹಿರ ಕೆಲಸಕ್ಕೆ ಆಸ್ಪದೆ ನೀಡಿದಲ್ಲಿ ಅಂತಹ ಸೆಂಟರ್ ಮುಚ್ಚಬೇಕಾಗುತ್ತದೆ.
ಸಾವಿತ್ರಿ ಶರಣು ಸಲಗರ,
ತಹಶೀಲ್ದಾರ್