ಬಸವಕಲ್ಯಾಣ: ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯಡಿ ನಾವು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತೇವೆ. ತಾಲೂಕು ಕಾನೂನು ಸೇವಾ ಸಮಿತಿಯು ಕಾನೂನು ಸೇವೆಗಳ ಚಟುವಟಿಕೆಗಳನ್ನು ಸಂಘಟಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುತ್ತದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ಹೇಳಿದರು.
ನಗರದ ಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೋರ್ಟ್ ಇದ್ದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಇರುತ್ತದೆ. ಕಾನೂನಿನ ಬಗ್ಗೆ ತಿಳಿದುಕೊಳ್ಳಲಿಚ್ಛಿಸುವವರಿಗೆ ಆಯಾ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಾನೂನು ಸೇವಾ ಸಮಿತಿ ಇರುತ್ತದೆ. ಕಾನೂನಿನ ಅರಿವು ನಿಮಗಿದ್ದರೆ, ನೀವು ಸಮಾಜ ಸುಧಾರಿಸುವಲ್ಲಿ ಪಾತ್ರ ವಹಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅತಿಥಿಯಾಗಿದ್ದ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಉಪಾಧ್ಯೆ ಮಾತನಾಡಿ, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮೂಲಭೂತ ಹಕ್ಕುಗಳು ನಮಗೆ ನಿಸರ್ಗದತ್ತವಾಗಿ ಬರುತ್ತವೆ. ಅವು ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ, ನ್ಯಾಯವಾದಿ ಎ.ಎನ್. ದೇಶಪಾಂಡೆ ಮಾತನಾಡಿ, ನಮ್ಮ ನಿತ್ಯ ಜೀವನದ ಪ್ರತಿ ಹೆಜ್ಜೆಗೂ ಕಾನೂನಿನ ಅಗತ್ಯವಿತ್ತದೆ. ಮಾನವನ ದೇಹಕ್ಕೆ ಮೆದುಳು ಮತ್ತು ಹೃದಯ ಎಷ್ಟು ಮುಖ್ಯವೋ ಮಾನವ ತನ್ನ ಉತ್ತಮ ಜೀವನ ಸಾಗಿಸಲು ಕಾಯ್ದೆ- ಕಾನೂನುಗಳು ಕೂಡ ಅಷ್ಟೇ ಬಹುಮುಖ್ಯವಾದವುಗಳು ಎಂದರು.
ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷ ಅನಿಲಕುಮಾರ ರಗಟೆ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಿ.ಪಿ.ಚಂದ್ರಯ್ನಾ, ಬಸವಕಲ್ಯಾಣ ವಕೀಲರ ಸಂಘದ ಅದ್ಯಕ್ಷ ಭೀಮಾಶಂಕರ ಕುರಕೋಟೆ, ಅಶೋಕ ನಾಗರಾಳೆ, ತಾ.ದೈ. ಶಿಕ್ಷಣ ಪರಿವೀಕ್ಷಕ ಶಿವಕುಮಾರ ಜಡವೆ, ಉಪನ್ಯಾಸಕಿ ಕನ್ಯಾಕುಮಾರಿ, ಪ್ರಭುಲಿಂಗ, ಗಿರೀಶ ಪಾಟೀಲ, ಜಮಾದಾರ ಹಾಗೂ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು. ಕಾಲೇಜಿನ ಪ್ರಾಚಾರ್ಯ ಡಾ|ರುದ್ರಮುನಿ ಮಠಪತಿ ಸ್ವಾಗತಿಸಿದರು. ಉಪನ್ಯಾಸಕ ಅಂಬರೀಶ್ ನಿರೂಪಿಸಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯತ, ಬಸವಕಲ್ಯಾಣ ನಗರಸಭೆ, ತಾಲೂಕು ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯೋಗದಲ್ಲಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಾರ್ಗದರ್ಶನದಡಿ ಬಸವಕಲ್ಯಾಣ ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಕಾರ್ಯಕ್ರಮ ಆಯೋಜಿಲಾಗಿತ್ತು.