ಬಸವಕಲ್ಯಾಣ: ಮಳೆ ಅಭಾವದಿಂದ ಹಣ್ಣಿನ ಬೆಲೆ ಏರಿಕೆಯಾಗಿರುವುದು ಸಾರ್ವಜನಿಕರಿಗಲ್ಲದೆ ರಂಜಾನ್ ನಿಮಿತ್ತ ಒಂದು ತಿಂಗಳು ಕಾಲ ಉಪವಾಸ ಮಾಡುವವರ ಮೇಲೆ ಭಾರೀ ಪರಿಣಾಮ ಬೀರಿದೆ.
ಪ್ರಸಕ್ತ ಮುಂಗಾರು-ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಕೇರಳ, ಮಹಾರಾಷ್ಟ್ರ ಮತ್ತು ಹೈದರಾಬಾದ್ ಸೇರಿದಂತೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಹಣ್ಣುಗಳನ್ನು ನಗರಕ್ಕೆ ಆಮದು ಮಾಡಿಕೊಳ್ಳುತ್ತಿರುವುದರಿಂದ ಬೆಲೆ ದುಬಾರಿಯಾಗಿ ಪರಿಣಮಿಸಿದೆ.
ಪೈನಾಪಲ್ 80ರಿಂದ 90, ಪಪಾಯಿ 30ರಿಂದ 40, ಕಲ್ಲಂಗಡಿ 25ರಿಂದ 35, ಸೌತೆಕಾಯಿ 50ರಿಂದ 60, ಬಾಳೆ ಹಣ್ಣು 50ರಿಂದ 60, ಸೇಬು 100ರಿಂದ 150 ರೂ.ಗೆ ಕೆ.ಜಿ. ಮಾರಾಟವಾದರೆ, ಖಜೂರ್ 80 ರೂ.ಗೆ ಕೆಜಿ ಆರಂಭದಿಂದ ನೀಡಲಾಗುತ್ತಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ಹಣ್ಣಿನ ಬೆಲೆ ದುಬಾರಿ ಆಗಿರುವುದರಿಂದ ಗ್ರಾಹಕರು ಯೋಚಿಸಿ ಹಣ್ಣುಗಳನ್ನು ಖರೀದಿ ಮಾಡುವಂತಾಗಿದೆ. ಅಲ್ಲದೇ ಇದು ಸಾರ್ವಜನಿಕರಿಗೆ ಹೊರೆ ಕೂ ಆಗಿದೆ. ನಿತ್ಯ ಮೆನೆಗೆ ಕೆಜಿ ಹಣ್ಣು ತೆಗೆದುಕೊಂಡು ಹೋಗುವವರು ಅರ್ಧ ಕೆಜಿ, ಮುಕ್ಕಾಲು ಕೆಜೆ ತೆಗೆದುಕೊಂಡು ಹೋಗುವಂತಾಗಿದೆ.
ಆದರೆ ರಂಜಾನ್ ಹಬ್ಬದ ಅಂಗವಾಗಿ ಉಪವಾಸ ಮಾಡುವ ಕುಟುಂಬದವರು ಹಣ್ಣಿನ ಬೆಲೆ ದುಬಾರಿ ಯಾದರೂ ಬಡವರು, ಶ್ರೀಮಂತರು ಎನ್ನದೇ ಅನಿವಾರ್ಯವಾಗಿ ಹಣ್ಣುಗಳು ಖರೀದಿ ಮಾಡುವಂತ ಸ್ಥಿತಿ ನಿರ್ಮಾಣ ವಾಗಿದೆ.
ವ್ಯಾಪಾರಿಗಳು ಕೂಡ ಹೆಚ್ಚಿನ ಲಾಭ ನೋಡದೆ, ದಿನದ ಕೂಲಿ ಬಂದರೆ ಸಾಕು ಎಂಬಂತೆ ಗ್ರಾಹರನ್ನು ನೋಡಿಕೊಂಡು ವ್ಯಾಪಾರ ವಹಿವಾಟು ಮಾಡಬೇಕಾಗುತ್ತಿದೆ ಎಂದು ವ್ಯಾಪಾರಿ ಮೈನೋದ್ದಿನ್ ಮಾಹಿತಿ ನೀಡಿದರು.
ಬರದ ಪರಿಣಾಮವಾಗಿ ಇನ್ನೂ ಸ್ವಲ್ಪದಿನದಲ್ಲಿ ತರಕಾರಿ, ಹಣ್ಣುಗಳು ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೇರುವುದರಲ್ಲಿ ಅನುಮಾನವಿಲ್ಲ. ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ವೀರಾರೆಡ್ಡಿ ಆರ್.ಎಸ್.