ಬಸವಕಲ್ಯಾಣ: ಉಪನ್ಯಾಸಕರು, ಪಾಲಕರು ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಕ್ರಿಯೆ ಮತ್ತು ಪ್ರತಿಕ್ರಿಯೆ ನಡೆದಾಗ ಮಾತ್ರ ಬೀದರ್ ಜಿಲ್ಲೆಯ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಸುಧಾರಣೆ ಸಾಧ್ಯ ಎಂದು ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಜ ಪಾಟೀಲ ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ನೀಲಾಂಬಿಕಾ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಫಲಿತಾಂಶ ಹೆಚ್ಚಳಕ್ಕೆ ಅಗತ್ಯವಿರುವ ಪ್ರತಿಯೊಂದು ಸಹಕಾರ-ಪ್ರೋತ್ಸಾಹ ನೀಡಲಾಗುವುದು ಎಂದು ಭರವಸೆ ನೀಡಿದರು.
ಹಣಮಂತರಾವ್ ಮೈಲಾರೆ ಹಾಗೂ ವಿಠಲದಾಸ ಪ್ಯಾಗೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಹೆಚ್ಚು ಜ್ಞಾನ ಮತ್ತು ಯಶಸ್ಸು ಗಳಿಸುವ ಮನೋಬಲ ತುಂಬಬೇಕು. ಶಿಕ್ಷಣವು ಕೇವಲ ವೃತ್ತಿಗಾಗಿ, ಹೊಟ್ಟೆಪಾಡಿಗಾಗಿ ಎಂದು ತಿಳಿದುಕೊಳ್ಳದೆ ಜ್ಞಾನಕ್ಕಾಗಿ ಶಿಕ್ಷಣ ಪಡೆಯಬೇಕು ಎಂಬ ಆತ್ಮಸ್ಥೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.
ಸುರೇಶ ಅಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರು. ಡಾ| ಜೈಶೇನಪ್ರಸಾದ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರೊ|ನರಸಿಂಹರೆಡ್ಡಿ ಗದ್ಲೇಗಾಂವ, ಡಾ|ಕಂಟೆಪ್ಪಾ ಮದರಗಾಂವ್, ಡಾ|ಮಲ್ಲಿಕಾರ್ಜುನ ಆಮ್ಲೆ, ರೇಖಾ, ಸೂರ್ಯಕಾಂತ ಶೀಲವಂತ, ರಮೇಶ ಬೇಜಗಂ, ಸಿದ್ದಣ್ಣಾ ಮರಪಳ್ಳಿ, ಓಂಕಾಂತ ಸೂರ್ಯವಂಶಿ ಸಂವಾದದಲ್ಲಿ ಅಭಿಪ್ರಾಯ ಮಂಡಿಸಿದರು. ವಿವಿಧ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಸೇರಿದಂತೆ ಮತ್ತಿತರರು ಇದ್ದರು. ಪ್ರಾಂಶುಪಾಲ ಶೇಕ್ ಜಬಿ ಝಾರೆಗರ ಸ್ವಾಗತಿಸಿದರು.