ಬಸವಕಲ್ಯಾಣ: ಬಸವಕಲ್ಯಾಣದಿಂದ ನಾರಾಯಣಪೂರಕ್ಕೆ ಹೋಗುವ ಪ್ರಮುಖ ರಸ್ತೆಯ ಎಡ-ಬಲ ಭಾಗದಲ್ಲಿ ಅಳವಡಿಸಲಾದ ವಿದ್ಯುತ್ ಕಂಬಗಳು ಬಾಗಿ ಈಗೋ-ಆಗೋ ಬೀಳುವ ಸ್ಥಿತಿಯಲ್ಲಿ ನಿಂತಿದ್ದು, ಈ ಮಾರ್ಗದಲ್ಲಿ ಬೈಕ್ ಸವಾರರು ಮತ್ತು ವಾಹನ ಚಾಲಕರು ಭಯದಲ್ಲಿ ಸಂಚರಿಸುವಂತಾಗಿದೆ.
ನಗರದಿಂದ ಅನತಿ ದೂರದಲ್ಲೇ ಇರುವ ಜಿಪಂ ಕ್ಷೇತ್ರವಾದ ನಾರಾಯಣಪೂರ ಗ್ರಾಮವು ವ್ಯವಹಾರಕ್ಕಾಗಿ ಸಂಪೂರ್ಣವಾಗಿ ಬಸವಕಲ್ಯಾಣದ ಮೇಲೆ ಅವಲಂಬಿತವಾಗಿದೆ. ಹೀಗಾಗಿ ನಸುಕಿನ ಸಮಯದಿಂದಲೇ ಗ್ರಾಮಸ್ಥರು ಒಂದಲ್ಲ ಒಂದು ಕೆಲಸಕ್ಕೆ ಸೈಕಲ್ ಮತ್ತು ವಾಹನಗಳ ಮೇಲೆ ಬಸವಕಲ್ಯಾಣಕ್ಕೆ ಓಡಾಡುವುದು ಸಾಮಾನ್ಯ. ಈ ರಸ್ತೆಯ ಮಾರ್ಗವಾಗಿ ಬೀದರ, ಹುಮನಾಬಾದ, ಘೋಡವಾಡಿ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಿಗೆ ನಿತ್ಯ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಸಂಚರಿಸುತ್ತವೆ.
ಬೆಳಗ್ಗೆ 8 ಗಂಟೆಗೆ ವಾಯು ವಿಹಾರಕ್ಕೆಂದು ನೂರಾರು ಜನ ಈ ರಸ್ತೆಗೆ ಬರುತ್ತಾರೆ. ನಾರಾಯಣಪೂರ ಸಮೀಪದ ಗೋಕುಳ, ಕಿಟ್ಟಾ, ಹುಲಗುತ್ತಿ ಗ್ರಾಮಗಳ ಚಿಕ್ಕ-ಚಿಕ್ಕ ಮಕ್ಕಳು ಮತ್ತು ವಿದ್ಯಾರ್ಥಿಗಳು ತುಂಬಿರುವ ಶಾಲಾ ವಾಹನಗಳು ಇಲ್ಲಿಂದಲೇ ಸಂಚರಿಸುತ್ತವೆ. ಆದರೆ ರಸ್ತೆಯ ಪಕ್ಕದ ಹೊಲದಲ್ಲಿ ಅಳವಡಿಸಲಾದ ವಿದ್ಯುತ್ ಕಂಬಗಳನ್ನು ನೋಡಿದರೆ ಯಾವಾಗ ಬಿಳುತ್ತವೊ ಎಂದು ಭಯವಾಗುತ್ತದೆ.
ಪೋಷಕರು ಮಕ್ಕಳನ್ನು ಬೈಕ್ ಮೇಲೆ ಕರೆದುಕೊಂಡು ಹೋಗುವಾಗ ಮತ್ತು ರೈತರು ಕೃಷಿ ಚಟುವಟಿಕೆ ಮಾಡುವಾಗ ವಿದ್ಯುತ್ ಕಂಬಗಳು ಮೈ ಮೇಲೆ ಬಿದ್ದು ಏನಾದರೂ ಅವಘಡ ಸಂಭವಿಸಬಹುದು ಎಂಬ ಆತಂಕದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ನಿಮಾರ್ಣವಾಗಿದೆ.
ಮಳೆಗಾಲದಲ್ಲಿ ಭೂಮಿ ಹಸಿ ಹಿಡಿಯುವುದರಿಂದ ಕಂಬಗಳು ಯಾವಾಗಬೇಕಾದರೂ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಬಾಗಿದ ಕಂಬಗಳನ್ನು ದುರಸ್ಥಿ ಮಾಡುವ ಗೋಜಿಗೆ ಹೋಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಅವಘಡ ಸಂಭವಿಸಿ, ಜೀವ ಹಾನಿ ಆಗುವುದಕ್ಕೆ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಬಾಗಿದ ವಿದ್ಯುತ್ ಕಂಬಗಳನ್ನು ದುರಸ್ಥಿ ಮಾಡಿ ಭಯದಲ್ಲಿ ತಿರುಗಾಡುವ ಸಾರ್ವಜನಿಕರು ಮತ್ತು ವಾಹನ ಚಾಲಕರಿಗೆ ಸಮಸ್ಯೆಯಿಂದ ಮುಕ್ತಿ ಗೊಳಿಸಬೇಕಾಗಿದೆ.
ಶಾಲಾ ವಾನಗಳು ಹಾಗೂ ನಿತ್ಯ ಸಾವಿರಾರು ಜನ ಓಡಾಡುವ ರಸ್ತೆ ಇದಾಗಿದೆ. ಹಾಗಾಗಿ ಅವಘಡ ಸಂಭವಿಸುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಬಾಗಿದ ವಿದ್ಯುತ್ ಕಂಬಗಳನ್ನು ದುರಸ್ಥಿ ಮಾಡಲು ಮುಂದಾಗಬೇಕು.
•
ಅನೀಲಕುಮಾರ ರಾಜಪೂತ,
ನಾರಾಯಣಪೂರ ನಿವಾಸಿ