ವೀರಾರೆಡ್ಡಿ ಆರ್. ಎಸ್.
ಬಸವಕಲ್ಯಾಣ: ತಾಲೂಕಿನ ಗಡಿಭಾಗವಾದ ಉಜಳಂಬ ಸರ್ಕಾರಿ ಶಾಲೆಯಲ್ಲಿ ಕಳೆದ ಏಳು ವರ್ಷಗಳಿಂದ ಸ್ಥಗಿತಗೊಂಡಿರುವ ಕಂಪ್ಯೂಟರ್ ಶಿಕ್ಷಣ ಪ್ರಾರಂಭಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಾಸ್ತವ್ಯದ ನೆರವು ಸಿಗಬಹುದೇ ಎಂದು ಮಕ್ಕಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕಂಪ್ಯೂಟರ್ ಶಿಕ್ಷಕರ ಕೊರತೆಯಿಂದ ಕಳೆದ ಏಳು ವರ್ಷಗಳಿಂದ ಇಲ್ಲಿನ ಮಕ್ಕಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಿದ್ದು, ಗ್ರಾಮಸ್ಥರು ಹಾಗೂ ಪೋಷಕರು ಬೇಸರ ಪಟ್ಟುಕೊಳ್ಳುವಂತಾಗಿದೆ.
ಉಜಳಂಬ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಹಾಗೂ ಮರಾಠಿ ಸೇರಿ ಒಟ್ಟು 365 ವಿದ್ಯಾರ್ಥಿಗಳು
ಅಭ್ಯಾಸ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಲಕ್ಷಾಂತರ ರೂ. ಖರ್ಚು ಮಾಡಿ 5 ಕಂಪ್ಯೂಟರ್‌ಗಳನ್ನು ಶಾಲೆಗೆ ಮಂಜೂರು ಮಾಡಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯವೊ ಅಥವಾ ಸಿಬ್ಬಂದಿ ನಿರ್ಲಕ್ಷ್ಯವೊ ವಿದ್ಯಾರ್ಥಿಗಳು ಮಾತ್ರ ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಿದ್ದು, ಕೋಣೆಯಲ್ಲಿಟ್ಟ ಸ್ಥಳದಲ್ಲಿಯೇ ಕಂಪ್ಯೂಟರ್‌ಗಳು ಧೂಳು ತಿನ್ನುತ್ತಿವೆ. ಅಲ್ಲದೇ ಮೌಸ್, ಕೀ ಬೋರ್ಡ್, ಸಿಪಿಯು, ಟೇಬಲ್, ವಿದ್ಯುತ್ ತಂತಿಗಳು ಸೇರಿದಂತೆ ಪ್ರತಿಯೊಂದು ಸಾಮಗ್ರಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರ ದಿಂದ ಮಂಜೂರಾದ ಬಟ್ಟೆ ಹೊಲಿಯುವ ಯಂತ್ರಗಳು ಸಹ ಇಟ್ಟ ಸ್ಥಳದಲ್ಲಿಯೇ ಮಣ್ಣು ತಿನ್ನುತ್ತಿವೆ ವಿನಃ ಅದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನವಾಗಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡೆಸಿಕೊಳ್ಳುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಹೀಗಾಗಿ ಜೂ. 29ರಂದು ಶಾಲೆಯಲ್ಲಿ ವಾಸ್ತವ್ಯ ಮಾಡಲಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಂಪ್ಯೂಟರ್ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆಯೇ ಎಂದು ವಿದ್ಯಾರ್ಥಿಗಳಿಗೆ ಕಾತರರಾಗಿದ್ದಾರೆ.
ಮಾಹಿತಿ ಸಿಂಧು ಯೋಜನೆಯಲ್ಲಿ ಮೂರು ವರ್ಷ ಹೊರ ಗುತ್ತಿಗೆ ನೀಡಲಾಗಿತ್ತು. ಹೊರ ಗುತ್ತಿಗೆ ಅವಧಿ ಮುಗಿದ ನಂತರ ಕಂಪ್ಯೂಟರ್‌ಗಳು ಹಾಗೆ ಇವೆ. ಹೊಸ ಯೋಜನೆಯಲ್ಲಿ ಮತ್ತೆ ಕಂಪ್ಯೂಟರ್ ಮಂಜೂರು ಮಾಡಲಾಗುತ್ತದೆ.
•
ಸಿ. ಹಳ್ಳದ,
ಕ್ಷೇತ್ರ ಶಿಕ್ಷಣಾಧಿಕಾರಿ ಬಸವಕಲ್ಯಾಣ
ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆಗೆ ಕಂಪ್ಯೂಟರ್ ನೀಡಲಾಗಿತ್ತು. ಆದರೆ ನುರಿತ ಕಂಪ್ಯೂಟರ್ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತವಾಗಲು ಕಾರಣವಾಗಿದೆ.
•
ಸತೀಶ ಕಾರಬಾರಿ,
ಮುಖ್ಯ ಶಿಕ್ಷಕ, ಸರ್ಕಾರಿ ಪ್ರಾಥಮಿಕ ಶಾಲೆ ಉಜಳಂಬ