ಬಸವಕಲ್ಯಾಣ: ಗೌತಮ ಬುದ್ಧ ವಿಶ್ವಕ್ಕೆ ಶಾಂತಿ ಸಂದೇಶ ಸಾರಿ ಹೋಗಿದ್ದಾರೆ. ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಅವಶ್ಯವಾಗಿದೆ ಎಂದು ಶ್ರೀ ಸಿದ್ಧರಾಮ ಬೆಲ್ದಾಳ ಶರಣರು ಹೇಳಿದರು.
ಸಸ್ತಾಪೂರ ಗ್ರಾಮದಲ್ಲಿ ನಡೆದ ಗೌತಮ ಬುದ್ಧರ 2563ನೇ ಜಯಂತಿ ಹಾಗೂ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಯುವಕರು ದುಶ್ಚಟಕ್ಕೆ ಬಲಿಯಾಗಿ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಮದ್ಯಪಾನದಿಂದ ಜೀವನ ಹಾಳಾಗಿ, ಕುಟುಂಬವನ್ನೆ ಬೀದಿಪಾಲು ಮಾಡುವಂತಹ ಪ್ರಸಂಗಗಳು ನಡೆಯುತ್ತಿವೆ. ಪ್ರತಿಯೊಬ್ಬರು ಇದಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಡಾ|ಬಾಬಾಸಾಹೇಬ ಅಂಬೇಡ್ಕರ್ ಅವರು ಕಷ್ಟಪಟ್ಟು ಜ್ಞಾನ ಸಂಪಾದನೆ ಮಾಡಿ ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸದೆ ಇಡೀ ದೇಶಕ್ಕಾಗಿ ಸಂವಿಧಾನ ಬರೆದಿದ್ದಾರೆ. ಪ್ರತಿಯೊಬ್ಬರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಒಂದು ವೇಳೆ ನಮ್ಮ ದೇಶದಲ್ಲಿ ಸಂವಿಧಾನ ಇರದಿದ್ದರೆ, ನಾವು ಯಾರೂ ಈ ಉನ್ನತ ಸ್ಥಾನದಲ್ಲಿ ಇರುತ್ತಿರಲಿಲ್ಲ. ಕೆಳಮಟ್ಟದಲ್ಲಿ ನಾವೆಲ್ಲರು ಕಷ್ಟದ ಜೀವನ ನಡೆಸ ಬೇಕಾಗುತ್ತಿತ್ತು. ಅಂಬೇಡ್ಕರ ಅವರ ಆಶೀರ್ವಾದದಿಂದ ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ಶಾಸಕರು, ಸಂಸದರು ಪ್ರಧಾನಮಂತ್ರಿ ಆಗಲು ಅವಕಾಶಗಳಿವೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಾಲಂದಾ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ಸಿಕಿಂದರ ಸಿಂಧೆ ಮಾತನಾಡಿ, ಬುದ್ಧರ ನೂತನ ಮೂರ್ತಿಯಯನ್ನು ಎಲ್ಲರ ಸಹಕಾರದಿಂದ ಥೈಲ್ಯಾಂಡ್‌ದಿಂದ ಸಸ್ತಾಪುರ ಗ್ರಾಮಕ್ಕೆ ತರಲಾಗಿದೆ. ಇಂತಹ ಒಳ್ಳೆಯ ಮೂರ್ತಿ ಪ್ರತಿಷ್ಠಾಪಿಸಲು ಸಮುದಾಯ ಭವನದ ಕೊರತೆಯಿದೆ. ಅದಕ್ಕಾಗಿ ಶಾಸಕರ ಅನುದಾನದಲ್ಲಿ ಭವನ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಉಮ್ಮಾಪುರ ಬೌದ್ದ್ಧ ಧಮ್ಮ ಪ್ರಚಾರಕ ಮಿಲಿಂದ ಗುರೂಜಿ ಮಾತನಾಡಿದರು. ಸಿಪಿಐ ಮಲ್ಲಿಕಾರ್ಜುನ ಯಾತನೂರ, ತಾಪಂ ಸದಸ್ಯ ಬಾಲಾಜಿರೆಡ್ಡಿ ಟೇಕಲೆ, ಇಸ್ಮಾಯಿಲ್ ಚಂಡಕಾಪುರೆ, ಗ್ರಾ.ಪಂ. ಉಪಾಧ್ಯಕ್ಷೆ ಉತ್ತಮ ಬಾಯಿ, ಆನಂದ ಗಾಯಕವಾಡ ಮತ್ತಿತರರು ಇದ್ದರು. ಸಹ ಶಿಕ್ಷಕ ದಿಲೀಪ ಗಾಯಕವಾಡ ಸ್ವಾಗತಿಸಿದರು. ರಾಜೇಶ್ ಗಾಯಕವಾಡ ನಿರೂಪಿಸಿದರು. ಧಮ್ಮಾನಂದ ಗಾಯಕವಾಡ ವಂದಿಸಿದರು.