Advertisement

ಭೂಮಿಗಿಲ್ಲ ಸಮಸ್ಯೆ; ಸೌಲಭ್ಯ ಮಾತ್ರ ಕಡಿಮೆ

11:45 AM Jan 05, 2020 | Naveen |

ಬಸವಕಲ್ಯಾಣ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಅಂತ್ಯಕ್ರಿಯೆ ಮಾಡುವುದಕ್ಕಾಗಿ ಸ್ಮಶಾನ ಭೂಮಿ ನೀಡುವಂತೆ ಹೋರಾಟ ಹಾಗೂ ತಕರಾರು ನಡೆಯುವುದು ಸಾಮಾನ್ಯ. ಆದರೆ, ಬಸವಕಲ್ಯಾಣ ತಾಲೂಕಿನಲ್ಲಿ ಅವಶ್ಯಕತೆಗೆ ತಕ್ಕಂತೆ ಸ್ಮಶಾನ ಭೂಮಿಗಳಿವೆ. ಇದರಿಂದ ಸಾರ್ವಜನಿಕರು ಅಂತ್ಯ ಸಂಸ್ಕಾರದ ಸಮಸ್ಯೆಯಿಂದ ಮುಕ್ತವಾಗಿದ್ದಾರೆ.

Advertisement

ತಾಲೂಕಿನ ಒಟ್ಟು 114ರ ಪೈಕಿ 108 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇವೆ. 6 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಹಾಗೂ ಪಟ್ಟೆದಾರ ಜಮೀನು ನೀಡಲು ಮುಂದೆ ಬಾರದ ಕಾರಣ ಸದ್ಯ ಗ್ರಾಮಸ್ಥರು ಅರಣ್ಯ, ಪಟ್ಟಾ ಮತ್ತು ಕೆರೆ ವ್ಯಾಪ್ತಿಯಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಹೀಗಾಗಿ ಸ್ಮಶಾನ ಭೂಮಿ ಸಮಸ್ಯೆ ಇರುವ ಎಕಂಬಾ ಮತ್ತು ನಿರಗುಡಿ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಸ್ಮಶಾನ ಭೂಮಿ ಖರೀದಿಸಲು-2 ಮತ್ತು ಉಳಿದ ನಾಲ್ಕು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಅಭಿವೃದ್ಧಿ ಪಡಿಸಲು-4 ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕೃತವಾಗಿ ನೀಡಿರುವ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಬಸವಕಲ್ಯಾಣ ಹೊರವಲಯದ ನಾರಾಯಣಪೂರ ರಸ್ತೆಯಲ್ಲಿರುವ ಸ್ಮಶಾನ ಭೂಮಿಯ ಒಳಗೆ ಕಂಪೌಂಡ್‌, ನೀರಿನ ವ್ಯವಸ್ಥೆ ಬಿಟ್ಟರೆ ತಾಲೂಕಿನ ಬಹುತೇಕ ಸ್ಮಶಾನ ಭೂಮಿಗಳು ಮೂಲ ಸೌಕರ್ಯಗಳಿಂದ ವಂಚಿತೆಗೊಂಡಿವೆ. ಕೆಲವು ಕಡೆ ಸ್ಮಶಾನ ಭೂಮಿ ಎತ್ತರ ಪ್ರದೇಶದಲ್ಲಿ ಮತ್ತು ತಗ್ಗು ಪ್ರದೇಶದಲ್ಲಿ ಇರುವುದರಿಂದ ಮಳೆಗಾಲದಲ್ಲಿ ಅಂತ್ಯಕ್ರಿಯೆ ಮಾಡುವ ಸಂದರ್ಭದಲ್ಲಿ ಸಮಸ್ಯೆ ಎದುರಿಸಬೇಕಾಗಿದೆ. ಅಲ್ಲದೇ ವರ್ಷ ಕಳೆದಂತೆ ಸ್ಮಶಾನ ಭೂಮಿಗಳು ಪ್ರಭಾವಿ ವ್ಯಕ್ತಿಗಳ ಪಾಲಾಗಿ ಮಾಯವಾಗುತ್ತಿವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಒಟ್ಟಾರೆ ತಾಲೂಕಿನಲ್ಲಿ ಸ್ಮಶಾನ ಭೂಮಿ ಇದ್ದು, ಅವುಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ, ಸಂರಕ್ಷಣೆಗೆ ಸಂಬಂಧ ಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂಬುದು ಗ್ರಾಮೀಣ ಮತ್ತು ನಗರ ನಿವಾಸಿಗಳ ಒತ್ತಾಯವಾಗಿದೆ.

ಮೂಲಸೌಲಭ್ಯಕ್ಕೆ ಕ್ರಮ
ಬಸವಕಲ್ಯಾಣ ತಾಲೂಕಿನ ತೊಗಲೂರ, ನಾರಾಯಣಪೂರ, ಗುಂಡೂರ ಮತ್ತು ಹಿರನಾಂಗ್‌ ಗ್ರಾಮದಲ್ಲಿನ ಸ್ಮಶಾನ ಭೂಮಿಗಳನ್ನು ಅಭಿವೃದ್ಧಿಗೊಳಿಸಲು ಪಿಆರ್‌ಈ ಯಿಂದ ಪ್ರತ್ಯೇಕವಾಗಿ 8 ಲಕ್ಷ ರೂ. ಯೋಜನೆ ರೂಪಿಸಿ ಜಿಲ್ಲಾಕಾರಿಗಳಿಗೆ
ಪ್ರಸ್ತಾವನೆ ಸಲ್ಲಿಸಲಾಗಿದೆ. ನಮ್ಮ ಪ್ರಕಾರ ಯಾವುದೇ ಗ್ರಾಮಗಳಲ್ಲಿ ಹೇಳಿಕೊಳ್ಳುವಂತಹ ಸ್ಮಶಾನ ಭೂಮಿಯ ಸಮಸ್ಯೆ ಇಲ್ಲ. ಒಂದು ವೇಳೆ ಸಮಸ್ಯೆ ಇದ್ದಲ್ಲಿ ಗ್ರಾಮಸ್ಥರು ನಮ್ಮ ಗಮನಕ್ಕೆ ತಂದರೆ ಗ್ರಾಮದಲ್ಲಿ ಸರ್ಕಾರಿ ಜಮೀನು ಇದ್ದರೆ ಸ್ಮಶಾನ ಭೂಮಿಗಾಗಿ ನೀಡಲಾಗುವುದು. ಒಂದುವೇಳೆ ಸರ್ಕಾರಿ ಜಮೀನು ಇಲ್ಲದಿದ್ದರೆ ಯಾರಾದರೂ ಜಮೀನು ನೀಡುವುದಕ್ಕೆ ಮುಂದೆ ಬಂದರೆ ಕಾನೂನು ಪ್ರಕಾರ ಅದನ್ನು ಖರೀದಿ ಮಾಡಿ ನೀಡಲಾಗುವುದು. ಸಾವಿತ್ರಿ ಶರಣು ಸಲಗರ,
ತಹಶೀಲ್ದಾರ್‌ ಬಸವಕಲ್ಯಾಣ

Advertisement
Advertisement

Udayavani is now on Telegram. Click here to join our channel and stay updated with the latest news.

Next