Advertisement

ಮೂಲ ಸೌಕರ್ಯ ವಂಚಿತ ಬಸವಕಲ್ಯಾಣ ಗ್ರಂಥಾಲಯ

04:00 PM Oct 26, 2019 | Naveen |

ಬಸವಕಲ್ಯಾಣ: ಜಿಲ್ಲೆಯಲ್ಲಿ ಬೀದರ ನಂತರ ದೊಡ್ಡ ನಗರ ಹಾಗೂ ವಾಣಿಜ್ಯ ವ್ಯವಹಾರ ನಡೆಯುವ ಕೇಂದ್ರ ಸ್ಥಾನ ಎಂದು ಕರೆಯಲಾಗುವ ಬಸವಕಲ್ಯಾಣ ನಗರದ ಸಾರ್ವಜನಿಕ ಗ್ರಂಥಾಲಯ ಅವ್ಯವಸ್ಥೆ ಆಗರವಾಗಿದೆ. ಆದರೂ ನಿವೃತ್ತ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವ ಜನಿಕರು ಇಲ್ಲಿಗೆ ಬಂದು ಓದುವುದು ಅನಿವಾರ್ಯವಾಗಿದೆ.

Advertisement

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರಸ್ತೆಯಲ್ಲಿ 1970ರಲ್ಲಿ ಸ್ವಂತ ಸ್ಥಳದಲ್ಲಿ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಂಥಾಲಯದಲ್ಲಿ ಮರಾಠಿ, ಕನ್ನಡ ಹಿಂದಿ, ಕಥೆ, ಕಾದಂಬರಿಗಳು ಸೇರಿದಂತೆ ಒಟ್ಟು 21,600 ಪುಸ್ತಗಳಿವೆ. ಎಲ್ಲ ಕನ್ನಡ ಪತ್ರಿಕೆಗಳು ಲಭ್ಯವಿರುತ್ತವೆ. ಒಟ್ಟು 1,450 ಜನರು ಇಲ್ಲಿ ಸದಸ್ಯತ್ವ ಪಡೆದುಕೊಂಡಿದ್ದಾರೆ.

ಹೀಗಾಗಿ ನಿತ್ಯ ಸುಮಾರು 200ರಿಂದ 300 ಜನ ಇಲ್ಲಿಗೆ ಬಂದು ಓದುವುದು ಸಾಮಾನ್ಯ. ಆದರೆ
ಇಲ್ಲಿನ ಅವ್ಯವಸ್ಥೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಂಥಾಲಯಕ್ಕೆ ಓದಲು ಬರುವ ಹಾಗೂ ಸಿಬ್ಬಂದಿಗಾಗಿ ಕನಿಷ್ಠ ಮೂಲಭೂತ ಸೌಲಭ್ಯ ಇಲ್ಲದ ಕಾರಣ ಸಿಬ್ಬಂದಿ ಹಾಗೂ ಸಾರ್ವಜನಿಕರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.

ಗ್ರಂಥಾಲಯದಲ್ಲಿ ಸದ್ಯ ಇಬ್ಬರು ಕಾಯಂ ಮತ್ತು ಒಬ್ಬರು ಅರೆ ಕಾಲಿಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಆದರೂ ಗಡಿ ತಾಲೂಕಿನ ಸಾರ್ವಜನಿಕರ ಗ್ರಂಥಾಲಯ ಹೆಸರಿಗೆ ಮಾತ್ರ ಎಂಬಂತಾಗಿದ್ದು, ಕನ್ನಡಾಭಿಮಾನಿಗಳ ಮತ್ತು ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ.

ಶಿಥಿಲಾವಸ್ಥೆಯಲ್ಲಿ ಕಟ್ಟಡ: ಗ್ರಂಥಾಲಯ ಕಟ್ಟಡ ಹಳೆದಾಗಿರುವುದರಿಂದ ಶಿಥಿಲಾವಸ್ಥೆಗೆ ತಲುಪಿದೆ. ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಮಳೆ ಬಂದರೆ ಸಾಕು ನೀರು ಒಳಗೆ ನುಗ್ಗುತ್ತವೆ. ಆದರೂ ಸಂಬಂಧ ಪಟ್ಟವರು ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಇದರಿಂದ ಓದುಗರು ನಿತ್ಯ ಭಯದಲ್ಲಿ ಕುಳಿತುಕೊಳ್ಳುವಂತಾಗಿದೆ ಎಂಬುದು ಸಾರ್ವಜನಿಕರ ಆರೋಪ.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರ ಬಯಲು ಶೌಚಮುಕ್ತ ಭಾರತ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೆ ತಾಲೂಕು ಸಾರ್ವಜನಿಕ ಗ್ರಂಥಾಲಯದಲ್ಲಿ ಶೌಚಾಲಯ ಹಾಗೂ ಸಾಮಾನ್ಯ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲದಾಗಿದೆ. ಹೀಗಾಗಿ ಇಲ್ಲಿಗೆ ಓದಲು ಬರುವವರು ಗ್ರಂಥಾಲಯ ಮುಂಭಾಗ ಹಾಗೂ ಹಿಂಬದಿ ಸ್ಥಳವನ್ನೇ ಶೌಚಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು, ಒಳಗೆ ಕುಳಿತುಕೊಳ್ಳಲಾರದಂಥ ಸ್ಥಿತಿ ನಿರ್ಮಾಣವಾಗಿದೆ.

ಕಂಪ್ಯೂಟರ್‌-ಝರಾಕ್ಸ್‌ ಇಲ್ಲ: ರಾಜ್ಯದ ಕೆಲ ದೊಡ್ಡ ತಾಲೂಕಿನ ಸಾರ್ವಜನಿಕ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಈ ಗ್ರಂಥಾಲಯದಲ್ಲಿ ಇನ್ನೂ ನೋಟ್‌ಬುಕ್‌ನಲ್ಲಿ ಬರೆದುಕೊಳ್ಳುವ ವ್ಯವಸ್ಥೆ ಇದೆ. ಕನಿಷ್ಟ ಪುಸ್ತಕಗಳ ಮಾಹಿತಿಹಾಗಿ ಒಂದು ಕಂಪ್ಯೂಟರ್‌ ಸೌಲಭ್ಯ ನೀಡಿಲ್ಲ ಹಾಗೂ ಝರಾಕ್ಸ್‌ ಇಲ್ಲಿದಿರುವುದರಿಂದ ಓದುಗರಿಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬೇಕಾದರೆ ಹೊರಗೆ ಅಂಗಡಿಗೆ ಹೋಗಿ ಝರಾಕ್ಸ್‌ ಮಾಡಿಕೊಳ್ಳುವುದು ಪರಿಸ್ಥಿತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next