Advertisement

ತೆಲಂಗಾಣದಲ್ಲಿ ಬಸವ ಭವನ ನಿರ್ಮಾಣ: ಸಂಸದ ಬಿ.ಬಿ. ಪಾಟೀಲ

11:40 AM Oct 13, 2019 | Team Udayavani |

ಬಸವಕಲ್ಯಾಣ: ವಿಶ್ವಕ್ಕೆ ಸಮಾನತೆ ಹಕ್ಕು ನೀಡಿದ ಹಾಗೂ ದಾಸೋಹ ಪರಿಕಲ್ಪನೆ ತೋರಿಸಿಕೊಟ್ಟ ವಿಶ್ವಗುರು ಬಸವಣ್ಣನ ಭವನವನ್ನು ತೆಲಂಗಾಣದಲ್ಲಿ ನಿರ್ಮಿಸಲಾಗುವುದು ಎಂದು ಜಹೀರಾಬಾದ್‌ ಸಂಸದ ಬಿ.ಬಿ.ಪಾಟೀಲ ಹೇಳಿದರು.

Advertisement

ನಗರದ ಬಸವ ಮಹಾಮನೆ ಆವರಣದಲ್ಲಿ 18ನೇ ಕಲ್ಯಾಣ ಪರ್ವದ ಎರಡನೇ ದಿನವಾದ ಶನಿವಾರ ನಡೆದ ಧರ್ಮ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗಾಗಲೇ ಒಂದು ಎಕರೆ ಸ್ಥಳ ಗುರುತಿಸಲಾಗಿದೆ. ಶೀಘ್ರವಾಗಿ ದಿನಾಂಕ ನಿಗದಿ ಪಡಿಸಿ ಎಲ್ಲರ ಸಮ್ಮುಖದಲ್ಲಿ ಭವನ ಉದ್ಘಾಟಿಸಲಾಗುವುದು ಎಂದು ಭರವಸೆ ನೀಡಿದರು.

ವಿಶ್ವಗುರು ಬಸವಣ್ಣನವರು ಹುಟ್ಟು ಹಾಕಿದ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂದು ತೆಲಂಗಾಣ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ವಿಶ್ವಗುರು ಬಸವಣ್ಣನ ತತ್ವ-ಆದರ್ಶಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರೀ ಚನ್ನಬಸಲಿಂಗ ಪಟ್ಟದ್ದೇವರು ಅನುಭವ ಮಂಟಪ ನಿರ್ಮಾಣ ಮಾಡಿರುವುದು ಮತ್ತು ಲಿಂ. ಡಾ| ಮಾತೆ ಮಹಾದೇವಿ ಅವರು 108 ಅಡಿ ಬಸವಣ್ಣನ ಪುತ್ಥಳಿಯನ್ನು ಬಸವಕಲ್ಯಾಣದಲ್ಲಿ ನಿರ್ಮಾಣ ಮಾಡಿರುವುದನ್ನು ನಾವು ಎಂದಿಗೂ  ಮರೆಯುವಂತಿಲ್ಲ ಎಂದು ನುಡಿದರು.

ಜಗದ್ಗುರು ಮಾತೆ ಮಹಾದೇವಿ ಸಂಕಲ್ಪದಂತೆ ನಾವು ಮುಂದೆ ಹೋಗೋಣ. ನಮ್ಮ ಧರ್ಮಕ್ಕೆ ಜಯ ಸಿಕ್ಕೇ ಸಿಗುತ್ತದೆ. ಎಲ್ಲರ ಕನಸು ಕೆಲವೇ ದಿನಗಳಲ್ಲಿ ನನಸಾಗುತ್ತದೆ ಎಂದು ಭವಿಷ್ಯ ನುಡಿದರು.

Advertisement

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಕ್ಷರಿ ಮಾತನಾಡಿ, 18 ವರ್ಷಗಳಿಂದ ಬಸವಕಲ್ಯಾಣದಲ್ಲಿ ಕಲ್ಯಾಣ ಪರ್ವ ಯಶಸ್ವಿಯಾಗಿ ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ. ಏಕೆಂದರೆ ಈ ಭೂಮಿಗೆ ಬಂದು ಒಂದು ವಚನ ಪಠಣ ಮಾಡಿದರೆ ಸಾಕು, ಸಂಚಲನ ಮೂಡಿದಂತಾಗುತ್ತದೆ ಎಂದರು.

ವಿಶ್ವಗುರು ಬಸವಣ್ಣನವರ ಚರಿತ್ರೆ ಪಠ್ಯಪುಸ್ತಕದಲ್ಲಿ ಸೇರಿಸಬೇಕು. ಯುವ ಶಕ್ತಿಯನ್ನು ಬಸವ ಶಕ್ತಿಯಲ್ಲಿ ತೊಡಗಿಸಿಕೊಳ್ಳಬೇಕು. ದೊಡ್ಡ ನಗರಗಳಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸುವ ಬದಲು, ಪ್ರತಿಯೊಂದು ಜಿಲ್ಲೆಯಲ್ಲಿ ಬೃಹತ್‌ ಮಟ್ಟದಲ್ಲಿ ಪುತ್ಥಳಿ
ನಿರ್ಮಾಣವಾಗಬೇಕು ಎಂದು ಹೇಳಿದರು.

ಜಗದೀಶಗೌಡ ಪಾಟೀಲ, ಜಗದ್ಗುರು ಶ್ರೀ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿದರು. ಕೂಡಲ ಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಶ್ರೀ ಜಗದ್ಗುರು ಮಾತೆ ಗಂಗಾದೇವಿ ಸಾನ್ನಿಧ್ಯ,
ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಬೆಂಗಳೂರು ಜಾಗತಿಕ ಲಿಂಗಾಯತ ಧರ್ಮ ಮಹಾ ಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮದಾರ, ಮಾಜಿ ಸಚಿವ ಎಂ.ಬಿ. ಪಾಟೀಲ, ಶಾಸಕ ಬಿ. ನಾರಾಯಣರಾವ್‌, ಕಾಂಗ್ರೆಸ್‌ ಮುಖಂಡ ಬಸವರಾಜ ಬುಳ್ಳಾ, ಕಲ್ಯಾಣ ಪರ್ವ ಕಾರ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಬಸವರಾಜ ಧನ್ನೂರ, ಆನಂದ ದೇವಪ್ಪ, ಶಿವರಾಜ ನರಶೆಟ್ಟಿ, ಬಸವರಾಜ ಪಾಟೀಲ ಶಿವಪೂರ, ಶ್ರೀಕಾಂತ ಸ್ವಾಮಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next