Advertisement

ಅವಮಾನಿಸಿದವರು ಬಹಿರಂಗ ಕ್ಷಮೆ ಕೇಳಲಿ

11:38 AM Oct 14, 2019 | Naveen |

ಬಸವಕಲ್ಯಾಣ: 18ನೇ ಕಲ್ಯಾಣ ಪರ್ವ ನಿಮಿತ್ತ ರವಿವಾರ ನಡೆದ ಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯ ಮೆರವಣಿಗೆಗೆ ಚಪ್ಪಲಿ ಪ್ರದರ್ಶನ ಮಾಡಿರುವುದನ್ನು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕಲ್ಯಾಣ ಪರ್ವದ ಕಾರ್ಯಾಧ್ಯಕ್ಷ ಬಸವರಾಜ ಧನ್ನೂರ ಖಂಡಿಸಿದರು.

Advertisement

ನಗರದ ಬಸವ ಮಹಾಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ 18ನೇ  ಕಲ್ಯಾಣ ಪರ್ವದ ಮೂರನೇ ದಿನವಾದ ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಚನ ಸಾಹಿತ್ಯಕ್ಕೆ ಅವಮಾನ ಮಾಡಿದವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದರು.

ವಿಶ್ವಗುರು ಬಸವಣ್ಣ ದೇವಸ್ಥಾನದ ಆಸ್ತಿಯಲ್ಲ, ಅವರು ಮನುಕುಲದ ಆಸ್ತಿಯಾಗಿದ್ದಾರೆ. ಹೀಗಾಗಿ ಬಸವಾದಿ ಶರಣರು, ಬಸವರ ಪರ ಸಂಘಟನಾಕಾರರು ಮತ್ತು ರಾಜಕೀಯ ನಾಯಕರು ಪಕ್ಷಾತೀತವಾಗಿ ಇದನ್ನು ಖಂಡಿಸಬೇಕು ಎಂದು ಮನವಿ ಮಾಡಿದರು.

900 ವರ್ಷಗಳ ಕ್ರಾಂತಿಯನ್ನು ಪುರೋಹಿತಶಾಹಿಗಳು ಮುಗಿಸಬೇಕು ಎಂದಿದ್ದರು. ಆದರೆ ಸಮಾಜಕ್ಕೆ ಶರಣರು ನೀಡಿರುವ ವಚನ ಸಾಹಿತ್ಯಕ್ಕೆ ಲಿಂಗಾನಂದ ಸ್ವಾಮಿಗಳು ಜೀವ ತುಂಬುವ ಮೂಲಕ 12ನೇ ಶತಮಾನದ ಶರಣರ ಸಂತರನ್ನು ಬೆಳೆಸಿದರು.

ಜಗದ್ಗುರು ಲಿಂ. ಡಾ| ಮಾತೆ ಮಹಾದೇವಿ ಅವರು ಬಸವಾದಿ ಶರಣರು ಇತಿಹಾಸ, ವಚನ ಸಾಹಿತ್ಯ ತಿಳಿದುಕೊಳ್ಳುವ ದೃಷ್ಟಿಯಿಂದ ಕಲ್ಯಾಣ ಪರ್ವ ಪ್ರಾರಭಿಸಿದರು. ಆದರೆ ಪ್ರತಿಭಟನೆ ಮಾಡುವವರು ಲಿಂಗಾಯತ 8 ಪೀಠಕ್ಕೆ ಕೊಡುಗೆ ನೀಡಿರುವ ಒಂದಾದರೂ ರಶೀದಿ ತೊರಸಲಿ ಎಂದು ಸವಾಲು ಹಾಕಿದರು.

Advertisement

ಬಸವೇಶ್ವರ ದೇವಸ್ಥಾನದವರು ಕಲ್ಯಾಣ ಪರ್ವಕ್ಕೆ ವಿರೋಧ ಮಾಡುತ್ತೇವೆ ಎಂದಾಗ ನಾವು ಬೇಡ ಎಂದು ಮನವಿ ಮಾಡಿದ್ದೇವೆ. ಲಿಂಗಾಯತ ಧರ್ಮ ಹೋರಾಟದ ಪ್ರಮುಖರು ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ವಚನಾಂಕಿತ ತಿದ್ದಿರುವುದು ಮುಗಿದ ಅಧ್ಯಾಯವಾಗಿದೆ. ಅದನ್ನು ಮರೆತು ಬಿಡಬೇಕು ಎಂದು ಮನವಿ ಮಾಡಿ ಹೋಗಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೆ ಇದೆ. ಆದರೆ ಚಪ್ಪಲಿ ಪ್ರದರ್ಶನ ಮಾಡಿರುವುದರಿಂದ ನನಗೆ ತುಂಬಾ ನೋವಾಗಿದೆ ಎಂದರು.

ಹೀಗಾಗಿ ಎಷ್ಟೇ ಕಷ್ಟ ಬಂದರೂ, ಯಾರೇ ತಿಪ್ಪರಲಾಗಾ ಹಾಕಿದರೂ ಕಲ್ಯಾಣ ಪರ್ವ ನಿಲ್ಲುವುದಿಲ್ಲ. ಒಂದು ದಿನ ಪ್ರಧಾನಿ ಮಂತ್ರಿಗಳನ್ನು ಕರೆದು ತಂದು ಉದ್ಘಾಟನೆ ಮಾಡುವ ಮಟ್ಟಕ್ಕೆ ಇದನ್ನು ಬೆಳೆಸುತ್ತೇವೆ ಎಂದು ಹೇಳಿದರು.

ಬೆಂಗಳೂರು ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಶ್ರೀ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಶರಣರಿಗೆ ಚಪ್ಪಲಿ ಪ್ರದರ್ಶನ ಮಾಡಿರುವ ಘಟನೆಯನ್ನು ಖಂಡಿಸಿದರು. ಇಂತಹ ಕಾರ್ಯ ಮಾಡಿದವರು ಲಿಂಗಾಯತ ಮತ್ತು ಬಸವಅನುಯಾಯಿಗಳು ಆಗಲು ನಾಲಾಯಕರು ಎಂದು ಆಕ್ರೋಶ ವ್ಯಕ್ತಪಡಿಸಿ, ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದರು.

ಕಲ್ಯಾಣ ಪರ್ವದಲ್ಲಿ ತೆಗೆದುಕೊಂಡ ನಿರ್ಣಯಗಳಂತೆ ಹಾಗೂ ಬೌದ್ಧ ಮಾದರಿಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಕೇಂದ್ರ ಸರ್ಕಾರ ಆಚರಿಸಬೇಕು. ಬಸವಕಲ್ಯಾಣಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಬೇಕು ಮತ್ತು ಅನುಭವ ಮಂಟಪಕ್ಕೆ ಕೇಂದ್ರ ಸರ್ಕಾರ ಕನಿಷ್ಟ ಒಂದು ಸಾವಿರ ಕೋಟಿ ರೂ. ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಕೂಡಲ ಸಂಗಮ ಬಸವ ಧರ್ಮ ಪೀಠ, ಪೀಠಾಧ್ಯಕ್ಷೆ ಶ್ರೀ ಜಗದ್ಗುರು ಮಾತೆ ಗಂಗಾದೇವಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸದ್ಗುರು ಶ್ರೀ ಬಸವಪ್ರಭು ಸ್ವಾಮೀಜಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೊಲಪೂರ, ಡಾ|ಬಸವರಾಜ ಹೂಗಾರ, ಜಯಶ್ರೀ ಪಾಟೀಲ, ಬಸವರಾಜ ಪಾಟೀಲ ಶಿವಪೂರ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next