Advertisement

ನಿರ್ವಹಣೆಯಿಲ್ಲದೇ ಬಾಲವನ ಪಾಳು

11:04 AM May 22, 2019 | Naveen |

ಬಸವಕಲ್ಯಾಣ: ಸರ್ಕಾರದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ನಗರದ ನುಲಿಯ ಚಂದಯ್ಯನವರ ಗವಿ ಪಕ್ಕದಲ್ಲಿ ನಿರ್ಮಿಸಲಾದ ಬಾಲ-ವನ ನಿರ್ವಹಣೆ ಕೊರತೆಯಿಂದ ಸಾರ್ವಜನಿಕರು ಮತ್ತು ಮಕ್ಕಳು ಅತ್ತ ತಿರುಗಿ ನೋಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ನಗರದಲ್ಲಿ ನರಸಭೆ ವ್ಯಾಪ್ತಿಗೆ ಒಳಪಡುವ ಬಹುತೇಕ ಉದ್ಯಾನಗಳು ಕೆಲವು ವರ್ಷಗಳ ಹಿಂದೆಯೇ ನಿರ್ವಹಣೆ ಇಲ್ಲದೆ ಹಾಳಾಗಿವೆ. ಮತ್ತೆ ಕೆಲವು ಅತಿಕ್ರಮಣಗೊಂಡು ಹಾಳಾಗಿರುವುದು ಒಂದುಕಡೆಯಾದರೆ, ಈಚೆಗೆ ಮಕ್ಕಳಿಗಾಗಿ ನಿರ್ಮಿಸಲಾದ ಬಾಲವನ ನಿರ್ವಹಣೆಗೆ ಅಧಿಕಾರಿಗಳು ನಿರ್ಲಕ್ಷ ತೋರಿರುವುದು ಆಕ್ರೋಷಕ್ಕೆ ಕಾರಣವಾಗಿದೆ.

ಗವಿ ಹಾಗೂ ಕೆರೆಯ ದಡದ ಹತ್ತಿರ ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾದ ಬಾಲವನದಲ್ಲಿ ಸಾಕಷ್ಟು ಹಣ ಖರ್ಚು ಮಾಡಿ, ಆರಂಭದಲ್ಲಿ ಹುಲ್ಲಿನ ಹಾಸಿಗೆ, ಬಗೆ ಬಗೆಯ ಮರಗಳು, ಮಕ್ಕಳ ಆಟಿಕೆಗಳು, ಪ್ರತ್ಯೇಕ ಶೌಚಾಲಯ ಮತ್ತು ಕ್ಯಾಂಟೀನ್‌ ಕಟ್ಟಡ ವ್ಯವಸ್ಥೆ ಮಾಡಲಾಗಿತ್ತು.

ಆದರೆ ನೀರಿನ ಕೊರತೆಯೊ ಅಥವಾ ನಿರ್ಲಕ್ಷ್ಯವೊ ಬಾಲವನ ಸಧ್ಯ ಕಸದ ತೊಟ್ಟಿಯಾಗಿ ಕೇಳುವವರು, ಹೇಳವರು ಇಲ್ಲದಂತಾಗಿದೆ. ಪುಂಡ- ಪೋಕರಿಗಳ ಠಿಕಾಣಿ ಹೂಡುವ ಸ್ಥಳವಾಗಿರುವುದು ಮಾತ್ರ ಶೋಚನೀಯ ಸಂಗತಿಯಾಗಿದೆ.

ಇದರಿಂದ ಬಾಲವನದಲ್ಲಿ ಪ್ಲಾಸ್ಟಿಕ್‌ ಚೀಲಗಳು ಮತ್ತು ಬಾಟಲ್ಗಳ ಸೇರಿದಂತೆ ತ್ಯಾಜ್ಯದ ರಾಶಿ ಬಿದ್ದಿದೆ. ಇಲ್ಲಿಗೆ ಬಂದವರು ಮೂಗು ಮುಚ್ಚಿಕೊಂಡು ಹಿಂತಿರುಗಿ ಬರುವಂತ ವಾತವರಣ ನಿರ್ಮಾಣವಾದೆ ಎಂಬುದು ಸಾರ್ವಜನಿಕರ ಆರೋಪವಾಗಿವೆ. ಮಕ್ಕಳು ಮತ್ತು ಸಾರ್ವಜನಿಕರ ಆಕರ್ಷಣೆಗಾಗಿ ಬಾಲವನದಲ್ಲಿ ಈಗಾಗಲೇ ಅಳವಡಿಸಲಾದ ಕುರ್ಚಿಗಳು ಹಾಳಾಗಿವೆ. ಮಕ್ಕಳ ಆಟಿಕೆ ವಸ್ತುಗಳು ಮುರಿದು ಬಿದ್ದಿವೆ. ಮರಗಳು, ಹುಲ್ಲಿನ ಹಾಸಿಗೆ ಸಂಪೂರ್ಣ ಒಣಗಿ, ಯಾವ ವಸ್ತುಗಳೂ ಉಪಯೋಗಕ್ಕೆ ಬಾರದಂತಾಗಿವೆ. ಆದರೂ ಸಂಬಂಧ ಪಟ್ಟವರು ನಿರ್ವಹಣೆ ಮಾಡುವುದು ಹೋಗಲಿ, ಇರುವ ವಸ್ತುಗಳನ್ನೂ ಸಂರಕ್ಷಣೆ ಮಾಡಲು ಮುಂದಾಗುತ್ತಿಲ್ಲ. ಕನಿಷ್ಟ ಪ್ರವೇಶದ ಬಾಗಿಲಿಗೆ ಒಂದು ಕೀಲಿಯನ್ನು ಕೂಡ ಹಾಕದೇ ಹಾಗೇ ಬೀಡಲಾಗಿದೆ ಎಂಬುದು ಜನರ ಆರೋಪವಾಗಿದೆ.

Advertisement

ಪಾಳುಬಿದ್ದ ಕ್ಯಾಂಟಿನ್‌ ಕಟ್ಟಡ: ಬಾಲವನದಲ್ಲಿ ನಿರ್ಮಿಸಲಾದ ಕ್ಯಾಂಟಿನ್‌ ಕಟ್ಟಡ ನಿರ್ವಹಣೆ ಕೊರತೆಯಿಂದ ಸಂಪೂರ್ಣ ಪಾಳು ಬಿದ್ದಿದೆ. ಕೋಣೆಗಳ ಬಾಗಿಲು, ಕಿಡಕಿ ಮುರಿದು ಹಾಕಲಾಗಿದೆ. ವಿದ್ಯುತ್‌ ಬೋರ್ಡ್‌ ಜೋತು ಬಿದ್ದಿವೆ. ಕಬ್ಬಿಣ ಸರಳುಗಳು ಹಾಳಾಗಿವೆ.

ಸಾವಿರಾರು ರೂ. ಖರ್ಚು ಮಾಡಿ ನೆಟ್ಟಿದ್ದ ಮರಗಳು ಮತ್ತು ಹುಲ್ಲಿನ ಹಾಸಿಗೆ ಸಂಪೂರ್ಣ ಒಣಗಿ ಹೋಗಿದೆ. ಇದರಿಂದ ಸದಾ ಜನ ಇರುವ ವನ ಈಗ ಯಾರೂ ಇಲ್ಲದೆ ಬಿಕೋ ಎನ್ನುತ್ತಿದೆ. ಒಂದು ವೇಳೆ ಬಾಲವನದಲ್ಲಿ ನೀರಿನ ಕೊರತೆ ಎದುರಾದಲ್ಲಿ, ಕನಿಷ್ಟ ಇರುವ ವಸ್ತುಗಳು ಮತ್ತು ಕ್ಯಾಂಟಿನ್‌ ಕಟ್ಟಡವನ್ನಾದರೂ ಹಾಳಾಗದಂತೆ ನೋಡಿಕೊಳ್ಳಬೇಕು. ಇನ್ನೂ ಕೆಲವು ದಿನ ಹಾಗೇ ಬಿಟ್ಟರೆ, ಒಂದು ವಸ್ತುಕೂಡ ಕೆಲಸಕ್ಕೆ ಬರುವುದಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಬಾಲವನ ನಿರ್ವಹಣೆ ಮಾಡಲು ಮುಂದಾಗಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next