Advertisement

ಪಾರಂಪರಿಕ ಕಲೆ ಪೋಷಣೆ ನಮ್ಮ ಜವಾಬ್ದಾರಿ

12:48 PM Aug 21, 2019 | Team Udayavani |

ಬಸವಕಲ್ಯಾಣ: ನಮ್ಮ ದೇಶದ ಪರಂಪರೆ ಉಳಿದಿರುವುದೇ ಭಜನೆ ಮತ್ತು ಕೀರ್ತನೆ ಹಾಡುವ ಕಲಾವಿದರಿಂದ. ಹಾಗಾಗೀ ಅಂಥಹ ಕಲಾವಿದರನ್ನು ಪ್ರೋತ್ಸಾಹಿಸಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಡಾ| ಚೆನ್ನವೀರ ಶಿವಾಚಾರ್ಯರು ಹೇಳಿದರು.

Advertisement

ಸುಕ್ಷೇತ್ರ ಹಾರಕೂಡ ಗ್ರಾಮದ ಹಿರೇಮಠ ಸಂಸ್ಥಾನದ ಶ್ರೀ ಚೆನ್ನರೇಣುಕಬಸವ ಮಂಟಪದಲ್ಲಿ ಸೋಮವಾರ ರಾತ್ರಿ ನಡೆದ ‘ಭಜನ ಸೇವಾರತ್ನ ಪ್ರಶಸ್ತಿ’ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಭಜನೆ ಮತ್ತು ಕಿರ್ತನೆ ಮಾಡುವ ಕಲಾವಿದರು ಜಾತಿ- ಮತ ಎನ್ನದೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ನಿಸ್ವಾರ್ಥ ಸೇವೆ ಮಾಡುವುದೇ ಅವರ ದೊಡ್ಡ ಗುಣವಾಗಿದೆ. ಅಂಥವರನ್ನು ನಾವು ಪ್ರೋತ್ಸಾಹಿಸುವ ಮೂಲಕ ನಮ್ಮ ಪರಂಪರೆಯಿಂದ ಬಂದ ಕಲೆಯನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ನಾರಾಯಣರಾವ್‌ ಮಾತನಾಡಿ, ದೇಶದಲ್ಲಿ ಆಯಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನ ಗುರುತಿಸಿ ಸರ್ಕಾರ, ಸಂಘ ಮತ್ತು ಸಂಸ್ಥೆಗಳು ಪ್ರಶಸ್ತಿ ಕೊಟ್ಟಿದ್ದನ್ನು ನೋಡಿದ್ದೇನೆ. ಆದರೆ ಸಣ್ಣ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವುದನ್ನು ಕೇವಲ ಹಾರಕೂಡ ಹಿರೇಮಠದಲ್ಲಿ ಮಾತ್ರ ನೋಡಿದ್ದೇನೆ ಎಂದು ಬಣ್ಣಿಸಿದರು.

ಮುಖ್ಯಮಂತ್ರಿ ಬಿಎಸ್‌ವೈ ಅವರನ್ನು ಭೇಟಿ ಮಾಡಿ ಗ್ರಾಮೀಣ ಭಾಗದ ಭಜನೆ ಮತ್ತು ಕೀರ್ತನೆ ಮಾಡುವ ಕಲಾವಿದರಿಗೆ ಮಾಶಾಸನ ಬರುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಬಿಜೆಪಿ ಮುಖಂಡ ರಾಜಕುಮಾರ ಬಿರಾದಾರ್‌ ಸಿರಗಾಪೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 25 ವರ್ಷಗಳಿಂದ ಭಜನೆ ಸೇವೆ ಸಲ್ಲಿಸುತ್ತಿರುವ ಕಲಾವಿದರಿಗೆ ಭಜನ ಸೇವಾರತ್ನ ಪ್ರಶಸ್ತಿ ನೀಡಿ, ಕರ್ನಾಟಕದ 6 ಕೋಟಿ ಜನರು ಒಪ್ಪುವಂತಹ ಕಾರ್ಯವನ್ನು ಶ್ರೀಗಳು ಮಾಡಿರುವುದು ಇತರರಿಗೆ ಮಾದರಿಯಾಗಿದೆ ಎಂದು ನುಡಿದರು.

Advertisement

ತಹಶೀಲ್ದಾರ್‌ ಸಾವಿತ್ರಿ ಶರಣು ಸಲಗರ ಮಾತನಾಡಿ, 12ನೇ ಶತಮಾನದಲ್ಲಿ ನಡೆದ ಸಮಾನತೆಯ ವಾತಾವರಣ 21ನೇ ಶತಮಾನದಲ್ಲಿ ಹಾರಹೂಡ ಶ್ರೀಗಳ ಮಠದಲ್ಲಿ ಕಾಣುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಪ್ರತಿಯೊಬ್ಬರ ಮೇಲೆ ಗುರುಗಳ ಆಶಿರ್ವಾದ ಮತ್ತು ಕರುಣೆ ಇದ್ದಾಗ ಮಾತ್ರ ಏನಾದರು ಸಾಧಿಸಲು ಸಾಧ್ಯ ಎಂದರು.

ಜಿಪಂ ಸದಸ್ಯ ರಾಜಶೇಖರ ಮೇತ್ರೆ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪಾ ಗುದಗೆ, ಜಿಪಂ ನಿವೃತ್ತ ಉಪಕಾರ್ಯದರ್ಶಿ ಬಿ.ಕೆ.ಹಿರೇಮಠ, ಕಾಶಪ್ಪಾ ಗುರುಲಿಂಗಪ್ಪಾ ದೇಗಾಂವ, ನಾಗೀಂದ್ರಪ್ಪಾ ಪಾಟೀಲ, ಕಂಟೆಪ್ಪಾ ಪಾಟೀಲ, ಜಗದೀಶ ಪಾಟೀಲ, ಚಂದ್ರಕಾಂತಸ್ವಾಮಿ ನಾರಾಯಣಪೂರ, ರಾಜು ದೇಗಾಂವ ಸೇರಿದಂತೆ ಮತ್ತಿತರರು ಇದ್ದರು.

ಒಟ್ಟು 25 ಭಜನಾ ಸಂಘಗಳಿಗೆ ‘ಭಜನ ಸೇವಾ ರತ್ನ’ ಪ್ರಶಸ್ತಿ ಜೊತೆಗೆ ಪ್ರತಿ ಸಂಘಗಳಿಗೆ 5 ಸಾವಿರ ರೂ. ನಗದು ಬಹುಮಾನ ನೀಡುವ ಮೂಲಕ ಶ್ರೀಗಳು ಕಲಾವಿದರನ್ನು ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next