ಬಸವಕಲ್ಯಾಣ: ದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಸಮುದಾಯವನ್ನು ಕಟ್ಟಿಹಾಕಿ ತಮ್ಮ ಅಧಿಕಾರದ ದಾಹ ತೀರಿಸಿಕೊಳ್ಳುತ್ತಿವೆ. ಅದರಿಂದ ಹೊರಬರದಿದ್ದರೆ ನಾವು ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಹಾಗೂ ಹೈದ್ರಾಬಾದ್ ಲೋಕಸಭಾ ಕ್ಷೇತ್ರದ ಸಂಸದ ಅಸಾದುದ್ದೀನ್ ಓವೈಸಿ ಆರೋಪಿಸಿದರು.
ನಗರದ ಭೋಸ್ಗೆ ಕಲ್ಯಾಣ ಮಂಟಪದಲ್ಲಿ ನಗರಸಭೆ ಚುನಾವಣೆ ನಿಮಿತ್ತ ಎವಿವಾರ ನಡೆದ ಎಐಎಂಐಎಂ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 40 ವರ್ಷಗಳಿಂದ ದೇಶದಲ್ಲಿ ಮುಸ್ಲಿಂ ಹಾಗೂ ದಲಿತರ ವಿರುದ್ಧ ನಿರ್ಮಾಣಗೊಂಡಿರುವ ವಾತಾವರಣವನ್ನು ಯುವಕರು ಬದಲಾವಣೆ ಮಾಡಲು ಮುಂದಾಗಬೇಕು ಎಂದರು. ಕಾಂಗ್ರೆಸ್ ಮುಖಂಡ ರೋಶನ್ ಬೇಗ ಅವರು ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸ್ಪರ್ಧೆ ಮಾಡಲು ಮುಸ್ಲಿಂ ಸಮುದಾಯಕ್ಕೆ ಕೇವಲ ಒಂದು ಟಿಕೇಟ್ ನೀಡಿದೆ ಎಂದು ಪಕ್ಷದ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದರು. ಇದನ್ನು ನೋಡಿದರೆ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಕಡೆಗಣಿಸುತ್ತಿದೆ ಎಂಬುದು ಸ್ವಷ್ಟವಾಗಿ ಗೊತ್ತಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿಗಳು ನಮ್ಮ ಕೈಯಲ್ಲಿಲ್ಲ. ಆದರೆ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನ ನಮ್ಮಲ್ಲಿದೆ. ಹೀಗಾಗಿ ಸಂವಿಧಾನದಲ್ಲಿ ಅವರು ನೀಡಿರುವ ಮತದಾನದ ಹಕ್ಕನ್ನು ಸಮರ್ಥವಾದ ಅಭ್ಯರ್ಥಿ ಪರವಾಗಿ ಚಲಾಯಿಸಬೇಕು ಎಂದರು.
ಎಚ್.ಡಿ.ಕುಮಾರಸ್ವಾಮಿ ಹಾಗೂ ಓವೈಸಿ ಬಿ ಟೀಂ ಎಂದು ಕಾಂಗ್ರೆಸ್ ಪಕ್ಷದವರು ವ್ಯಂಗ ಮಾಡಿದ್ದರು. ಆದರೆ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಡಿಮೆ ಸೀಟು ಬಂದಾಗ ತಮ್ಮ ಭ್ರಷ್ಟಚಾರಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಎಚ್.ಡಿ.ಕುಮಾರಸ್ವಾಮಿ ಅವರ ಮನೆ ಮುಂದೆ ನಿಂತು ಮುಖ್ಯಮಂತ್ರಿ ಮಾಡಿರುವುದನ್ನು ನಾನು ಮರೆತಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನನಗೆ ಕರುಣೆ ಬರುವುದಿಲ್ಲ. ಪ್ರಾರ್ಥನೆ, ತಪಸ್ಸು ಮಾಡಲಿ. ಆದರೆ ಕ್ಯಾಮರಾ ತೋರಿಸಿದರೆ ಸಾಕು ತಿರುಗಿ ಬೀಡುತ್ತಾರೆ ಎಂದು ವ್ಯಂಗ ಮಾಡಿದರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಹೆಲಿಪ್ಯಾಡ್ ಬಳಕೆ ಮಾಡುವ ಮೂಲಕ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಅದು ಯಾರ ದುಡ್ಡು ಎಂದು ಪ್ರಶ್ನಿಸಿದರು.
ಹೀಗಾಗಿ ಬರುವ ದಿನಗಳಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದವರು ಒಗ್ಗಟ್ಟಿನಿಂದ ಪಕ್ಷವನ್ನು ಬಲಿಷ್ಠ ಗೊಳಿಸುವ ಮೂಲಕ ಬಸವಕಲ್ಯಾಣ ನಗರಸಭೆ ಕಚೇರಿಯಲ್ಲಿ ಎಐಎಂಐಎಂ ಬಾವುಟ ಕಾಣುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಎಐಎಂಐಎಂ ಪಕ್ಷದ ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷ ಸೈಯದ್ ಅಕ್ತರ್ ನಿಜಾಮಿ ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.