ಕುಂದಗೋಳ: ವೀರಶೈವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಶಿತಿಕಂಠೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಭಕ್ತರು ಶ್ರೀಗಳ ವಿರುದ್ಧ ಘೋಷಣೆ ಕೂಗಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.
ಈ ವೇಳೆ ಶಿತಿಕಂಠೇಶ್ವರ ಸ್ವಾಮಿಗಳು ಮಾತನಾಡಿ, ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಕೆಲಸವನ್ನು ಧಾರ್ಮಿಕ ಮಠಗಳು ಮಾಡಬೇಕು. ಆದರೆ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳು ವೀರಶೈವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಸರಿಯಲ್ಲ ಎಂದರು.
ಹಿಂದೂ ಧರ್ಮ ಒಗ್ಗೂಡಿಸುವುದನ್ನು ಬಿಟ್ಟು ಕೆಲ ಸಚಿವರ ರಾಜಕೀಯ ಪಕ್ಷದ ಲಾಭಕ್ಕಾಗಿ ಕೂಡಲಸಂಗಮದ ಶ್ರೀಗಳು ಸ್ವಲಾಭ ಪಡೆದು ಅದರ ಪ್ರತಿಫಲವಾಗಿ ವೀರಶೈವ ಲಿಂಗಾಯತ ಧರ್ಮವನ್ನು ಒಡೆದು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಡುತ್ತಿರುವುದು ಸರಿಯಲ್ಲ.
ಸಾರ್ವಜನಿಕ ಸಭೆಗಳಲ್ಲಿ ಸಮಾಜದ ಧರ್ಮದ ಮುಖಂಡರ ಸಮ್ಮುಖದಲ್ಲಿ ಕ್ಷಮೆ ಕೇಳಬೇಕು. ಕೇಳದಿದ್ದರೆ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಕಲ್ಯಾಣಪುರದ ಬಸವಣ್ಣಜ್ಜನವರು ಮಾತನಾಡಿದರು.
ನಂತರ ಉಪ ತಹಶೀಲ್ದಾರ್ ಜಿ.ಜಿ. ಸವಣೂರ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಫಕ್ಕೀರಯ್ಯ ಮನಕಟ್ಟಿಮಠ, ಪಕ್ಕೀರೇಶ ನಾವಳ್ಳಿಮಠ, ಮಂಜುನಾಥ ಹಿರೇಮಠ, ಶಿವು ಕುಲಕರ್ಣಿ, ಶಿವಮೂರ್ತಯ್ಯ ಮಣಕಟ್ಟಿಮಠ, ರಾಚಮ್ಮ ಹಿರೇಮಠ, ಯಲ್ಲಮ್ಮ ಹೊಳಗಣ್ಣವರ, ವಿಜಯಕುಮಾರ ಹಿರೇಮಠ ಇದ್ದರು.