ಬೆಳಗಾವಿ: ಬಸವ ಸಮಾಜದಲ್ಲಿ ಬಲಪಂಥೀಯರ ಸಂಖ್ಯೆ ಹೆಚ್ಚುತ್ತಿರುವುದು ಸಮಾಜ ಸಂಘಟನೆ ಮತ್ತು ವಿಚಾರಧಾರೆಗಳ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್. ದರ್ಗೆ ಕಳವಳ ವ್ಯಕ್ತಪಡಿಸಿದರು.
ಗುರುಪೂರ್ಣಿಮೆ ಅಂಗವಾಗಿ ಮಂಗಳವಾರ ಬಸವ ಭೀಮ ಸೇನೆಯ ವತಿಯಿಂದ ನಗರದ ಶ್ರೀ ಬಸವೇಶ್ವರ ವೃತ್ತದ ಬಳಿಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಬಸವಣ್ಣನವರಿಗೆ ಗೌರವ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವ ಧರ್ಮಕ್ಕೆ ಬಾಹ್ಯ ಶಕ್ತಿಗಳಿಂದ ಯಾವ ಅಪಾಯ ಇಲ್ಲ. ಆಂತರಿಕ ಶಕ್ತಿಗಳಿಂದಲೇ ಅಪಾಯ ಎದುರಿಸುತ್ತಿದೆ ಎಂದರು.
ಇಡಿ ಜಗತ್ತಿಗೆ ಬಸವಣ್ಣನವರು ಒಬ್ಬ ವಿಸ್ಮಯಕಾರಿ ನಾಯಕರಾಗಿ ವಿಜೃಂಭಿಸುತ್ತಿರುವ ಈ ಸಂದರ್ಭದಲ್ಲಿ ಬಸವಾದಿ ಶರಣರ ಕರ್ಮಭೂಮಿ ಕರ್ನಾಟಕದಲ್ಲಿಯೇ ಬಸವ ಸಮಾಜ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ನಾಡಿನ ಹಿತ, ಸಮಾಜದ ಒಳಿತು, ಅಸ್ತಿತ್ವ, ಸಂಸ್ಕೃತಿ ಹಾಗೂ ಅಸ್ಮಿತೆಯ ಉಳಿವಿಗಾಗಿ ಸಮಾಜದ ನಾಯಕರು ಬಲಪಂಥೀಯ ಶಕ್ತಿಗಳಿಂದ ದೂರ ಸರಿದು ಧರ್ಮ ಗುರುವಿನ ಋಣ ತೀರಿಸಬೇಕು ಎಂದು ಹೇಳಿದರು.
ಸಮಸ್ತ ಲಿಂಗಾಯತ ಮೀಸಲಾತಿ ಹೋರಾಟ ವೇದಿಕೆಯ ಅಧ್ಯಕ್ಷ ಬಿ.ಎಂ. ಚಿಕ್ಕನಗೌಡರ ಮಾತನಾಡಿ, ಧರ್ಮ ಮತ್ತು ಸಂಸ್ಕೃತಿಯ ಉಳಿವಿನ ಹೋರಾಟದ ಜೊತೆಗೆ ಸಮಾಜದ ಬಡ ಮಕ್ಕಳ ಭವಿಷ್ಯದ ಬಗ್ಗೆಯೂ ನಾವಿಂದು ಹೋರಾಡಬೇಕಿದೆ. ಕೃಷಿ ಕಾಯಕ ಆಧಾರಿತ ಸಮಾಜವು ಮತ್ತೆ ಗೌರವಯುತ ಬದುಕು ಕಂಡುಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಮೀಸಲಾತಿ ಹೋರಾಟ ನಡೆಸಲಾಗುತ್ತಿದೆ ಎಂದರು.
ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ಬಸವಣ್ಣನವರು ಅನುಭವ ಮಂಟಪದ ಮೂಲಕ ಸಾರಿದ ಸಮಾನತೆಯ ಕ್ರಾಂತಿ ಮತ್ತೆ ಆರಂಭಿಸಬೇಕಾಗಿದೆ. ಜಗತ್ತಿನ ಇತಿಹಾಸದಲ್ಲಿ ಶೋಷಿತ ಸಮುದಾಯಗಳನ್ನು ಹಾಗೂ ಮಹಿಳೆೆಯರನ್ನು ಒಂದುಗೂಡಿಸಿ, ಅವರಿಗೆ ಸಮಾನತೆಯನ್ನು ಕಲ್ಪಿಸುವ ಮೂಲಕ ಸಮಾನತೆಯ ಸಮಾಜ ನಿರ್ಮಾಣ ಮಾಡಿರುವುದು ಬಸವಣ್ಣನವರ ಬಹುದೊಡ್ಡ ಕೊಡುಗೆ ಎಂದರು.
ಲಿಂಗಾಯತ ಸೇವಾ ಸಮಿತಿಯ ರಾಜು ಕುಂದಗೋಳ, ಸಂಚಾರಿ ಗುರುಬಸವ ಬಳಗದ ಬಸವರಾಜ ಪಾಟೀಲ, ಅಖೀಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ನ ನಗರಾಧ್ಯಕ್ಷ ಪ್ರಭು ಬೆಣ್ಣಿ, ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ, ವಿರೂಪಾಕ್ಷಿ ಯಲಿಗಾರ, ನ್ಯಾಯವಾದಿ ಚನ್ನಬಸಪ್ಪ ಬಾಗೇವಾಡಿ, ಆಕಾಶ ಹಲಗೇಕರ, ಕಿರಣ ಪಾಟೀಲ, ಬಿ.ಎಸ್.ಪಾಟೀಲ, ಸಿದ್ರಾಮ ಸಾವಳಗಿ, ಯಲ್ಲಪ್ಪ ಹುದಲಿ ಮುಂತಾದವರು ಭಾಗವಹಿಸಿದ್ದರು.