Advertisement

ಬಸವ ಯೋಜನೆ: ಮರು ನೋಂದಣಿಗೆ ಅವಕಾಶ

06:15 AM Sep 02, 2018 | |

ಬೆಂಗಳೂರು : ಬಸವ ವಸತಿ ಯೋಜನೆಯಡಿ ಫ‌ಲಾನುಭವಿಗಳಾಗಿ ಆಯ್ಕೆಯಾಗಿ ತಾಂತ್ರಿಕ ಕಾರಣಗಳಿಂದ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗದ ಫ‌ಲಾನುಭವಿಗಳು ಸೆ.5ರಿಂದ 20ರ ವರೆಗೆ ಮರು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ವಸತಿ ಸಚಿವ ಯು.ಟಿ.ಖಾದರ್‌ ಹೇಳಿದರು.

Advertisement

ನಗರದ ಕೆ.ಜಿ. ರಸ್ತೆಯಲ್ಲಿರುವ ರಾಜೀವ್‌ ಗಾಂಧಿ ವಸತಿ ನಿಗಮದಲ್ಲಿ ಶನಿವಾರ ಸ್ಪಂದನಾ- ವಸತಿ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015-16 ಮತ್ತು 2016-17ನೇ ಸಾಲಿನಲ್ಲಿ ನಿಗಮದಿಂದ ಗೃಹ ಸೌಲಭ್ಯ ಪಡೆದ ಅನೇಕರು ಆರೇಳು ತಿಂಗಳಾದರೂ ಮನೆ ನಿರ್ಮಾಣ ಮಾಡಿರುವುದಿಲ್ಲ. ಇಂತಹ ಫ‌ಲಾನುಭವಿಗಳ ಅರ್ಜಿ ರದ್ದು ಮಾಡಿದ್ದೆವು. ಈ ರೀತಿ ಸುಮಾರು 69 ಸಾವಿರ ಅರ್ಜಿ ರದ್ದಾಗಿದ್ದು, ಇಂತಹ ಫ‌ಲಾನುಭವಿಗಳು ನಿರ್ದಿಷ್ಟ ಕಾಲಮಿತಿಯೊಳಗೆ ಗೃಹ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಲು ಮರು ನೋಂದಣಿಗೆ ಸೆ.20ರವರೆಗೂ ಕಾಲಾವಕಾಶ ನೀಡಿದ್ದೇವೆ ಎಂದು ತಿಳಿಸಿದರು.

ನಿವೇಶನದ ಖಾಲಿ ಜಾಗದ ಛಾಯಚಿತ್ರ ಅಥವಾ ಮನೆಗೆ ನಿರ್ಮಾಣಕ್ಕೆ ಪಾಯ ಹಾಕಿರುವ ಛಾಯಾಚಿತ್ರವನ್ನು ಜಿಪಿಎಸ್‌ ಮೂಲಕ ಡೌನ್‌ಲೋಡ್‌ ಮಾಡಿದರೆ, ಅನುದಾನ ನೀಡಲು ನಿರ್ಧರಿಸಿದ್ದೇವೆ. ಇದು ಒಂದು ಬಾರಿ ಮಾತ್ರ. ಮತ್ತೂಮ್ಮೆ ನೀಡುವುದಿಲ್ಲ. ಅರ್ಹ ಫ‌ಲಾನುಭವಿಗಳು ಇದರ ಪ್ರಯೋಜನ ಪಡೆಯಬಹುದು ಎಂದು ವಿವರಿಸಿದರು.

ಕುಟುಂಬದ ವಾರ್ಷಿಕ ಆದಾಯ 32 ಸಾವಿರ ರೂ. ಇರುವ ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಮಾತ್ರ ನಿವೇಶ ನೀಡಬೇಕು ಎಂಬ ಷರತ್ತನ್ನು ಸಡಿಲಗೊಳಿಸಿ, 1.20 ಲಕ್ಷ ಆದಾಯ ಮಿತಿ ಹೊಂದಿರುವ ಬಿಪಿಎಲ್‌ ಕಾರ್ಡುಧಾರರಿಗೂ ವಸತಿ ಸೌಲಭ್ಯ ನೀಡಲು ಅವಕಾಶ ಕೋರಿ ಸರ್ಕಾರ ಮತ್ತು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. 32 ಸಾವಿರ ರೂ. ವಾರ್ಷಿಕ ಆದಾಯದವರಿಗೆ ಸೀಮಿತಮಾಡಿದರೆ ಶೇ.90ರಷ್ಟು ಅರ್ಹ ಫ‌ಲಾನುಭವಿಗಳಿಗೆ ನಿವೇಶ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಹತ್ತು ಹದಿನೈದು ವರ್ಷಗಳ ಹಿಂದೆಯೇ ನಿಗಮದಿಂದ ಅಥವಾ ಸರ್ಕಾರದ ಬೇರ್ಯಾವುದೇ ಯೋಜನೆಯಡಿ ಮನೆ ರಿಪೇರಿ ಮೊದಲಾದ ಉದ್ದೇಶಕ್ಕೆ ಸೌಲಭ್ಯ ಪಡೆದಿದ್ದ ಫ‌ಲಾನುಭವಿಗಳಿಗೆ ಆಧಾರ್‌ ಕಡ್ಡಾಯ ಮಾಡಿರುವುದರಿಂದ ಹೊಸ ಅರ್ಜಿ ಸಲ್ಲಿಸಲು ತೊಡಕಾಗುತ್ತಿದೆ.

Advertisement

ಇದನ್ನು ಸರಿಪಡಿಸಲು ಸರ್ಕಾರಕ್ಕೆ ಕೋರಿಕೊಂಡಿದ್ದೇವೆ. ಜತೆಗೆ ಆಶ್ರಯ ಯೋಜನೆಯಡಿ ಐದು ವರ್ಷಕ್ಕೂ ಮೊದಲು ಆಯ್ಕೆಯಾಗಿರುವರು ಈಗ ಮತ್ತೂಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಐದು ವರ್ಷದ ಹಿಂದೆ ವಸತಿ ನಿರ್ಮಾಣಕ್ಕೆ ನೀಡುತ್ತಿದ್ದ ಅನುದಾನ 20 ಸಾವಿರ ಅಥವಾ 30 ಸಾವಿರಕ್ಕೆ ಸೀಮಿತವಾಗಿತ್ತು. ಹೀಗಾಗಿ ಈ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೇವೆ ಎಂದು ವಿವರಿಸಿದರು.

ಕಳೆದ ಐದು ವರ್ಷದಲ್ಲಿ 15 ಲಕ್ಷ ಮನೆ ನಿರ್ಮಾಣದ ಗುರಿ ಹೊಂದಿದ್ದು, ಅದರಲ್ಲಿ 14.40 ಲಕ್ಷ ಮನೆ ನಿರ್ಮಾಣ ಮಾಡಿದ್ದೇವೆ. ಮುಂದಿನ ಐದು ವರ್ಷದಲ್ಲಿ 20 ಲಕ್ಷ ಮನೆ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಇದರಡಿಯಲ್ಲಿ ಈ ವರ್ಷ 4 ಲಕ್ಷ ಮನೆ ನಿರ್ಮಾಣ ಮಾಡಲಿದ್ದೇವೆ. ಆಧುನಿಕ ತಂತ್ರಜ್ಞಾನ ಬಳಸಿ 21 ದಿನದಲ್ಲಿ ಮನೆ ನಿರ್ಮಾಣ ಮಾಡುವ ವ್ಯವಸ್ಥೆಯೂ ನಮ್ಮಲ್ಲಿ ಇದೆ ಎಂದು ಹೇಳಿದರು.

ಕೊಡಗು ನಿರಾಶ್ರಿತರಿಗೆ ನಿಗಮದಿಂದ 25 ಲಕ್ಷ :
ನಿಗಮದಿಂದ ಮೊಬೈಲ್‌ ಆ್ಯಪ್‌ ಮೂಲಕ ಮನೆಗಳ ಪ್ರಗತಿ ಮತ್ತು ಆಧಾರ್‌ ಆಧಾರಿತ ಅನುದಾನ ಬಿಡುಗಡೆ ಸಾಫ್ಟ್ವೇರ್‌ ಬಳಕೆಗೆ ರಾಜ್ಯ ಸರ್ಕಾರದ ಇ-ಆಡಳಿತದಿಂದ ವಿನೂತನ ತಾಂತ್ರಿಕತೆ ಬಳಕೆ ವಿಭಾಗದಲ್ಲಿ ಪ್ರಶಸ್ತಿ ಹಾಗೂ 5 ಲಕ್ಷ ರೂ. ಬಹುಮಾನ ಬಂದಿದೆ. ಈ ಐದು ಲಕ್ಷ ರೂ. ಮತ್ತು ನಿಗಮದ 20 ಲಕ್ಷ ರೂ. ಸೇರಿಸಿ, 25 ಲಕ್ಷ ರೂ.ಗಳನ್ನು ಕೊಡಗಿನ ನಿರಾಶ್ರಿತರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಿದ್ದೇವೆ ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.

ಕೊಡಗಿನಲ್ಲಿ ಮನೆ ನಿರ್ಮಾಣಕ್ಕೆ ಪ್ರಸ್ತಾವನೆ :
ಕೊಡಗಿನ ನಿರಾಶ್ರಿತರ ಪುನರ್ವಸತಿ ಸಂಬಂಧ ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ  ಅಗತ್ಯ ಕ್ರಮ ತೆಗೆದುಕೊಳ್ಳಲಿದೆ. ಜಿಲ್ಲಾಡಳಿತದಿಂದ ಈಗಾಗಲೇ 42 ಎಕರೆ ಜಾಗ ಗುರುತಿಸಲಾಗಿದೆ. ಅದರಲ್ಲಿ 24 ಎಕರೆ ಜಾಗಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಇವೆ. ಮನೆ ಕಳೆದುಕೊಂಡ ಜಾಗದಲ್ಲೇ ಪುನಃ ಮನೆ ನಿರ್ಮಾಣ ಎಷ್ಟು ಕಡೆಗಳಲ್ಲಿ ಸಾಧ್ಯ ಎಂಬುದನ್ನು ನೋಡುತ್ತಿದ್ದೇವೆ. ಮನೆ ಕಟ್ಟಲು ಸಾಧ್ಯವಾದ ಕಡೆಗಳಲ್ಲಿ ಸರ್ಕಾರದಿಂದಲೇ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಬೇರೆ ಕಡೆಗಳಲ್ಲಿ ಶಾಶ್ವತ ಪುನರ್‌ ವಸತಿ ಮಾಡಬೇಕಿರುವುದನ್ನು ಮಾಡುತ್ತದೆ. ತಾತ್ಕಾಲಿಕ ಶೆಡ್‌ ನಿರ್ಮಾಣದ ಬದಲಿಗೆ ಬಾಡಿಗೆ ನಿರಾಶ್ರಿತರು ಬಾಡಿಗೆ ಅಥವಾ ಸಂಬಂಧಿಕರ ಮನೆಯಲ್ಲಿ ಇದ್ದರೆ ತಿಂಗಳಿಗೆ ಬಾಡಿಗೆ ರೂಪದಲ್ಲಿ ಒಂದು ವರ್ಷದವರೆಗೂ ಸರ್ಕಾರದಿಂದ ಅನುದಾನ ನೀಡುವ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಸಚಿವರು ತಿಳಿಸಿದರು.

ತಾತ್ಕಾಲಿಕ ವಸತಿ ಸೌಲಭ್ಯದ ಜತೆಗೆ ಎಲ್ಲ ರೀತಿಯ ಮೂಲ ಸೌಕರ್ಯ ಸೃಷ್ಟಿಸಿ ನೀಡಬೇಕಾಗುತ್ತದೆ. ಹೀಗಾಗಿ ಶಾಶ್ವತ ವಸತಿ ವ್ಯವಸ್ಥೆಯಾಗುವ ವರೆಗೂ ಬಾಡಿಗೆ ಮನೆಯಲ್ಲಿ ಸರ್ಕಾರದಿಂದಲೇ ವ್ಯವಸ್ಥೆ ಮಾಡಿಕೊಡುವುದು ಉತ್ತಮ ಎಂದರು.

ವಸತಿ ಸಹಾಯವಾಣಿ
ವಸತಿ ಯೋಜನೆ ಸಂಬಂಧಿಸಿದಂತೆ ರಾಜಕೀಯ ಉದ್ದೇಶಕ್ಕಾಗಿ ಜನರಲ್ಲಿ ತಪ್ಪು ಸಂದೇಶ ರವಾನೆಯಾಗುತ್ತಿದೆ. ಜನರಲ್ಲಿರುವ ಸಂಶಯ ದೂರ ಮಾಡಲು ಮತ್ತು ಹೊಸ ಯೋಜನೆಯ ಮಾಹಿತಿ ನೀಡಲು ಸ್ಪಂದನಾ ವಸತಿ ಸಹಾಯವಾಣಿ ಕೇಂದ್ರ ಆರಂಭಿಸಿದ್ದೇವೆ. ಬೆಳಗ್ಗೆ 9ರಿಂದ ಸಂಜೆ .30ರ ವರೆಗೂ ಇದು ಕಾರ್ಯ ನಿರ್ವಹಿಸಲಿದೆ. 23118888ಕರೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಮತ್ತು ದೂರುಗಳನ್ನು ನೀಡಬಹುದು ಎಂದು ಸಚಿವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next