Advertisement

ನಾಡಕಚೇರಿ ಆವರಣದಲ್ಲೆ ಅಶಿಸ್ತು 

12:00 PM Mar 04, 2019 | Team Udayavani |

ಬಸವಕಲ್ಯಾಣ: ಹೋಬಳಿ ಮಟ್ಟದ ಗ್ರಾಮದಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಮತ್ತು ಸಾರ್ವಜನಿಕರ ಕುಂದು ಕೊರತೆಗಳನ್ನು ಬಗೆಹರಿಸುವ ಉದ್ದೇಶದಿಂದ ಆರಂಭಿಸಲಾದ ನಾಡಕಚೇರಿ ಆವರಣವೇ ಸಮಸ್ಯೆಯಿಂದ ಕೂಡಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ಇದು ತಾಲೂಕಿನ ಜಿಲ್ಲಾ ಪಂಚಾಯತಿ ಕ್ಷೇತ್ರವಾದ ಮುಡಬಿ ಗ್ರಾಮದ ನಾಡಕಚೇರಿ ಆವರಣದ ಸ್ಥಿತಿ. ಹಾಗಾಗಿ ವಿವಿಧ ಕೆಲಸ ಕಾರ್ಯಗಳಿಗಾಗಿ ಇಲ್ಲಿಗೆ ಆಗಮಿಸುವ ಸಾರ್ವಜನಿಕರು, ವೃದ್ಧರು ಮತ್ತು ಪಕ್ಕದಲ್ಲಿ ಹಾಸ್ಟೇಲ್‌ನಲ್ಲಿ ವಾಸ ಮಾಡುವ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.

ನಾಡಕಚೇರಿ ಎದುರು ಇರುವ ಸ್ಥಳ ಕಸದ ರಾಶಿ ಮಾಡುವ ತಿಪ್ಪೆಯಾಗಿ ಮಾರ್ಪಟ್ಟಿದ್ದು, ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು, ಗ್ರಾಪಂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸದೇ ತಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲದಂತೆ ಕಣ್ಣು ಮುಚ್ಚಿ ಕುಳಿತುಕೊಂಡಿ ರುವುದರಿಂದ ಸಾರ್ವಜನಿಕರ ಈ ಕುರಿತು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

ತ್ಯಾಜ್ಯ ವಿಲೇವಾರಿ ಆಗದ ಹಿನ್ನೆಲೆಯಲ್ಲಿ ಹಂದಿ ಹಾಗೂ ನಾಯಿಗಳು ಠಿಕಾಣಿ ಹೂಡುತ್ತಿವೆ. ಇದರಿಂದ ಸೊಳ್ಳೆಗಳ ಕಾಟ ಜಾಸ್ತಿಯಾಗಿ ಪಕ್ಕದ ವಸತಿ ನಿಲಯದಲ್ಲಿ ಇರುವ ವಿದ್ಯಾರ್ಥಿಗಳು ರಾತ್ರಿ ಸಮಯದಲ್ಲಿ ತೊಂದರೆ ಅನುಭವಿಸುವುದು ಒಂದು ಕಡೆಯಾದರೆ, ಭಯಾನಕ ಸಾಂಕ್ರಾಮಿಕ ರೋಗಗಳು ಹರಡಬಹುದೆಂಬ ಆತಂಕ ಪಡುವಂತಾಗಿದೆ ಎಂದು ತಮ್ಮ ನೋವು ತೋಡಿಕೊಂಡರು.

ಕಚೇರಿ ಆವರಣದಲ್ಲಿ ಮೂರು ಶೌಚಾಲಯಗಳು ಇದ್ದು, ಅವುಗಳಲ್ಲಿ ಒಂದು ಕೂಡ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿವೆ. ಇದರಿಂದ ಕೆಲಸ ನಿಮಿತ್ತ ಬರುವ ಹಣಮಂತವಾಡಿ, ಮುಡಬಿವಾಡಿ, ಬಗದುರಿ, ಹತಿಯಾಳಾ, ಖಾನಾಪೂರ, ಹಿರನಾಗಾಂವ, ಹಾರಕೂಡ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ನೂರಾರು ಜನರು ಬಯಲಿಗೆ ರಸ್ತೆ ಪಕ್ಕಕ್ಕೆ ಹೋಗುವಂತ ಸ್ಥಿತಿ ಇಲ್ಲಿದೆ.

Advertisement

ಆದ್ದರಿಂದ ಸಂಬಂಧ ಪಟ್ಟವರು ನಾಡಕಚೇರಿ ಎದುರು ಇರುವ ಕಸವನ್ನು ವಿಲೇವಾರಿ ಮಾಡಲು ಮತ್ತು ಶೌಚಾಲಯಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಮೂಲಕ ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ವೀರಾರೆಡ್ಡಿ.ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next