Advertisement

ಬಿಜೆಪಿ ಮುಖಂಡರಿಂದ ಬಸವ ಜಯಂತಿ

02:40 PM Apr 19, 2018 | |

ಬೆಂಗಳೂರು: ಬಸವ ಜಯಂತಿ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಹಲವು ನಾಯಕರು ಬುಧವಾರ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಗೌರವ ಸಲ್ಲಿಸಿದರು. ಅಶ್ವಾರೂಢ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಅನುಕೂಲವಾಗುವಂತೆ ಕ್ರೇನ್‌ ವ್ಯವಸ್ಥೆ ಮಾಡಲಾಗಿತ್ತು. ಅದರ ಮೇಲೆ ನಿಂತೇ ಅಮಿತ್‌ ಶಾ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮಾಲಾರ್ಪಣೆ ಮಾಡಿದರು.

Advertisement

ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್‌, ಪ್ರಕಾಶ್‌ ಜಾವಡೇಕರ್‌, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಸಂಸದರಾದ ಪಿ.ಸಿ.ಮೋಹನ್‌, ಪ್ರಹ್ಲಾದ್‌ ಜೋಶಿ, ಶಾಸಕರಾದ ಎಸ್‌.ಸುರೇಶ್‌ಕುಮಾರ್‌, ಬಿ.ಎನ್‌.ವಿಜಯಕುಮಾರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಇತರರು ಪಾಲ್ಗೊಂಡಿದ್ದರು.

ಈ ವೇಳೆ ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ, ಸರ್ಕಾರ ಇರುವುದು ಧರ್ಮ ಮಾಡುವುದಕ್ಕಲ್ಲ. ಆ ಕೆಲಸವನ್ನು ಸಮಾಜದ ಗಣ್ಯರು, ಸಂತರು ಮಾಡುತ್ತಾರೆ. ಲಿಂಗಾಯತ- ವೀರಶೈವ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿಯಲ್ಲಿ ಒಬ್ಬ ಲಿಂಗಾಯತ, ವೀರಶೈವರೂ ಇರಲಿಲ್ಲ. ಇದರಿಂದಲೇ ಎಲ್ಲವೂ ಅರ್ಥವಾಗುತ್ತದೆ ಎಂದು ಹೇಳಿದರು. 

ಇದೇ ವೇಳೆ ಲಿಂಗಾಯತ- ವೀರಶೈವ ಪ್ರತ್ಯೇಕ ಧರ್ಮ ಮಾನ್ಯತೆ ವಿಚಾರದಲ್ಲಿ ಬಿಜೆಪಿ ನಿಲುವನ್ನು ಅಮಿತ್‌ ಶಾ ಅವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿ ಜಾಗತಿಕ ಲಿಂಗಾಯತ ಮಹಾಸಭಾ ಸದಸ್ಯರು ಪ್ರತಿಭಟನೆಗೆ ಮುಂದಾದರು. ಭಿತ್ತಿಪತ್ರ ಹಿಡಿದು ಧರಣಿಗೆ ಮುಂದಾಗ ಸದಸ್ಯರನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದರು. ನಂತರ ಅಮಿತ್‌ ಶಾ ಹಾಗೂ ಯಡಿಯೂರಪ್ಪ ಅವರು ಅಲ್ಲಿಂದ ನಿರ್ಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next