Advertisement

ಜಿಲ್ಲಾದ್ಯಂತ ಬಸವ ಜಯಂತಿ ಸಂಭ್ರಮ

10:07 PM May 07, 2019 | Lakshmi GovindaRaj |

ದೇವನಹಳ್ಳಿ: ಬಸವಣ್ಣನವರು ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ, ಕಂದಾಚಾರ, ಮೂಢ ನಂಬಿಕೆಗಳನ್ನು ತೊಡೆದು ಹಾಕಲು ಶ್ರಮಿಸಿದ್ದಲ್ಲದೇ, ಮಾನವೀಯತೆಯನ್ನು ಎತ್ತಿ ಹಿಡಿದ ವಿಶ್ವದ ಮಹಾನ್‌ ಗುರು ಎಂದು ಗುರುತಿಸಿಕೊಂಡಿದ್ದಾರೆ ಎಂದು ಬಸವ ತತ್ವ ಚಿಂತಕ ಬಸವರಾಜ್‌ ತಿಳಿಸಿದರು.

Advertisement

ಕುಂದಾಣ ಹೋಬಳಿ ಚಪ್ಪರದಕಲ್ಲು ಸರ್ಕಲ್‌ ಬಳಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಜಿಲ್ಲಾ ಮಟ್ಟದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಸ್ಯೆಗಳ ವಿರುದ್ಧ ಹೋರಾಟ: 12ನೇ ಶತಮಾನದಲ್ಲಿ ಬಿಜ್ಜಳನ ರಾಜ್ಯದಲ್ಲಿ ಅರ್ಥ ಸಚಿವರಾಗಿದ್ದ ಬಸವಣ್ಣ, ಸಮಾಜದಲ್ಲಿನ ಹಲವಾರು ಸಮಸ್ಯೆಗಳನ್ನು ಬುಡ ಸಮೇತ ಕಿತ್ತು ಹಾಕಲು ಶ್ರಮಿಸಿದ್ದಾರೆ ಎಂದು ಹೇಳಿದರು.

ಸಂವಿಧಾನದಲ್ಲೂ ಬಸವಣ್ಣನ ತತ್ವ: ವೀರಶೈವ ಲಿಂಗಾಯುತ ಯುವ ಘಟಕದ ಜಿಲ್ಲಾಧ್ಯಕ್ಷ ಪ್ರಶಾಂತ್‌ ಕಲ್ಲೂರು ಮಾತನಾಡಿ, ಬಸವಣ್ಣ ಇದೇ ನೆಲದಲ್ಲಿ ಹುಟ್ಟಿ 886ವರ್ಷಗಳೇ ಕಳೆದಿವೆ. ಸಮಾನತೆಗಾಗಿ ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನದಲ್ಲಿಯೂ ಸಹ ಬಸವಣ್ಣನವರ ತತ್ವಗಳ ಪರಿಕಲ್ಪನೆಗಳಿವೆ.

ಬಸವ ಜಯಂತಿ ಬರೀ ಲಿಂಗಾಯತ ವೀರಶೈವರಿಗೆ ಮಾತ್ರ ಸೀಮಿತವಲ್ಲ. ಎಲ್ಲಾ ಸಮುದಾಯಗಳ ಒಳತಿಗಾಗಿ ಹೋರಾಟ ನಡೆಸಿದ ಆದರ್ಶ ಪುರಷ ಬಸವಣ್ಣನವರ ಜಯಂತಿಯನ್ನು ಎಲ್ಲರೂ ಆಚರಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಸಮಾಜ ಸುಧಾರಕ: ರಾಜ್ಯ ವಿಜ್ಞಾನ ಪರಿಷತ್‌ ಉಪಾಧ್ಯಕ್ಷ ಹುಲಿಕಲ್‌ ನಟರಾಜ್‌ ಮಾತನಾಡಿ, ಬಸವಣ್ಣ ಬದುಕಿದ್ದು ಕೇವಲ 65 ವರ್ಷ. 12ನೇ ಶತಮಾನದಲ್ಲಿ ಹದಗೆಟ್ಟಿದ್ದ ಸಮಾಜದಲ್ಲಿನ ಅಂಕುಡೊಂಕುಗಳನ್ನು ಸುಧಾರಿಸುವ ಕಾಯಕವನ್ನು ಬಸವಣ್ಣನವರು ಮಾಡುತ್ತಿದ್ದರು. ಸಮಾನತೆ ಎಂಬ ದಿವ್ಯ ಜ್ಯೋತಿಯನ್ನು ತರುವುದರ ಮೂಲಕ ಎಲ್ಲರ ಮನಸ್ಸಿನಲ್ಲಿ ಚಿರಾಯು ಆದವರಲ್ಲಿ ಒಬ್ಬರಾರಿಗದ್ದಾರೆ.

ಹಲವಾರು ಗಣ್ಯರು ವಿಶ್ವಕ್ಕೆ ತಮ್ಮದೇ ಆದ ಹಲವಾರು ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಬಸವಣ್ಣನವರು ಸಹ ವಚನ ಸಾಹಿತ್ಯದ ಮೂಲಕ ತಮ್ಮ ಅಪಾರ ಕೊಡುಗೆಯನ್ನು ನೀಡಿದ್ದಾರೆ. ವೈಚಾರಿಕತೆಗೆ ಹೆಚ್ಚಾಗಿ ಒತ್ತು ನೀಡುತ್ತಿದ್ದರು. ಅಸ್ಪೃಶ್ಯತೆಯ ವಿರುದ್ಧ ಹೋರಾಟಗಳನ್ನು ನಡೆಸುತ್ತಿದ್ದರು ಎಂದು ಹೇಳಿದರು.

ವ್ಯಕ್ತಿ ಪೂಜೆ ಬೇಡ: ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್‌ ಒಂದು ರೀತಿಯ ಕೆಚ್ಚೆದೆಯ ವೀರರು. ವಚನಗಳು ಸಂವಿಧಾನ ಹಾಗೂ ಕಾನೂನು ರಚನೆಗೆ ಮೂಲ ಪ್ರೇರಣೆಯಾಗಿದೆ. ವ್ಯಕ್ತಿ ಪೂಜೆಗಿಂತ ಮಹನೀಯರ ಆದರ್ಶ ಪಾಲನೆಗೆ ಹೆಚ್ಚು ಒತ್ತು ನೀಡುವಂತಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸುಧಾ ಪಾಟೀಲ್‌, ವಕೀಲೆ ಪೂರ್ಣಿಮ ಮಲ್ಲೇಶ್‌, ವೀರಶೈವ ಲಿಂಗಾಯುತ ಸಮಾಜದ ತಾಲೂಕು ಘಟಕಾಧ್ಯಕ್ಷ ರಮೇಶ್‌, ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್‌, ಖಜಾಂಚಿ ಕೋಡಿಹಳ್ಳಿ ನಾಗೇಶ್‌, ಉಪಾಧ್ಯಕ್ಷ ನಾಗಭೂಷಣ್‌, ಮಹಿಳಾ ಘಟಕದ ಉಪಾಧ್ಯಕ್ಷ ಶಶಿಕಲಾ, ಮುಖಂಡರಾದ ಬಸವರಾಜು, ವೀರಭದ್ರಪ್ಪ, ವೈ.ಸಿ.ಸತೀಶ್‌, ಆರ್‌.ಗಿರೀಶ್‌, ಪ್ರಕಾಶ್‌, ವಿಶ್ವನಾಥ್‌, ಸೋಮಶೇಖರ್‌, ಶಾಂತಕುಮಾರ್‌, ನಳಿನಾ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next