ವಿಜಯಪುರ: ಹಿಂದುಳಿದ ಶಾಶ್ವತ ಆಯೋಗ ಇರುವಾಗ ರಾಜ್ಯ ಸರ್ಕಾರ ರಾಜ್ಯ ಸರ್ಕಾರ ಪಂಚಮಸಾಲಿ ಮೀಸಲು ಕಲ್ಪಿಸುವ ವಿಷಯವಾಗಿ ನ್ಯಾ.ಸುಭಾಷ್ ಆಡಿ ನೇತೃತ್ವದ ಸಮಿತಿ ರಚಿಸಿದೆ. ಇದು ಸಮಯ ವ್ಯರ್ಥ ಮಾಡುವ ಹುನ್ನಾರ ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಆಕ್ಷೇಪಿಸಿದ್ದಾರೆ.
ಸೋಮವಾರ ನಗರದ ಅಕ್ಟೋಬರ್ 1 ನೀಡಿದ್ದ ಗಡುವಿನ ಸಂದರ್ಭದಲ್ಲಿ ಸರ್ಕಾರ ಕಾಲಾವಕಾಶ ಕೋರಿತ್ತು. ಇದೀಗ ಮತ್ತೆ ಆಡಿ ನೇತೃತ್ವದಲ್ಲಿ ಸಮಿತಿ ರಚಿಸಿರುವುದು ಕಾಲಹರಣದ ಕ್ರಮ ಎಂದರು.
ನ್ಯಾ.ಸುಭಾಷ್ ಆಡಿ ನೇತೃತ್ವದ ಸಮಿತಿ ಶಾಸನ ಬದ್ದವಲ್ಲ. ಶಾಸನ ಬದ್ಧವಾದ ಹಿಂದುಳಿದ ವರ್ಗಗಳ ಶಾಸ್ವತ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು.
ಮೀಸಲು ವಿಷಯವಾಗಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಬೆಳಗಾವಿ, ಬಾಗಲಕೋಟೆ ಅಥವಾ ವಿಜಯಪುರ ನಗರದಲ್ಲಿ ಸಮಾಜದ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗುತ್ತದೆ. ಶೀಘ್ರವೇ ಸದರಿ ಕಾರ್ಯಕಾರಿ ಸಭೆ ಕರೆದು ಮುಂದಿನ ಹೋರಾಟದ ಕುರಿತು ನಿರ್ಧರಿಸಲಾಗುತ್ತದೆ ಎಂದರು.
ಇದನ್ನೂ ಓದಿ:ಅಗತ್ಯ ಬಿದ್ದರೆ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ : ಸಚಿವ ನಾಗೇಶ್
ಕಿತ್ತೂರು ಚೆನ್ನಮ್ಮನ ಕಾಲದಿಂದಲೂ ಸಮಾಜ ಒಡೆಯುವ ಹುನ್ನಾರ ನಡೆಯುತ್ತಿದೆ. ಈಗಲೂ ಮುಂದುವರೆದಿದೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸಮಾಜದ ಸಂಘಟನೆ ಹಾಗೂ 2ಎ ಮೀಸಲು ಸೌಲಭ್ಯ ಕಲ್ಪಿಸುವ ಕುರಿತು ನಿರ್ಧರಿಸಲಾಗುತ್ತದೆ ಎಂದರು.
ಪಂಚಮಸಾಲಿ ಸಮಾಜದ ಎಂ.ಎಸ್.ರುದ್ರಗೌಡರ, ಡಾ.ಬಸನಗೌಡ ಪಾಟೀಲ ನಾಗರಾಳಹುಲಿ, ಶಂಕರಗೌಡ ಬಿರಾದಾರ, ನಿಂಗನಗೌಡ ಸೊಲ್ಲಾಪುರ ಇತರರು ಉಪಸ್ಥಿತರಿದ್ದರು.