Advertisement

ಬಸವ ಆಶಯ ಪಾಲಿಸಿದೆ ಕಾಂಗ್ರೆಸ್‌

02:40 PM Feb 26, 2018 | |

ಮುಳವಾಡ (ವಿಜಯಪುರ): ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯಲ್ಲೇ ಜನ್ಮತಳೆದ ಕಾಂಗ್ರೆಸ್‌ ಭಾರತಕ್ಕೆ ವಿಶ್ವವೇ ಬೆರಗಾಗುವ ಅತಿ ದೊಡ್ಡ ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆಯನ್ನು ನೀಡಿದೆ. ಕಾಂಗ್ರೆಸ್‌ ಪಕ್ಷ ಬಸವೇಶ್ವರರ ಆಶಯದಲ್ಲೇ ನಡೆಯುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

Advertisement

ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ ಅವರು, ಬಸವಜನ್ಮ ಭೂಮಿಗೆ ಬಂದು ನಾನು ಬಹಳಷ್ಟನ್ನು ತಿಳಿಯಲು ಸಾಧ್ಯವಾಯಿತು. ಕಾಯಕವೇ ಕೈಲಾಸ, ನುಡಿದಂತೆ ನಡೆ ಎಂದು ಬಸವೇಶ್ವರರು ಹೇಳಿದ ಮಾತುಗಳು ಅದ್ಭುತವಾಗಿದೆ ಎಂದರು. ಬಸವೇಶ್ವರರನ್ನು ಪದೇ ಪದೇ ಸ್ಮರಿಸುವ ಮೋದಿ ಅವರು “ಕಾಯಕವೇ ಕೈಲಾಸ’ ಎಂದರೆ ಕಾಯಕವೇ ದೇವರು ಎಂಬುದು ತಿಳಿದಿಲ್ಲ. ಅವರಿಗೆ ನುಡಿದಂತೆ ನಡೆಯುವುದು ಎಂದರೆ ಏನು ಎಂಬುದೇ ಗೊತ್ತಿಲ್ಲ. ಮೊದಲು ಬಸವೇಶ್ವರರು ಹಾಗೂ ವಚನಗಳ ಸಾರ ಅರಿತು ಅದರಂತೆ ನಡೆಯಲಿ, ನುಡಿದಂತೆ ಮಾಡಿ ತೋರಿಸಲಿ ಎಂದರು.

ನೋಟ್‌ ಬ್ಯಾನ್‌, ಉದ್ಯೋಗ ಸೃಷ್ಟಿ, ಬಡವರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ಜಮೆ ಹೀಗೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ ರಾಹುಲ್‌ ಕೊನೆಗೆ “ನುಡಿದಂತೆ ನಡೆ’ ಎಂದು ಹೇಳುತ್ತಿದ್ದರು. ಮೇಕ್‌ ಇನ್‌ ಇಂಡಿಯಾ ಎಂದ ಮೋದಿ ಭಾರತದಲ್ಲಿ ಅತಿ ಹೆಚ್ಚು ಚೈನಾ ಉತ್ಪಾದನೆಯ ವಸ್ತುಗಳು ಮಾರಾಟ ಆಗುತ್ತಿರುವುದೇಕೆ ಎಂಬುದನ್ನು ಉತ್ತರಿಸಬೇಕು ಎಂದರು. ಗುಜರಾತನಲ್ಲಿ ಶಿಕ್ಷಣ ಉದ್ಯಮಿಗಳ ಕೈಗೆ ಸಿಕ್ಕು ವ್ಯಾಪಾರೀಕರಣಗೊಂಡಿದೆ. ಬಡವರ ಮಕ್ಕಳು 15 ಲಕ್ಷಕ್ಕೂ ಅಧಿಕ ಹಣ ಹೊಂದಿಸುವ ದುಸ್ಥಿತಿ ಬಂದೊದಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ನೀಡುತ್ತಿದೆ.ಆದರೆ ಗುಜರಾತನಲ್ಲಿ ಆರೋಗ್ಯ ಸೇವೆ ಖಾಸಗೀಕರಣಗೊಂಡು ಜನರು ತತ್ತರಿಸಿದ್ದಾರೆ ಎಂದರು.

ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಆಪರೇಷನ್‌, ರೋಗ ಪರೀಕ್ಷೆಗಳು ಉಚಿತವಾಗಿವೆ. ಗಂಭೀರ ರೋಗ ಚಿಕಿತ್ಸೆಗೆ ವಿಮೆ ವ್ಯವಸ್ಥೆ ಮಾಡಲಾಗಿದೆ. “ನುಡಿದಂತೆ ನಡೆ’ ಎಂದರೇನು ಎಂಬುವುದನ್ನು ಕರ್ನಾಟಕ ಸರ್ಕಾರದ ಕೆಲಸ ನೋಡಿ ಕಲಿಯಲಿ ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರು ರಾಹುಲ್‌ ಗಾಂಧಿ ಅವರಿಗೆ ಬಸವೇಶ್ವರರ ಭಾವಚಿತ್ರ ನೀಡಿ ಸನ್ಮಾನಿಸಿದರು. 

ಮೋದಿ ಮೌನ ಅಣುಕು ಮಾಡಿದ ರಾಗಾ 
ವಿಜಯಪುರ: ಜಿಲ್ಲೆಯ ನೂತನ ಕೊಲ್ಹಾರ ತಾಲೂಕಿನ ಮುಳವಾಡದಲ್ಲಿ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸುಮಾರು 25 ಸೆಕೆಂಡ್‌ ಭಾಷಣ ನಿಲ್ಲಿಸಿ ಪ್ರಧಾನಮಂತ್ರಿ ಮೋದಿ ಅವರ ಅಣುಕು ಮಾಡಿ ಕುಟುಕಿದರು. ಪ್ರಧಾನಿ ಮೋದಿ ಅವರನ್ನು ನಾನು ಒಮ್ಮೆ ಭೇಟಿ ಮಾಡಿದ್ದೆ. ದೇಶದಲ್ಲಿ ಕೈಗಾರಿಕೋದ್ಯಮಿಗಳ 1.40 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದೀರಿ. ಅದರ ಅರ್ಧದಷ್ಟಿರುವ ರೈತರ ಕೃಷಿ ಸಾಲ ಮನ್ನಾ ಮಾಡಿ ಎಂದು ಮನವಿ ಮಾಡಿದೆ. ಆಗ ಪ್ರಧಾನಿ ಅವರು ಏನು ಮಾಡಿದರು ಗೊತ್ತೇ ಎಂದು ಹೇಳಿ ಸುಮಾರು 25 ಸೆಕೆಂಡ್‌ ಮೌನವಾದರು. ವೇದಿಕೆಯಲ್ಲಿರುವ ಗಣ್ಯರಿಗೆ ಈ ಮೌನ ಅರ್ಥವಾಗಲಿಲ್ಲ. ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡಿ ಹೇಳುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ ಅವರಿಗೂ ತಿಳಿಯಲಿಲ್ಲ. ಕೆಲ ಹೊತ್ತಿನ ಬಳಿಕ ಮೋದಿ ಅವರ ಮೌನವನ್ನು ರಾಹುಲ್‌ ಗಾಂಧಿ ಅಣುಕು ಮಾಡಿದ್ದು ಎಂದು ತಿಳಿಯುತ್ತಲೇ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು 

Advertisement

ರಾಗಾ ಭಾಷಣದಲ್ಲಿ ಹರಿಪ್ರಸಾದ ಗೊಂದಲ!
ವಿಜಯಪುರ: ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ ಹಲವು ಗೊಂದಲ ಮಾಡಿಕೊಂಡರು. ಜಿಲ್ಲೆಯ ನೂತನ ಕೊಲ್ಹಾರ ತಾಲೂಕಿನ ಮುಳವಾಡದಲ್ಲಿ ರಾಹುಲ್‌ ಗಾಂಧಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ತಾವು ಪ್ರಧಾನಿ ಮೋದಿ ಅವರನ್ನು ರೈತರ ಸಾಲ ಮನ್ನಾಕ್ಕಾಗಿ ಒಂದು ಬಾರಿ ಭೇಟಿಯಾಗಿದ್ದೆ ಎಂದು ಹೇಳಿದರು. ಇದನ್ನು
ಕನ್ನಡಕ್ಕೆ ಅನುವಾದ ಮಾಡುತ್ತಿದ್ದ ಹರಿಪ್ರಸಾದ ಮೋದಿ ಅವರನ್ನು ಎರಡ್ಮೂರು ಬಾರಿ ಭೇಟಿ ಮಾಡಿದ್ದೆ ಎಂದು ಹೇಳಿದರು. ಒಂದು ಹಂತದಲ್ಲಿ ಹರಿಪ್ರಸಾದ ಅವರು ಏನೋ ಎಡವಟ್ಟು ಮಾಡುತ್ತಿದ್ದಾರೆ ಎಂದು ಎಚ್ಚರಿಕೆ ವಹಿಸಿದ ರಾಹುಲ್‌ ಶಿರ್ಫ್‌ ಏಕ್‌ ಬಾರ್‌..ಶಿರ್ಫ್‌ ಏಕ್‌ ಬಾರ್‌…ಎಂದು ಪದೇ ಪದೇ ಉತ್ಛರಿಸಿದಾಗ ಒಂದು ಬಾರಿ ಮಾತ್ರ ನಾನು ಮೋದಿ ಅವರನ್ನು ಭೇಟಿಯಾಗಿದ್ದೆ ಎಂದು ಹರಿಪ್ರಸಾದ ತಿದ್ದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next