Advertisement
ಭಾನುವಾರ ಹಿಟ್ನಳ್ಳಿ ಗ್ರಾಮದಲ್ಲಿ ಕಿತ್ತೂರ ರಾಣಿ ಚನ್ನಮ್ಮಾಜಿ ಕಂಚಿನ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ಕಿತ್ತೂರ ಚನ್ನಮ ಅವರ ವಿರುದ್ಧ ಯುದ್ಧದ ಸಂದರ್ಭದಲ್ಲಿ ಮೋಸ ಮಾಡಿದಂತೆ ಇದೀಗ ಪಂಚಮಸಾಲಿ ಸಮಾಜದ 2-ಎ ಮೀಸಲು ಹೋರಾಟ ನಡೆಸಿರುವ ನಮ್ಮ ಶಕ್ತಿ ಕುಂದಿಸಲು ನಮ್ಮವರೇ ಸಂಚು ನಡೆಸಿದ್ದಾರೆ. ಹೋರಾಟದ ಮೂಲಕ ಯತ್ನಾಳ ಸಮುದಾಯದ ದೊಡ್ಡ ನಾಯಕನಾಗುತ್ತಾನೆ ಎಂಬ ಭಯದಿಂದಾಗಿ ಮೀಸಲು ಹೋರಾಟ ಹತ್ತಿಕ್ಕುವ ಕುತಂತ್ರ ನಡೆಯುತ್ತಿದೆ ಎಂದು ಟೀಕಿಸಿದರು.
Related Articles
Advertisement
ನಮ್ಮ ಸಮಾಜಕ್ಕೆ 2ಎ ಮೀಸಲು ಸೌಲಭ್ಯ ಸಿಕ್ಕರೆ ಪ್ರತಿ ಪಂಚಮಸಾಲಿ ಮನೆಯಿಂದ 1 ಸಾವಿರ ರೂ. ದೇಣಿಗೆ ನೀಡಿದರೂ 100 ಕೋಟಿ ರೂ. ದೇಣಿಗೆ ಸಂಗ್ರಹ ಆಗುತ್ತದೆ. ಹೀಗಾಗಿ ಸರ್ಕಾರ ನೀಡುವ ಹಣ ನಮಗೇಕೆ ಎಂದರು.
ಅರ್ಹತೆ ಇಲ್ಲದಿದ್ದರೂ ಸಿ.ಡಿ. ಇಟ್ಟುಕೊಂಡು ಬ್ಲಾಕ್ ಮಾಡಿ ಮಂತ್ರಿಯಾಗಿದ್ದಾರೆ. ನನ್ನ ಚುನಾವಣೆಯಲ್ಲಿ ವಿರೋಧಿ ಚಟುವಟಿಕೆ ಮಾಡಿದವರೇ ಇದೀಗ ನನ್ನ ವಿರುದ್ಧ ಬ್ಲ್ಯಾಕ್ ಮೇಲ್ ಆರೋಪ ಮಾಡುತ್ತಿದ್ದಾರೆ. ನಾನು ಮಂತ್ರಿ ಆಗೋದು ದೊಡ್ಡದಲ್ಲ, ಸಮಾಜಕ್ಕೆ ಮೀಸಲು ಕಲ್ಪಿಸುವುದು ಮುಖ್ಯ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ನಾನೇ ಹೇಳಿದ್ದೇನೆ. ಪರಿಸ್ಥಿತಿ ಹೀಗಿರುವಾಗ ಮಂತ್ರಿ ಸ್ಥಾನಕ್ಕಾಗಿ ಪಂಚಮಸಾಲಿ ಸಮಾಜ ಹಾಗೂ ಮೀಸಲು ಹೋರಾಟ ದುರ್ಬಳಕೆ ಮಾಡಿಕೊಳ್ಳುವುದು ಎಲ್ಲಿಂದ ಬಂತು. ಅಂಥ ದುಸ್ಥಿತಿ ನನಗಿಲ್ಲ ಎಂದು ತಮ್ಮ ವಿರೋಧಿಗಳ ವಿರುದ್ಧ ಕಿಡಿ ಕಾರಿದರು.
ಇದನ್ನೂ ಓದಿ:ಆಜಾನ್ : ಸುಪ್ರೀಂ ಕೋರ್ಟ್ ಅದೇಶ ಪಾಲನೆಗೆ ಸರ್ಕಾರ ಕ್ರಮಕೈಗೊಳ್ಳಲಿ : ಯತ್ನಾಳ
ಇಷ್ಟಕ್ಕೂ ನಾನು ಪಂಚಮಸಾಲಿ ಸಮಾಜಕ್ಕೆ ಮಾತ್ರ ಮೀಸಲು ಕಲ್ಪಿಸಲು ಹೋರಾಡುತ್ತಿಲ್ಲ, ವಾಲ್ಮೀಕಿ ಸಮಾಜ, ಹಾಲುಮತ ಸಮಾಜ, ಹಡಪದ, ಆದಿಬಣಜಿಗ, ಕೂಡುಒಕ್ಕಲಿಗ ಹೀಗೆ ಎಲ್ಲ ಸಮುದಾಯಗಳಿಗೆ ಮೀಸಲು ಕಲ್ಪಿಸುವಂತೆ ಹೋರಾಡುತ್ತಿದ್ದೇನೆ ಎಂದರು.
1994 ರಲ್ಲೇ ಶಾಸಕನಾಗಿರುವ ನಾನು, ಎರಡು ಬಾರಿ ಸಂಸದನಾಗಿ, ಒಮ್ಮೆ ಎಂ.ಎಲ್.ಸಿ., ಈಗ ಮತ್ತೆ ಶಾಸಕನಾಗಿದ್ದೇನೆ. ಯಾರು ಏನೇ ಮಾಡಿದರೂ ಇನ್ನೂ ಎರಡು ಬಾರಿ ನಾನು ಗೆಲ್ಲುತ್ತೇನೆ. ಆರ್ಥಿಕವಾಗಿ ಸುಸ್ಥಿಯಲ್ಲಿರುವ ನನಗೆ, ನನ್ನ ಕುಟುಂಬಕ್ಕೆ ಮೀಸಲು ಬೇಕಿಲ್ಲ. ಸಮಾಜದ ಪ್ರತಿಭಾವಂತ ಮಕ್ಕಳು ಅವಕಾಶ ವಂಚಿತರಾಗುವುದನ್ನು ತಪ್ಪಿಸಲು ಮೀಸಲು ಕೇಳುತ್ತಿದ್ದೇನೆ ಎಂದರು.
ಮೀಸಲು ಹೋರಾಟದ ಮೂಲಕ ಪಂಚಮಸಾಲಿ ಸಮಾಜಕ್ಕೆ ಬಲಿಷ್ಠ ನಾಯಕತ್ವ ಸಿಗುತ್ತದೆ. ಇದರಿಂದ ನಮ್ಮ ಆಟ ನಡೆಯುವುದಿಲ್ಲ ಎಂಬ ಭಯದಿಂದಾಗಿ ಕೆಲವರು ನಮ್ಮದೇ ಸಮಾಜದ ವ್ಯಕ್ತಿಗಳಿಗೆ ಲಾಲಿಪಾಪ್ ಹಾಕಿ, ನಮ್ಮ ಹೋರಾಟ ಹತ್ತಿಕ್ಕುವ, ನನ್ನನ್ನು ಹೊರ ಹಾಕಿಸುವ ಸಂಚು ನಡೆಸಿದ್ದಾರೆ ಎಂದು ಯಾರ ಹೆಸರೂ ಹೇಳದೇ ಹರಿಹಾಯ್ದರು.
ಇನ್ನೊಬ್ಬರಿದ್ದಾರೆ, ನಾನು ನಿಮ್ಮ ಗುಡಿ ಪ್ರವೇಶಿಸುವುದಿಲ್ಲ, ನೀವೇ ನನ್ನ ತಂದೆ-ತಾಯಿ ಅಂತೆಲ್ಲ ನಮ್ಮ ಸಮಾಜವನ್ನು ಮೋಸ ಮಾಡುತ್ತಲೇ ಬರುತ್ತಿದ್ದಾರೆ. ಅವರ ಬಗ್ಗೆ ಜನರು ಎಚ್ಚರ ಇರಬೇಕು ಎಂದು ಪರೋಕ್ಷವಾಗಿ ಸ್ವಪಕ್ಷೀಯ ಸಂಸದ ರಮೇಶ ಜಿಗಜಿಣಗಿ ಅವರನ್ನು ಕುಟುಕಿದರು.
ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು, ಯರನಾಳ ಸಂಗನಬಸವ ಶ್ರೀಗಳು, ಮನಗೂಳಿ ಅಭಿನವ ಸಂಗನಬಸವ ಶ್ರೀಗಳು, ಯೋಗೇಶ್ವರಿ ಮಾತಾಜಿ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಮಾಜಿ ಶಾಸಕ ವಿಠ್ಠಲ ಕಟಕಧೋಂಡ, ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಪಂಚಸೇನಾ ಅಧ್ಯಕ್ಷ ಬಿ.ಎಸ್.ಪಾಟೀಲ, ಪಂಚಮಸಾಲಿ ಮೀಸಲು ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಸ್. ರುದ್ರಗೌಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.