ವಿಜಯಪುರ :ಸಂತ್ರಸ್ತರಿಗೆ 10 ಸಾವಿರ ರೂ. ಪರಿಹಾರ ಕೊಡುತ್ತಿರುವುದು ಹೆಚ್ಚು ಎಂಬ ಈಶ್ವರಪ್ಪ ಹೇಳಿಕೆಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂತ್ರಸ್ತರಿಗೆ ಅನ್ಯಾಯವಾದರೆ ಧ್ವನಿ ಎತ್ತುತ್ತೇನೆ. ಈಗ ಧ್ವನಿ ಎತ್ತುವ ಅಗತ್ಯವಿಲ್ಲ.ಅನ್ಯಾಯ ಬಂದಾಗ ಉತ್ತರ ಕರ್ನಾಟಕದ ಪರ ಧ್ವನಿ ಎತ್ತುವೆ ಎಂದರು.
ನನ್ನ ಪಕ್ಷ, ಅನ್ಯ ಪಕ್ಷ ಎಂಬ ವ್ಯತ್ಯಾಸವಿಲ್ಲದೆ ಅನ್ಯಾಯ ಕಂಡರೆ ನನ್ನ ಪ್ರತಿರೋಧ ತೋರಿಯೇ ತೀರುತ್ತೇನೆ. ಅಧಿಕಾರದಲ್ಲಿರುವ ನನ್ನ ಪಕ್ಷವಿದ್ದರೂ ಧ್ವನಿ ಎತ್ತುತ್ತೇನೆ.ಸಧ್ಯ ಈಶ್ವರಪ್ಪ ಹೇಳಿಕೆ ಪರ ಹಾಗೂ ವಿರೋಧ ಏನೂ ಮಾಡಲ್ಲ. ಅದಕ್ಕಾಗಿ ನನ್ನನ್ನು ಬಲಿಪಶು ಮಾಡಬೇಡಿ ಎಂದು ಮನವಿ ಮಾಡಿದರು.
ಮೈತ್ರಿ ಸರ್ಕಾರ ರಚನೆ ಆಗಿರುವುದೇ ಮೈತ್ರಿ ಸರಕಾರ ಅಸ್ತಿತ್ವದಲ್ಲಿದ್ದಾಗ ರಾಜೀನಾಮೆ ನೀಡಿ, ಈಗ ಅನರ್ಹರಾಗಿರುವ ಶಾಸಕರಿಂದ. ಹೀಗಾಗಿ ಅನರ್ಹ ಶಾಸಕರಿಂದ ನಮ್ಮ ಬಿಜೆಪಿ ಸರ್ಕಾರ ಅಸ್ತಿತ್ವ ಬಂದಿದೆ. ರಾಜೀನಾಮೆ ನೀಡಿದ ನಂತರ ಅನರ್ಹ ಶಾಸಕರು ಸಾಕಷ್ಟು ನೊಂದಿದ್ದಾರೆ.ರಾಜೀನಾಮೆ ನೀಡಿದ ಮೇಲೆ ಅನರ್ಹ ಶಾಸಕರಿಗೆ ಮಾನಸಿಕವಾಗಿ ಸಾಕಷ್ಟು ಚಿತ್ರಹಿಂಸೆ ಆಗಿದೆ.ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆದಾಗಲಿ. ಅನರ್ಹ ಶಾಸಕರು ಮಂತ್ರಿಗಳಾಗಲಿ ಎಂದು ಹಾರೈಸುವೆ ಎಂದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ನಿಂದ ಇನ್ನೂ ಹಲವು ಶಾಸಕರು ಬಿಜೆಪಿಗೆ ಬರುತ್ತಾರೆ. ಯಾವ ಶಾಸಕರಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ. ಇಂಥ ಸ್ಥಿತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಎಲ್ಲ ಶಾಸಕರು ಸಹಕಾರ ನೀಡಬೇಕು. ಒಂದೊಮ್ಮೆ ಯಡಿಯೂರಪ್ಪ ಅವರಿಗೆ ಕಿರುಕುಳ ನೀಡಿದರೆ ಸುಮ್ಮನಿರುವುದಿಲ್ಲ ಎಂದರು.