ವಿಜಯಪುರ: ರಾಜ್ಯದಲ್ಲಿ ಉಂಟಾಗಿರುವ ನೆರೆ ನಷ್ಟ ಪರಿಹಾರಕ್ಕೆ ತಕ್ಷಣ 5000 ಕೋಟಿ ರೂ. ಮಧ್ಯಂತರ ಪರಿಹಾರ ಕೋರಿ ಪ್ರಧಾನಮಂತ್ರಿ ಕಛೇರಿಗೆ ಫ್ಯಾಕ್ಸ್, ಇ-ಮೇಲ್ ಮೂಲಕ ಪತ್ರ ಬರೆದಿದ್ದೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಅವರು ರಾಜ್ಯದಲ್ಲಿ ನೆರೆಯಿಂದಾದ ನಷ್ಟದ ಕುರಿತು ಖುದ್ದಾಗಿ ಭೇಟಿ ನೀಡಿ ಪರಿಶೀಲಿದ್ದಾರೆ. ಸಚಿವೆ ನಿರ್ಮಲಾ ಅವರಂತೂ ಪ್ರವಾಹ ಬಾಧಿತ ಓರ್ವ ಮಹಿಳೆಯ ಸಂಕಷ್ಟಕ್ಕೆ ಸ್ಥಳದಲ್ಲೇ ಸ್ಪಂದಿಸುವ ಕೆಲಸವನ್ನೂ ಮಾಡಿದ್ದಾರೆ. ಇಂಥ ಸ್ಥಿತಿಯಲ್ಲಿ ಪೂರ್ಣ ವರದಿ ಬಂದ ಮೇಲೆ ಪರಿಹಾರ ನೀಡುವಂತೆ ಅಧಿಕಾರಿಗಳು ಹೇಳುವ ಮಾತನ್ನು ಸಚಿವರು ಕೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ನೆರೆ ಸಂತ್ರಸ್ಥರ ವಿಷಯದಲ್ಲಿ ಪಕ್ಷದ ಸರಕಾರಗಳ ವಿರುದ್ಧ ಧ್ವನಿ ಎತ್ತುವಲ್ಲಿ ಮುಖ್ಯಮಂತ್ರಿ ಸೇರಿದಂತೆ ಯಾರ ಪ್ರಚೋದನೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಸಿ.ಎಂ ಯಡಿಯೂರಪ್ಪ ಅತ್ಯಂತ ಧೈರ್ಯಶಾಲಿ. ನಿನ್ನೆ ಬೆಳಗಾವಿ ಜಿಲ್ಲೆಯ ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಸಂಚರಿಸಿ ಸಂತ್ರಸ್ತರ ಸಮಸ್ಯೆ ಆಲಿಸಿದ್ದಾರೆ. ಬೇರೆ ಯಾರೋ ಆಗಿದ್ದರೆ ಇಂಥ ಧೈರ್ಯ ತೋರುತ್ತಿರಲಿಲ್ಲ ಎಂದು ಸಿ.ಎಂ ಯಡಿಯೂರಪ್ಪ ಅವರ ಕ್ರಮವನ್ನು ಬೆಂಬಲಿಸಿದರು.
ಅವೈಜ್ಞಾನಿಕ ಸಾಲಮನ್ನಾ ಮಾಡಿ ರಾಜ್ಯದ ಖಜಾನೆಯನ್ನು ಖಾಲಿ ಮಾಡಿ ಕುಮಾರಸ್ವಾಮಿ ಓಡಿಹೋಗಿದ್ದಾರೆ. ಎಲ್ಲೋ ಕುಳಿತ ಇನ್ನೋರ್ವ ಮಾಜಿ ಸಿ.ಎಂ ಸಿದ್ಧರಾಮಯ್ಯ ಟೀಕೆಮಾಡುತ್ತಾ ಕುಳಿತಿದ್ದಾರೆ. ಇಂಥ ಸ್ಥಿತಿಯಲ್ಲಿ ರಾಜ್ಯದ ನೆರೆ ಸಂತ್ರಸ್ತರಿಗೆ ಪೂರ್ಣ ಪ್ರಮಾಣದಲ್ಲಿ ನೆರವು ನೀಡಲು ಖಜಾನೆಯಲ್ಲಿ ಹಣ ಬೇಕಲ್ಲ. ಈ ಕುರಿತು ನಾನು ಖುದ್ದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದೇನೆ. ರಾಜ್ಯದ ಖಜಾನೆ ಖಾಲಿ ಆಗಿಲ್ಲ, ಹಾಗಂತ ನೆರೆ ಸಂತ್ರಸ್ತರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಕೊಡುವಷ್ಟು ಹಣ ಇಲ್ಲ ಎಂದಿದ್ದಾರೆ ಎಂದು ಸಮಜಾಯಿಷಿ ನೀಡಿದರು.