ವಿಜಯಪುರ: ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣಗಳ ಕುರಿತು ಯಾವಾಗ ಪಾದಯಾತ್ರೆ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ಇದಕ್ಕಾಗಿ ನಮ್ಮದೇ ಒಂದು ಕೋರ್ ಕಮಿಟಿ ಮಾಡಿಕೊಂಡಿದ್ದೇವೆ ಎಂದು ಬಿಜೆಪಿ ಬಂಡಾಯ ರೆಬೆಲ್ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮದು ಬಿಜೆಪಿ ಬಂಡಾಯ ಎಂದು ಯಾವುದೇ ಮಾಧ್ಯಮದವರು ಸುದ್ದಿ ಮಾಡಬೇಡಿ, ಕೈ ಮುಗಿದು ಹೇಳ್ತಿದ್ದೇನೆ, ನಮ್ಮದು ಬಿಜೆಪಿ ನಿಷ್ಟಾವಂತರ ಅಂತಾ ಹೇಳಿ ಎಂದು ಮಾಧ್ಯಮದವರಿಗೆ ಮನವಿ ಮಾಡಿದ ಯತ್ನಾಳ, ಈ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಬಾರದು ಎಂದು ನಮ್ಮವರು ನಿರ್ಧಾರ ಮಾಡಿದ್ದೇವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸಭೆಯಲ್ಲಿ ಭಾಗಿಯಾದವರೇ ವಿವರ ನೀಡುತ್ತಾರೆ ಎಂದರು.
ಕೇಂದ್ರ ಹೈಕಮಾಂಡ್ ಅನುಮತಿ ನೀಡಿದರೆ ನಾವು ಪಾದಯಾತ್ರೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಮೀಟಿಂಗ್ ಮಾಡಿ ಕೇಂದ್ರ ನಾಯಕರಿಂದ ಅನುಮತಿ ಕೇಳುತ್ತೇವೆ ಎಂದ ಯತ್ನಾಳ, ವಿಜಯೇಂದ್ರ ಜೊತೆ ಯತ್ನಾಳ ಅವರ ಹೊಂದಾಣಿಕೆ ಮಾಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಪ್ರಶ್ನೆಗೆ ನೋ ನೋ ನಾನು ಯಾವುದೇ ಹೊಂದಾಣಿಕೆ ಆಗಲ್ಲ ಎಂದರು.
ಯಾಕೆ ಆಗೋದಿಲ್ಲ ಅಂದ್ರೆ ಮೊನ್ನೆ ಡಿಕೆ ಶಿವಕುಮಾರ ಹೇಳಿದ್ದಾರೆ. ವಿಜಯೇಂದ್ರ ನೀನು ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ಶಾಸಕರಾಗಿದ್ದಾರೆ. ಡಿ.ಕೆ.ಶಿವಕುಮಾರ ಜೊತೆ ವಿಜಯೇಂದ್ರ ಹೊಂದಾಣಿಕೆ ಇದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಇಂಥ ವಿಜಯೇಂದ್ರ ಜೊತೆ ನಾನು ಹೊಂದಾಣಿಕೆ ಆಗೋದಿಲ್ಲ ಎಂದು ಹರಿಹಾಯ್ದರು.
ಈ ವಿಚಾರದಲ್ಲಿ ಪಕ್ಷದ ಮುಖಂಡರು ಹಾಗೂ ಸಂಘದ ಮುಖಂಡರು ಓರ್ವ ವ್ಯಕ್ತಿಯ ಮೂಲಕ ನನಗೆ ಮೇಸೇಜ್ ಮುಟ್ಟಿಸಿದ್ದಾರೆ. ಎಲ್ಲವೂ ಸರಿ ಮಾಡುತ್ತೇವೆ ಸ್ವಲ್ಪ ದಿನ ಮೌನವಾಗಿರುವಂತೆ ಸಂದೇಶ ಕಳಿಸಿದ್ದಾರೆ. ಹೀಗಾಗಿ ನಾನು ಸದ್ಯಕ್ಕೆ ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದರು.
ಇಬ್ಬರ ಮಧ್ಯೆ ಒಪ್ಪಂದದ ಬಗ್ಗೆ ನನ್ನ ಜೊತೆ ಯಾರು ಮಾತನಾಡಿಲ್ಲ. ಒಬ್ಬೊಬ್ಬರೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಎಂದು ನಾವೆಲ್ಲ ನಿರ್ಧರಿಸಿದ್ದೇವೆ. ಏನೇ ಇದ್ರೂ ಎಲ್ಲರೂ ಸೇರಿ ಮಾತುಕತೆ ಮಾಡುತ್ತೇವೆ. ಬಿಜೆಪಿಯಲ್ಲಿ ಬದಲಾವಣೆ ತರಲು ನಮ್ಮ ಹೋರಾಟ ಎಂದರು.
ಬೆಳಗಾವಿಯಲ್ಲಿ ನಾವು ಪಾದಾಯಾತ್ರೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಪಕ್ಷದ ಮಾಜಿ ರಾಜಾಧ್ಯಕ್ಷ ನಳಿನಕುಮಾರ ಕಟೀಲ ಕೂಡ ನಮ್ಮ ಸಭೆಗೆ ಬರುವವರಿದ್ದರು. ಡೆಂಘೀ ಕಾರಣದಿಂದ ಅವರು ಬಂದಿಲ್ಲ, ಇನ್ನು ಕೆಲವರು ಬರುವವರಿದ್ದರೂ ಕಾರಣಾಂತರಗಳಿಂದ ಬಂದಿಲ್ಲ, ಅವರೆಲ್ಲ ಭವಿಷ್ಯದ ದಿನಗಳಲ್ಲಿ ನಮ್ಮ ಸಭೆಗೆ ಬರುತ್ತಾರೆ. ಯಾರ್ಯಾರು ಬರುತ್ತಾರೆ ಎಂದು ಮುಂದೆ ನೀವೇ ನೋಡುತ್ತೀರಿ ಎಂದರು.
ದೇವೆಗೌಡ್ರ ಪತ್ನಿ ಹೆಸರಲ್ಲಿ ಕೆರೆ ಒತ್ತುವರಿ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, 1974 ರಲ್ಲಿ ನಡೆದಿದ್ದೇ ಆದ್ರೆ ಈಗೇಕೆ ಹೊರಬಂದಿದೆ. ಇಷ್ಟು ದಿನ ಏನು ಮಾಡುತ್ತಿದ್ದರು. ಯಡ್ಡಿಯೂರಪ್ಪ ಸರಕಾರ ಇತ್ತು, ಕಾಂಗ್ರೆಸ್ ಸರಕಾರ ಇತ್ತು ಆಗ ಯಾಕೆ ಇದನ್ನ ತನಿಖೆ ಮಾಡಿಸಲಿಲ್ಲ. ತನಿಖೆ ಮಾಡಿಸಿ ತಪ್ಪಿದ್ರೆ ಶಿಕ್ಷೆ ಕೊಡಿಸಬೇಕಿತ್ತು ಎಂದು ಕಿಡಿ ಕಾರಿದರು.
ಆಗ ಸುಮ್ಮನಿದ್ದು ಈಗ ಅವರದು ಬಂತು ಅಂತಾ ಇದನೆಲ್ಲ ಬಹಿರಂಗ ಮಾಡುತ್ತಿದ್ದಾರೆ. ಅವರದು ಇವರು ಮುಚ್ಚುವುದು, ಇವರದು ಅವರು ಮುಚ್ಚುವುದು. ಎಲ್ಲರೂ ಇದೆ ರೀತಿ ಹೊಂದಾಣಿಕೆ ಮಾಡುತ್ತಲೆ ಬಂದಿದ್ದಾರೆ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Raichur: ಜೆಸಿಬಿಯಿಂದ ಮಣ್ಣು ಬಿದ್ದು ಬಹಿರ್ದೆಸೆಗೆ ಹೋಗಿದ್ದ ಮಹಿಳೆ ಸ್ಥಳದಲ್ಲೇ ಮೃತ್ಯು