ವಿಜಯಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಭೂಹಗರಣದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪ ಮಾಡಿದ್ದಾರೆ. ಕಳೆದ 14 ತಿಂಗಳಿಂದ ಇವರೇ ಸರ್ಕಾರ ನಡೆಸುತ್ತಿದ್ದು, ಈವರೆಗೆ ಕತ್ತೆ ಕಾಯುತ್ತಿದ್ದರಾ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ಭಾನುವಾರ ನಗರದಲ್ಲಿ ಐತಿಹಾಸಿಕ ತಾಜ್ ಬಾವಡಿ ಸ್ಮಾರಕ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಮಾಡಿರುವ ಎಲ್ಲರ ತನಿಖೆ ಮಾಡಿ, ಸರ್ಕಾರ ನಿಮ್ಮದೇ ಇದೆ ಎಂದು ಆಗ್ರಹಿಸಿದರು.
ಭೋವಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಹಾಗೂ ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ಈಗ ಮಾತಾಡ್ತಿದ್ದೀರಿ, ಅಧಿಕಾರಕ್ಕೆ ಬಂದು 14 ತಿಂಗಳಾದರೂ ಕತ್ತೆ ಕಾಯ್ದಿರೇನು ಎಂದು ಟೀಕಾ ಪ್ರಹಾರ ನಡೆಸಿದರು.
ಕನಕಪುರ ಬಂಡೆ, ಆ ಬಂಡೆ ಯಾಕೆ 14 ತಿಂಗಳು ಸುಮ್ಮನೆ ಯಾಕೆ ಕುಳಿರಿ ಎಂದು ಪ್ರಶ್ನಿಸಿದ ಯತ್ನಾಳ, ವಿಜಯೇಂದ್ರ ಬಂಡಲ್ ಒಯ್ದರೆ ತಕ್ಷಣ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಿ ಮಾಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದರು.
ಇವರ ಒಳ ಒಪ್ಪಂದದಿಂದ ಮೂರು ರಾಜಕೀಯ ಪಕ್ಷಗಳಿಗೆ ಪೆಟ್ಟು ಬಿದ್ದಿದೆ. ಮೂರು ಪಕ್ಷದ ಒಳ ಒಪ್ಪಂದದ ಗಿರಾಕಿಗಳು ಹೊರಗೆ ಬಂದು ಹೊಸ ಪಕ್ಷ ಕಟ್ಟಲಿ. ಹೀಗೆ ಕಟ್ಟಿದ ಪಕ್ಷಕ್ಕೆ ಒಳ ಒಪ್ಪಂದ ಪಾರ್ಟಿ ಎಂದು ಹೆಸರಿಡಲಿ. ಆಗ ಉಳಿದಂತೆ ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಶುದ್ಧ ಆಗುತ್ತವೆ ಎಂದು ಕುಟುಕಿದರು.
ಹಿಟ್ಲರ್ ವಾದಿ ಜೊತೆಗೆ ಫ್ಯೂಡಲ್ ವಾದಿಗಳು ಸೇರಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆಗೂ ಹರಿಹಾಯ್ದ ಯತ್ನಾಳ, ಸಿದ್ದರಾಮಯ್ಯ ರಷ್ಯಾದ ಮುಸಿಲೋನಿ ಇರಬೇಕು ಎಂದರು.
ರಷ್ಯಾದ ಓರ್ವ ಸರ್ವಾಧಿಕಾರಿ ಇದ್ದ. ಅವರು ಮುಸಿಲೋನಿ, ಇವರು ಹಿಟ್ಲರ್. ನಾವೆಲ್ಲ ಕೆಲಸ ಮಾಡುವವರು ಬಟ್ಲರ್ ಎಂದು ಟೀಕಿಸಿದರು.