ವಿಜಯಪುರ: ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕುವ ಹುನ್ನಾರಕ್ಕಾಗಿ ಅರವಿಂದ ಬೆಲ್ಲದ್ ಅವರಿಗೆ ವಿಧಾನಸಭೆ ವಿಪಕ್ಷದ ಉಪನಾಯಕನ ಸ್ಥಾನ ನೀಡಲಾಗಿದೆ. ಬೆಲ್ಲದ್ ಮೇಲೆ ನಮ್ಮ ಸಮಾಜ ಅವಲಂಬಿತವಾಗಿಲ್ಲ ಎಂದು ಬಿಜೆಪಿ ಶಾಸಕ, ಪಂಚಮಸಾಲಿ ಮೀಸಲಾತಿ ಹೋರಾಟ ಸ್ವಾಗತ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೆಲ್ಲದ್ ವಿಪ್ ಕೊಟ್ಟಿದ್ದರೂ ಸಮ್ಮತಿಸುತ್ತಿದ್ದರು. ಮುಖ್ಯಮಂತ್ರಿ ಸ್ಥಾನದ ಹಂತದಿಂದ ವಿಪಕ್ಷದ ಉಪ ನಾಯಕನ ಸ್ಥಾನಕ್ಕೆ ಕುಸಿದಿದ್ದಾರೆ ಎಂದು ಕುಟುಕಿದರು.
ಬೆಲ್ಲದ್ ನೇಮಕದಿಂದ ಪಂಚಮಸಾಲಿ ಮೀಸಲಾತಿ ಹೋರಾಟ ಒಡೆಯಲು ಸಾಧ್ಯವಿಲ್ಲ. ನಮ್ಮ ಸಮಾಜ ಈಗ ಜಾಗೃತವಾಗಿದ್ದು, ನಾವು ಏನೇ ಮೋಸ ಮಾಡಿದರೂ ಜನರಿಗೆ ಗೊತ್ತಾಗುತ್ತದೆ ಎಂದರು.
ಇಷ್ಟಕ್ಕೂ ಪಂಚಮಸಾಲಿ ಮೀಸಲಾತಿ ಹೋರಾಟ ಯತ್ನಾಳ, ವಿಜಯಾನಂದ ಕಾಶಪ್ಪನವರ, ಅರವಿಂದ ಬೆಲ್ಲದ, ವಿನಯ ಕುಲಕರ್ಣಿ ಮೇಲೆ ನಿಂತಿಲ್ಲ. ಸಮಾಜ ಜಾಗೃತವಾಗಿದೆ ಎಂದರು.
ಮಹಾರಾಷ್ಟ್ರ ರಾಜ್ಯದಲ್ಲಿ ಮರಾಠರು ಮೀಸಲಾತಿ ಹೋರಾಟಕ್ಕೆ ಮುಖ್ಯಮಂತ್ರಿ, ಮಂತ್ರಿ, ಶಾಸಕ, ನಾಯಕನನ್ನೂ ವೇದಿಕೆಗೆ ಕರೆಯವುದಿಲ್ಲ. ಕರ್ನಾಟಕದಲ್ಲಿ ಪಂಚಮಸಾಲಿ ಹೋರಾಟದ ವೇದಿಕೆಯಲ್ಲಿ ಸಚಿವ, ಶಾಸಕರನ್ನು ಕೂಡಿಸಬೇಡಿ ಎಂದು ಹೇಳಿದ್ದೇನೆ ಎಂದರು.
ಇಲ್ಲವಾದಲ್ಲಿ ಮಹಾರಾಷ್ಟ್ರದಲ್ಲಿ ಮೀಸಲಾತಿ ಹೋರಾಟಗಾರರು ನಾಯಕರ ಮನೆಹೊಕ್ಕು ಹೊಡೆದಂತೆ ನಮ್ಮಲ್ಲೂ ಆಗಲಿದೆ ಎಂದು ಎಚ್ಚರಿಸಿದರು.