ಬೆಳಗಾವಿ: ಭತ್ತ ಎಂದರೆ ಮೊದಲು ಹೆಸರು ಕೇಳಿ ಬರುವುದೇ ಬೆಳಗಾವಿಯ ಸುತ್ತಲಿನ ಪರಿಸರದಲ್ಲಿನ ಹಳ್ಳಿಗಳು. ಅದರಲ್ಲೂ ಬಾಸಮತಿ ಅಕ್ಕಿ ಎಂದರೆ ಈ ಭಾಗದಲ್ಲಿ ಸುಪ್ರಸಿದ್ಧ. ಆದರೆ ಈ ಬಾರಿಯ ಜಲಪ್ರಳಯದ ಬಿಸಿ ಬಾಸಮತಿ ಭತ್ತಕ್ಕೂ ತಟ್ಟಿದ್ದು, ಭತ್ತದ ಬೆಳೆ ಎಲ್ಲವೂ ಬಳ್ಳಾರಿ ನಾಲಾ ನೀರಿನಲ್ಲಿ ಕೊಚ್ಚಿ ಹೋಗಿದೆ.
ಸಮತಟ್ಟಾದ ಭೂಮಿ ಮೇಲೆ ಹುಲುಸಾಗಿ ಬೆಳೆದು ಬರುವ ಭತ್ತಕ್ಕೆ ನೀರಿನ ಪ್ರಮಾಣ ಎಷ್ಟಿದ್ದರೂ ಸಾಕಾಗಲ್ಲ. ಬೆಳೆಯ ಮೇಲ್ಭಾಗದ ತುದಿ ಬಿಟ್ಟು ಎಷ್ಟೇ ನೀರು ನಿಂತರೂ ಸಮಸ್ಯೆ ಆಗುವುದಿಲ್ಲ. ಅಂಥದರಲ್ಲಿಯೂ ಈ ಬೆಳೆಯ ಫಸಲು ಚಿಗಿದು ಫಲವತ್ತಾಗಿ ಎದ್ದು ನಿಲ್ಲುತ್ತದೆ. ಸುತ್ತಲಿನ ಪ್ರದೇಶಗಳಲ್ಲಿ ಹರಿದು ಹೋಗುವ ಬಳ್ಳಾರಿ ನಾಲಾದಿಂದಾಗಿ ನೀರಿನಲ್ಲಿಯೇ ನಿಂತ ಬೆಳೆ ಎಲ್ಲವೂ ಕೊಚ್ಚಿ ಹೋಗಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಬೆಳೆ ನಾಶವಾಗಿದೆ.ನಿಂತ ನೀರಿನಿಂದ ಅವಾಂತರ: ಬೆಳಗಾವಿ ತಾಲೂಕಿನ ಯಳ್ಳೂರು, ಸುಳಗಾ, ಧಾಮಣೆ, ಸಂತಿಬಸ್ತವಾಡ, ಹಲಗಾ, ಬಸ್ತವಾಡ, ಚಂದಗಡ, ಅಷ್ಟೇ, ಸಾಂಬ್ರಾ, ನಿಲಜಿ, ಮುತಗಾ ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಭತ್ತ ಬೆಳೆಯಲಾಗುತ್ತದೆ. ಅದರಲ್ಲೂ ಬಾಸಮತಿ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಬರುತ್ತದೆ. ಯಳ್ಳೂರು, ವಡಗಾಂವ, ಅನಗೋಳ, ಬಸವನ ಕುಡಚಿ ಮಾರ್ಗವಾಗಿ ಹರಿದು ಹೋಗುವ ಬಳ್ಳಾರಿ ನಾಲಾ ಪಕ್ಕದ ಜಮೀನುಗಳಲ್ಲಿ ನೀರು ನುಗ್ಗಿದ್ದು ಆತಂಕಕ್ಕೆ ಕಾರಣವಾಗಿದೆ. ಸುಮಾರು 10-12 ದಿನಗಳ ಕಾಲ ಸತತ ನೀರು ನಿಂತು ಬೆಳೆ ಇಲ್ಲದಂತಾಗಿದೆ.
ಯಳ್ಳೂರು, ವಡಗಾಂವ, ಅನಗೋಳ ಭಾಗದಲ್ಲಿ ಮಳೆ ನಿಂತರೂ ನೀರಿನ ಪ್ರಮಾಣ ಮಾತ್ರ ಕಡಿಮೆ ಆಗಿಲ್ಲ. ಬಳ್ಳಾರಿ ನಾಲಾ ಪಕ್ಕದ ಸೇತುವೆ ಕೆಳಗಿನಿಂದ ನೀರು ಹರಿದು ಹೋಗದೇ ಪಕ್ಕದ ಭತ್ತದ ಗದ್ದೆಗಳಲ್ಲಿ ನೀರು ನಿಂತಿದೆ. ಈ ಮುಂಚೆ ನೀರು ನಿಂತಾಗ ಜೆಸಿಬಿ ಮೂಲಕ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗುತ್ತಿತ್ತು. ಆದರೆ ಈ ಸಲ ನೀರು ಹೆಚ್ಚಾಗಿ ಬಂದು ಗಿಡಕಂಟಿ, ಕಸ-ಕಟ್ಟಿಗಳೆಲ್ಲ ಸೇತುವೆ ಕೆಳ ಭಾಗದಲ್ಲಿ ನಿಂತಿದ್ದರಿಂದ ನೀರು ಮುಂದೆ ಹರಿದು ಹೋಗಲು ಆಗುತ್ತಿಲ್ಲ.ಮತ್ತೆ ನಾಟಿ ಮಾಡಲು ಸಿದ್ಧ: ನಿಂತ ನೀರಿನಲ್ಲಿಯೇ ಈ ಭಾಗದ ರೈತರು ಮತ್ತೆ ಭತ್ತದ ನಾಟಿ ಮಾಡುತ್ತಿದ್ದಾರೆ. ಸಂಬಂಧಿಕರು, ಪರಸ್ಥಳದಿಂದ ಭತ್ತ ಸಸಿಗಳನ್ನು ತಂದು ನಾಟಿ ಮಾಡುವಲ್ಲಿ ನಿರತರಾಗಿದ್ದಾರೆ. ಮತ್ತೆ ಜೋರಾಗಿ ಮಳೆ ಬಂದರೆ ಈ ಬೆಳೆಯೂ ಕೈಗೆ ಸಿಗುವುದೆಂಬ ಭರವಸೆ ಈ ರೈತರಿಗಿಲ್ಲ. ಎಲ್ಲವನ್ನೂ ಕಳೆದುಕೊಂಡು ಜೀವನ ಸಾಗಿಸುವುದಾದರೂ ಹೇಗೆ?, ಜಮೀನನ್ನೇ ನಂಬಿಕೊಂಡು ಬದುಕುತ್ತಿರುವ ಈ ರೈತರಿಗೆ ಬೆಳೆ ಕೈ ಕೊಟ್ಟರೆ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.
ಬೆಳಗಾವಿ ಬಾಸಮತಿಗೆ ಭಾರೀ ಬೇಡಿಕೆ ಇದೆ. ಪ್ರತಿ ವರ್ಷ ಏನಿಲ್ಲವೆಂದರೂ ಒಬ್ಬ ರೈತ 40-50 ಚೀಲ ಭತ್ತ ಬೆಳೆಯುತ್ತಾನೆ. ಭತ್ತಕ್ಕೆ ನೀರು ಹೆಚ್ಚಾಗಿ ಸಿಗಲಿ ಎಂಬ ಆಸೆಗಿಂತಲೂ ಹೆಚ್ಚಿನ ನೀರು ಬಂದು ಅವಾಂತರ ಸೃಷ್ಟಿಸಿದೆ. ಸಾಮಾನ್ಯವಾಗಿ ನೀರು ನಿಂತಾಗಲೂ ರೈತರು ಭತ್ತದ ಗದ್ದೆಗೆ ಹೋಗಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಈ ಸಲ ಗದ್ದೆಗಳಲ್ಲಿ ಇನ್ನೂವರೆಗೆ ಕಾಲಿಡುವ ಸ್ಥಿತಿಯೂ ಇಲ್ಲವಾಗಿದೆ.
Advertisement
ಬೆಳಗಾವಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಭತ್ತ ಬೆಳೆಯುವುದು ಹೆಚ್ಚು. ಅದರಲ್ಲೂ ಬಾಸಮತಿ ಭತ್ತ ಬೆಳೆಯಲು ಈ ಭಾಗ ಭಾರೀ ಫೇಮಸ್ಸು. ಎಷ್ಟೇ ಮಳೆ ಬಂದರೂ ನೀರನ್ನು ತಡೆ ಹಿಡಿದು ಬೆಳೆ ಗಟ್ಟಿಯಾಗಿ ನಿಲ್ಲುವ ತಾಕತ್ತು ಭತ್ತಕ್ಕಿದೆ. ಆದರೆ ಈ ಬಾರಿ 15-20 ದಿನಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ಭತ್ತ ಬೆಳೆಗಳೆಲ್ಲವೂ ಕೊಚ್ಚಿ ಹೋಗಿವೆ. ಭತ್ತ ಬೆಳೆದ ರೈತರಲ್ಲಿ ಆತಂಕವನ್ನುಂಟು ಮಾಡಿದೆ.
Related Articles
Advertisement
ಕಳೆದ ತಿಂಗಳವಷ್ಟೇ ಮುಂಗಾರು ಮಳೆ ನಂಬಿ ರೈತರು ಭತ್ತ ನಾಟಿ ಮಾಡಿ ಬಂದಿದ್ದರು. ಆಗಸ್ಟ್ ಮೊದಲ ವಾರದಿಂದ ಸುರಿದ ಮಳೆಗೆ ಬೆಳೆ ನೀರಿನಲ್ಲಿಯೇ ಕೊಚ್ಚಿಕೊಂಡು ಹೋಗಿದೆ. ಸಂಪೂರ್ಣ ಭೂಮಿ ಬರಡಾಗಿ ಕಾಣಿಸುತ್ತಿದೆ. ಕೆಲ ರೈತರು ನಿಂತ ನೀರಿನಲ್ಲಿಯೇ ನಾಟಿ ಮಾಡುತ್ತಿದ್ದಾರೆ. ಇನ್ನ ಕೆಲವರು ಅಳಿದುಳಿದ ಭತ್ತದ ಬೆಳೆಯನ್ನು ಮೇಲೆತ್ತಿ ನಿಲ್ಲಿಸುತ್ತಿದ್ದಾರೆ. ಇನ್ನುಳಿದ ಜಾಗದಲ್ಲಿ ಹೊಸ ನಾಟಿ ಮಾಡುವಲ್ಲಿ ನಿರತರಾಗಿದ್ದಾರೆ.
ನಾವು ನಿರೀಕ್ಷಿಸಿದಕ್ಕಿಂತಲೂ ಹೆಚ್ಚಿನ ಪ್ರಮಾಣದ ಮಳೆ ಆಗಿ ಬಳ್ಳಾರಿ ನಾಲಾ ಹರಿದು ಬಂದಿದೆ. ಆಗಸ್ಟ್ ತಿಂಗಳ ಮೊದಲ ವಾರದಿಂದ ಸುರಿದ ಭಾರೀ ಮಳೆಯಿಂದ ಎಲ್ಲಿ ನೋಡಿದರಲ್ಲಿ ನೀರು ನಿಂತಿತ್ತು. ಬಳ್ಳಾರಿ ನಾಲಾದಲ್ಲಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಯೇ ಇಲ್ಲವಾಗಿದೆ. ಕಸ, ಹೂಳು ತುಂಬಿಕೊಂಡಿದ್ದರಿಂದ ನೀರೆಲ್ಲ ಪಕ್ಕದ ಜಮೀನುಗಳಿಗೆ ನುಗ್ಗಿದೆ. ನೀರಿನ ರಭಸಕ್ಕೆ ಬೆಳೆಗಳೆಲ್ಲ ಕೊಚ್ಚಿಕೊಂಡು ಹೋಗಿದ್ದು, ಈಗ ಮತ್ತೆ ನಾಟಿ ಮಾಡಲಾಗುತ್ತಿದೆ. • ಸತೀಶ ಯಲ್ಲುಪಾಚೆ, ವಡಗಾಂವಿ ರೈತ
ಪ್ರತಿ ವರ್ಷ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗುವುದು ಸಹಜ. ಈ ಬಾರಿ ಪ್ರಳಯದಂತೆ ಮಳೆ ಸುರಿದು ಅವಾಂತರ ಸೃಷ್ಟಿಸಿದೆ. ಭತ್ತಕ್ಕೆ ನೀರು ಹೆಚ್ಚಾಗಿ ಬೇಕು. ಅತಿಯಾದ ನೀರು ಬಂದು ನಾಟಿ ಮಾಡಿದ್ದ ಭತ್ತ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಹೀಗಾದರೆ ಬೆಳೆದ ಬೆಳೆ ಕೈಗೆ ಬರದಿದ್ದರೆ ಬದುಕು ಸಾಗಿಸುವುದಾದರೂ ಹೇಗೆ. • ಕಮಲಾ ಭೆಂಡಿಗೇರಿ, ಅನಗೋಳದ ರೈತ ಮಹಿಳೆ
•ಭೈರೋಬಾ ಕಾಂಬಳೆ