ಶಿರಸಿ: ಹಿಂದುಳಿದ ಮಕ್ಕಳ ಶೈಕ್ಷಣಿಕ ಏಳ್ಗೆಗೆ ಆರಂಭಗೊಂಡ ಗ್ರಾಮೀಣ ಭಾಗದ ಶಾಲೆಯೊಂದು ಇದೀಗ ಬೆಳ್ಳಿ ಹಬ್ಬದ ಬೆಡಗಿನಲ್ಲಿದ್ದು, ಮೇ 6ರಂದು ಇದಕ್ಕೊಂದು ಸಂಭ್ರಮಾಚರಣೆ ನಡೆಯಲಿದೆ.
ಕಾರ್ಯಕ್ರಮದ ಮಾಹಿತಿ ನೀಡಿದ ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಉಪೇಂದ್ರ ಪೈ, 1994 ರಲ್ಲಿ ಪ್ರಾರಂಭಗೊಂಡು ಅನೇಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ತಾಲೂಕಿನ ಬರೂರ ಗ್ರಾಮದ ಕಿಪ್ರಾ ಶಾಲೆ ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿದೆ. ಇಲ್ಲಿ ಅನೇಕ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಮಹೋತ್ಸವ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಕಳೆದ 25 ವರ್ಷದಿಂದ ಉತ್ತಮ ಶಿಕ್ಷಣ ನೀಡುತ್ತಾ ಬಂದಿದೆ. ಗ್ರಾಮೀಣ ಭಾಗದ ಶಾಲೆಗಳು ಮುಚ್ಚುತ್ತಿರುವ ಸಂದರ್ಭಗಳಲ್ಲಿ ಬರೂರು ಕಿಪ್ರಾ ಶಾಲೆ 22 ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾ ತನ್ನ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದೆ. ಅದರ ರಜತ ಮಹೋತ್ಸವ ಆಚರಿಸಲು ತಿರ್ಮಾನಿಸಲಾಗಿದ್ದು, ಸಾಂಸ್ಕೃತಿಕ -ಸಮ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮೇ 6 ರಂದು ಬೆಳಗ್ಗೆ 10ಕ್ಕೆ ಶಾಸಕ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಶಿವರಾಮ ಹೆಬ್ಟಾರ್ ಉದ್ಘಾಟಿಸಲಿದ್ದು, ಕುಳವೆ ಗ್ರಾಪಂ ಅಧ್ಯಕ್ಷೆ ಚಂದ್ರಮತಿ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ಸದಸ್ಯೆ ಉಷಾ ಹೆಗಡೆ, ತಾಪಂ ಸದಸ್ಯ ನಾಗರಾಜ ಶೆಟ್ಟಿ, ಗ್ರಾಪಂ ಸದಸ್ಯ ರಮೇಶ ನಾಯ್ಕ, ಉದ್ಯಮಿ ಉಪೇಂದ್ರ ಪೈ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ ನಾಯ್ಕ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ರಜತ ಮಹೋತ್ಸವದ ಸಾಂಸ್ಕೃತಿಕ ವೇದಿಕೆ ಹಾಗೂ ಸ್ಮರಣ ಸಂಚಿಕೆ ಉದ್ಘಾಟನೆ ಮಧ್ಯಾಹ್ನ 4:30ಕ್ಕೆ ನಡೆಯಲಿದ್ದು, ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೆಡಿಸಿಸಿ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ಹಾಗೂ ಉದ್ಯಮಿ ಲೋಕೇಶ ಹೆಗಡೆ ಪಾಲ್ಗೊಳ್ಳುವರು. ಶಾಲೆಯಲ್ಲಿ ಕಾರ್ಯನಿರ್ವಹಿಸಿದ 7 ಶಿಕ್ಷಕರು, 25 ವರ್ಷಗಳಲ್ಲಿ ಶಾಲೆ ಅಭಿವೃದ್ಧಿಗೆ ಸಹಕರಿಸಿದ ಎಸ್ಡಿಎಂಸಿ ಅಧ್ಯಕ್ಷರಿಗೆ, ಪ್ರತಿಭಾವಂತ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು.
ಬರೂರು ಲಕ್ಷ್ಮೀ ನರಸಿಂಹ ದೇವಸ್ಥಾನ ಅಧ್ಯಕ್ಷ ಮಂಜುನಾಥ ಭಟ್ ಬೆಳಖಂಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ ನಾಯ್ಕ, ಸದಸ್ಯರಾದ ಮಂಜುನಾಥ ಶೆಟ್ಟಿ, ಸಂತೋಷ ನಾಯ್ಕ ಹಾಗೂ ಶಾಲೆಯ ಮುಖ್ಯ ಶಿಕ್ಷಕ ಸತೀಶ ಹೆಗಡೆ ಇದ್ದರು.
ಸಾಂಸ್ಕೃತಿಕ ಸಂಜೆ: ರಜತ ಮಹೋತ್ಸವ ಅಂಗವಾಗಿ ಸಂಜೆ 6:30ಕ್ಕೆ ಶಾಲಾ ಮಕ್ಕಳ ಮನರಂಜನಾ ಕಾರ್ಯಕ್ರಮ, ರಾತ್ರಿ 9:30ಕ್ಕೆ ತುಳಸಿ ಹೆಗಡೆ ಯಕ್ಷನೃತ್ಯ ರೂಪಕ, ಸ್ನೇಹಶ್ರೀ ಹೆಗಡೆ ರಿಂಗ್ ಡಾನ್ಸ್, ನಿನಾಸಂ ನೇತೃತ್ವದಲ್ಲಿ ಕುರುಕ್ಷೇತ್ರ ನಾಟಕ ಹಾಗೂ ಮಹಿಳಾ ಯಕ್ಷಗಾನ ತಂಡದಿಂದ ಭೀಷ್ಮ ವಿಜಯ ಯಕ್ಷಗಾನ ಪ್ರದರ್ಶನ ನಡೆಯಲಿದೆ. ರಜತ ಮಹೋತ್ಸವಕ್ಕೆ ಒಟ್ಟೂ 3 ಲಕ್ಷ ರೂ. ಖರ್ಚಾಗಬಹುದೆಂದು ಅಂದಾಜಿಸಲಾಗಿದ್ದು, ದಾನಿಗಳ ಮುಖಾಂತರ ಒಟ್ಟು ಮಾಡಲಾಗುತ್ತಿದೆ ಎಂದು ಪ್ರಮುಖರು ಮಾಹಿತಿ ನೀಡಿದರು