ಕಲಬುರಗಿ: ಹಿಂದಕ್ ಗರ್ಭಿಣಿಯರನ್ನು ಎತ್ತುಗಳ ಬಂಡಿಮ್ಯಾಲ, ಮನೆಯೊಳಗಿನ ಹೊರಸಿನ ಮ್ಯಾಲ ಹೊತ್ತುಕೊಂಡು ಬರ್ತಾ ಇದ್ರು.ಏನಾದ್ರೂ ಹೆಚ್ಚು ಕಮ್ಮಿ ಆಗಿ ಮಕ್ಕಳು ಬದಕ್ತಾ ಇರಲಿಲ್ಲ. ಆದರೂ ಸ್ವಲ್ಪವೂ ಬ್ಯಾಸರ್ ಮಾಡಿಕೊಳ್ಳದೇ ಬಾಣಂತನ ಮಾಡುತ್ತಿದ್ದೆ. ಒಳ್ಳೆ ಸೇವಾ ಮಾಡ್ತಿದ್ದೀನಿ ಅಂತ ತೃಪ್ತಿ ಅನಿಸುತ್ತಿತ್ತು.
ಸಾವಿರಾರು ಹೆರಿಗೆಗಳನ್ನು ಸುಲಭವಾಗಿ ಮಾಡಿಸಿ ಗ್ರಾಮಾಂತರ ಪ್ರದೇಶದಲ್ಲಿ ಮನೆ ಮಾತಾದ ಸೂಲಗಿತ್ತಿ ಚಿತ್ತಾಪುರದ ಪಾರ್ವತಿಬಾಯಿ ಮಡಿವಾಳಪ್ಪ ಚಿನಮಳ್ಳಿ ತಮ್ಮ ಅನುಭವ ಕಥನ ಬಿಚ್ಚಿಟ್ಟಿದ್ದು ಹೀಗೆ. ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರವಿವಾರ ಹಮ್ಮಿಕೊಂಡಿದ್ದ ಮಾಸದ ಮನದಾಳದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಿಗ ಹೆರಿಗೆ ಮಾಡಿಸೋದು ಎಂದರೆ ದೊಡ್ಡದು ಎನ್ನುತ್ತಾರೆ. ನಾನಂತೂ ಸರಳವಾಗಿ ಮಾಡುತ್ತಿದ್ದೆ. ಜನರು ನನ್ನನ್ನು ಗೌರವಿಸಿದ ರೀತಿಯಿಂದ ನನ್ನ ವೃತ್ತಿ ಬಗ್ಗೆ ಹೆಮ್ಮೆ ಎನಿಸುತ್ತದೆ. ಅಲ್ಲದೇ ಗೌರವ ಹಾಗೂ ಪ್ರೀತಿ ಇದೆ ಎಂಬುದು ಗೊತ್ತಾಯಿತು ಎಂದು ಹೆಮ್ಮೆ ಪಟ್ಟರು ಪಾರ್ವತಿಬಾಯಿ. ನಾನು ಕೇವಲ 5ವರ್ಷದವಳಾಗಿದ್ದಾಗಲೇ ಅಪ್ಪ ಭೀಮಶಾ ಸಾವನ್ನಪ್ಪಿದರು. ನನಗಂತೂ ಅಪ್ಪನ ಮುಖನೇ ನೆನಪಿಲ್ಲ. ತಾಯಿ ರುಕ್ಕಮ್ಮನೇ ತನ್ನ ಪಾಲಿನ ದೈವವಾಗಿದ್ದಳು. ಕಲಬುರಗಿಯ ಧಾರವಾಡಕರ್ ಆಸ್ಪತ್ರೆದೊಳಗೆ ಅಮ್ಮ ಕೆಲಸ ಮಾಡುತ್ತಿದ್ದಳು.
ದವಾಖಾನಿಯೊಳಗ ಕೆಲಸ ಮಾಡುತ್ತಿದ್ದ ಅಮ್ಮನ ಜತಿಗಿ ನಾ ಹೋಗ್ತಾ ಇದ್ದೆ. ನಾಲ್ಕನೇ ಇಯತ್ತೆ ವರೆಗೆ ಸಾಲಿ ಕಲಿತೆ. ಅಮ್ಮಗ ಆಗಾಗ ಪಿಟ್ಸ್ (ಮೂರ್ಚೆ) ಬರ್ತಾ ಇತ್ತು. ಅದಕ್ಕಾಗಿ ಅಮ್ಮನ ಜತಿಗಿ ಯಾವಾಗ್ಲೂ ಇರಬೇಕಂತ ನಾನೂ ದವಾಖಾನಿಗಿ ಹೋಗ್ತಾ ಇದ್ದೆ. ಅಲ್ಲಿ ಅಮ್ಮ ಮಾಡುವ ಕೆಲಸ ನೋಡ್ತಾ ಇದ್ದೆ. ಹೆರಿಗೆಗೆ ಅಂತ ಬರೋ ಹೆಣ್ಮಕ್ಕಳ ಆರೈಕೆ ಮಾಡೋದು ಹ್ಯಾಂಗ ಎಂಬುದನ್ನು ನೋಡಿ ಕಲಿತೆ. ತನಗ 12 ವರ್ಷ ಇರುವಾಗಲೇ ಮದುವೆ ಮಾಡಲಾಯಿತು. ಆದ್ರ ಮದುವೆ ಆಗಿ ಎರಡು ವರ್ಷಕ್ಕೆ ಅಮ್ಮ ಸಾವನ್ನಪ್ಪಿದಳು. ಆಗ ನಾನು ಗರ್ಭೀಣಿ ಆಗಿದ್ದೆ. ಮೊದಲ ಮಗ ಬಸವರಾಜ ಹೊಟ್ಯಾಗ ಇದ್ದ. ಮುಂದೆ ಧಾರವಾಡಕರ ಆಸ್ಪತ್ರೆಯಲ್ಲೇ ಹೆರಿಗೆ ಆಯಿತು ಎಂದು ಬಾಲ್ಯದ ದಿನಗಳನ್ನು ಪಾರ್ವತಿಬಾಯಿ ಮೆಲುಕು ಹಾಕಿದರು.
ತದನಂತರ ಮುಂದಿನ ದಿನಗಳಲ್ಲಿ ಒಂದು ದಿನ ನನಗಂಡ ಹೇಳದೇ ಕೇಳದೇ ಮಿಲಿಟರಿಯೊಳಗ ಸೇರಿಕೊಂಡ. ಹದಿನೈದು ಇಪ್ಪತ್ತು ದಿನ ಆದ ಮ್ಯಾಲ ನಾ ಹೀಂಗ ಮಿಲಿಟರಿಗಿ ಸೇರಿಕೊಂಡೀನಿ. ತನ್ನ ಚಿಂತಿ ಮಾಡಬ್ಯಾಡ ಅಂತ ಪತ್ರ ಬರೆದ. ಪತ್ರ ನೋಡಿ ಜೋರಾಗಿ ಅತ್ತೆ. ನನಗ ಗಂಡ ಬಿಟ್ಟು ಬೇರೆ ಯಾರೂ ಇರಲಿಲ್ಲ. ಅತ್ತಿ, ಮಾವ ಹೋಗಿಬಿಟ್ಟಿದ್ರು. ದಿಕ್ಕೆ ತೋಚದಂತಾಯಿತು. ಮುಂದೆ ನೌಕರಿ ಮಾಡೋ ಅನಿವಾರ್ಯತೆ ಬಂದು ಬಿಟ್ಟಿತು. ಈ ನಡುವ ಗಂಡ ಮಿಲಿಟರಿ ಕೆಲಸ ಬಿಟ್ಟು ಬಂದ್ರು. ಚಿತ್ತಾಪುರದಾಗ ತುಕ್ಕಪ್ಪ ಮಾಸ್ತರ್ ಅಂತ ಇದ್ರು. ಅವರ ಸಹಾಯದಿಂದ ಆರೋಗ್ಯ ಇಲಾಖೆಯೊಳಗ ಕೆಲಸಕ್ಕ ಸೇರಿದೆ. ಮೊದಲ ಪೋಸ್ಟಿಂಗ್ ಕೊಂಕಲ್‌ಗೆ ಕೊಟ್ರಾ. ಅಲ್ಲಿಪುರ ಎಂಬ ಊರಿನ ಒಬ್ಬ ಹೆಣ್ಮಗಳು ದವಾಖಾನಿಗಿ ಹೆರಿಗಿಗೆ ಬಂದಿದು. ನನಗಾ ಆ ಕೆಲಸ ಹಚ್ಚಿದ್ರು. ಹೀಂಗ ಮೊದಲ ಹೆರಿಗಿ ಮಾಡಿಸಿದೆ. ಕೆಲದಿನಗಳ ನಂತರ ವಾಡಿಗೆ, ಅಲ್ಲಿಂದ ಚಿತ್ತಾಪುರಕ್ಕೆ ಬಂದೆ. ಆ ಮೇಲೆ ಹಲವಾರು ವರ್ಷ ಕೆಲಸ ಮಾಡಿ, ಸಾವಿರಾರು ಹೆರಿಗೆ ಮಾಡಿಸಿದೆ. ಎಷ್ಟೋ ಮಂದಿ ಡಾಕ್ಟರುಗಳು ಹೆರಿಗೆ ಮಾಡಿಸಲು ನನಗೆ ಹೇಳ್ತಾ ಇದ್ರು. ಒಮ್ಮೊಮ್ಮೆ ಒಂದೆ ರಾತ್ರಿಯೊಳಗ ಆರಾರು ಹೆರಿಗೆ ಮಾಡಿಸಿದೆ. ನನಗೆ ಸಾಮಾನ್ಯ ಕೆಲಸ ಎನ್ನುವಂತೆ ಸಾಮಾನ್ಯ ಹೆರಿಗೆ ಮಾಡಿಸುತ್ತಿದ್ದೆ ಎಂದು ವಿವರಣೆ ನೀಡಿದರು ಸೂಲಗಿತ್ತಿ ಪಾರ್ವತಿಬಾಯಿ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ. ಹತ್ತಿ ಸ್ವಾಗತಿಸಿದರು. ಸಿ.ಎಸ್. ಮಾಲಿಪಾಟೀಲ ನಿರೂಪಿಸಿದರು. ವಿಜಯಕುಮಾರ ಪರೂತೆ, ಮಡಿವಾಳಪ್ಪ ನಾಗರಹಳ್ಳಿ, ಡಾ| ಸೂರ್ಯಕಾಂತ ಪಾಟೀಲ ಸರಸಂಬಾ, ದೌಲತರಾಯ ಪಾಟೀಲ ಮಾಹೂರ, ಡಾ| ಸುಜಾತ ಬಂಡೇಶರೆಡ್ಡಿ, ವೇದಕುಮಾರ ಪ್ರಜಾಪತಿ ಹಾಗೂ ಮಡಿವಾಳಪ್ಪ ಚಿಣಮಳ್ಳಿ, ಬಸವರಾಜ ಚಿಣಮಳ್ಳಿ, ಬಸವರಾಜ ಜಮಾದಾರ, ದೇವೇಂದ್ರಪ್ಪ ಕಡೇಚೂರ ಮತ್ತು ಚಿತ್ತಾಪುರ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.