Advertisement

ಬಂದಾದ ಬಾರ್‌ಗಳು: ಪರದಾಡಿದ ಪಾನ ಪ್ರಿಯರು!

03:45 AM Jul 03, 2017 | Team Udayavani |

ಬೆಂಗಳೂರು: ಸುಪ್ರೀಂ ಕೋರ್ಟ್‌ ಆದೇಶದಂತೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಬದಿಯ ಮದ್ಯದಂಗಡಿಗಳನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ಭಾನುವಾರ ಮದ್ಯಪ್ರಿಯರು ಮದ್ಯಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಹೆದ್ದಾರಿ ಹಾದು ಹೋಗುವ ಭಾಗಗಳಲ್ಲಿ ನಿರ್ಮಾಣವಾಗಿತ್ತು.

Advertisement

ರಜೆ ದಿನವಾದ ಭಾನುವಾರ ಮದ್ಯ ಸೇವನೆಗಾಗಿ ಬಾರ್‌ ಮತ್ತು ರೆಸ್ಟೋರಂಟ್‌ಗಳಿಗೆ ಭೇಟಿ ನೀಡಿರುವ ಮದ್ಯ ಪ್ರಿಯರು, ಬಾರ್‌ ಬಾಗಿಲು ಹಾಕಿರುವುದು ಮತ್ತು ಮದ್ಯ ದೊರೆಯುವುದಿಲ್ಲ ಎಂಬ ಫ‌ಲಕಗಳನ್ನು ನೋಡಿ ವಾಪಸ್ಸಾಗುತ್ತಿದ್ದ ಹಾಗೂ ಮದ್ಯ ದೊರೆಯುವ ಸಮೀಪದ ಜಾಗಗಳ ಕುರಿತು ಮಾಹಿತಿ ಸಂಗ್ರಹಿಸುವ ದೃಶ್ಯ ಸಮಾನ್ಯವಾಗಿತ್ತು.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬದಿಯಿಂದ 500 ಮೀಟರೊಳಗೆ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಅದರ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಜೂನ್‌ 30ರೊಳಗೆ ಮದ್ಯ ಮಾರಾಟವನ್ನು ಸ್ಥಗಿತಗೊಳಿಸುವಂತೆ ಮದ್ಯದಂಗಡಿಗಳಿಗೆ ನೋಟಿಸ್‌ ಜಾರಿಗೊಳಿಸಿದ್ದರು.

ಅದರ ಹಿನ್ನೆಲೆಯಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಬೆಂಗಳೂರಿನಲ್ಲಿ ಹೆದ್ದಾರಿ ಬದಿಯಿಂದ 500 ಮೀಟರ್‌ ಒಳಗೆ ಬರುವ ಸುಮಾರು 340 ಮದ್ಯದಂಗಡಿಗಳಿಗೆ ನೋಟಿಸ್‌ ನೀಡಿ ಮುಚ್ಚಿಸಿದ್ದರು. ಜತೆಗೆ ಬಾರ್‌ ಹೊರತುಪಡಿಸಿ ರೆಸ್ಟೋರೆಂಟ್‌ ನಡೆಸುವವರು ಪಾಲಿಕೆಯಿಂದ ಹಾಗೂ ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ.

ವಾರಾಂತ್ಯದ ಹಿನ್ನೆಲೆಯಲ್ಲಿ ನಗರದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಹಾಗೂ ಚರ್ಚ್‌ ಸ್ಟ್ರೀಟ್‌ ರಸ್ತೆಗಳಲ್ಲಿನ ಬಾರ್‌, ಪಬ್‌ ಮತ್ತು ಮದ್ಯ ದೊರೆಯುವ ರೆಸ್ಟೋರಂಟ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಮದ್ಯ ಪ್ರಿಯರು, ಮದ್ಯ ದೊರೆಯದ ಹಿನ್ನೆಲೆಯಲ್ಲಿ ಬೇಸರದಿಂದ ವಾಪಸ್ಸಾಗಿದ್ದಾರೆ. ತಮ್ಮ ನೆಚ್ಚಿನ ಪಬ್‌, ಬಾರ್‌ಗಳಿಗೆ ಬೀಗ ಹಾಕಿರುವುದು ಕಂಡ ಕೆಲ ಗ್ರಾಹಕರು ಮಾಲೀಕರಿಗೆ ಕರೆ ಬಂದ್‌ ಆಗಿರುವುದಕ್ಕೆ ಕಾರಣ ಕೇಳಿದ್ದಾರೆ ಎನ್ನಲಾಗಿದೆ.

Advertisement

“”ಪ್ರತಿವಾರ ಪಬ್‌ಗ ಭೇಟಿ ನೀಡುತ್ತಿದ್ದ ಗ್ರಾಹಕರು ಶನಿವಾರ ರಾತ್ರಿಯಿಂದ ಕರೆ ಮಾಡಿ ಪಬ್‌ ಏಕೆ ಮುಚ್ಚಿದ್ದೀರಾ? ಮತ್ತೆ ಯಾವಾಗ ತೆಗೆಯುತ್ತೀರಾ? ಎಂದು ಕೇಳುತ್ತಿದ್ದಾರೆ. ಆದರೆ, ಅಬಕಾರಿ ಇಲಾಖೆಯ ಅಧಿಕಾರಿಗಳು ನೋಟಿಸ್‌ ನೀಡಿ ಮುಚ್ಚಿಸಿರುವ ಹಿನ್ನೆಲೆಯಲ್ಲಿ ಮದ್ಯ ಹೊರತುಪಡಿಸಿ ರೆಸ್ಟೋರಂಟ್‌ ನಡೆಸಲು ತೀರ್ಮಾನಿಸಿದ್ದು, ಅಧಿಕಾರಿಗಳು ಪಾಲಿಕೆಯಿಂದ ಹಾಗೂ ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯುವಂತೆ ಸೂಚಿಸಿದ್ದಾರೆ” ಎಂದು ಎಂ.ಜಿ.ರಸ್ತೆಯಲ್ಲಿರುವ ಪಬ್‌ವೊಂದರ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಸ್ಥಳ ಪರಿಶೀಲನೆಗೆ ಬಂದವರನ್ನುಓಡಿಸಿದ ಮಹಿಳೆಯರು 
ಕುಣಿಗಲ್‌:
ಹೆದ್ದಾರಿ ಬದಿಯಲ್ಲಿರುವ ಬಾರ್‌ಗಳನ್ನು ತೆರವುಗೊಳಿಸಬೇಕೆಂಬ ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಕಳ್ಳ ಮಾರ್ಗ ಹುಡುಕುತ್ತಿರುವ ಬಾರ್‌ ಮಾಲೀಕರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳನ್ನು ಸಾರ್ವಜನಿಕರೇ ಓಡಿಸಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಅಮೃತ್ತೂರಿನಲ್ಲಿ ಭಾನುವಾರ ನಡೆದಿದೆ. 

ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಅಮೃತ್ತೂರು ಬಸ್‌ ನಿಲ್ದಾಣದ ಬಳಿಯಿರುವ ಎರಡು ಬಾರ್‌ಗಳನ್ನು ಜು.1ರಂದು ಮುಚ್ಚಿಸಲಾಗಿತ್ತು. ಈ ಎರಡೂ ಅಂಗಡಿಗಳನ್ನು ಅಮೃತ್ತೂರಿನ ಕೆಇಬಿ ಸರ್ಕಲ್‌ನಲ್ಲಿ ತೆರೆಯಲು ಅಂಗಡಿ ಮಾಲೀಕರು ಅರ್ಜಿ ಹಾಕಿಕೊಂಡಿದ್ದರು. ಅದರಂತೆ ಭಾನುವಾರ ಸಂಜೆ 4 ಗಂಟೆ ವೇಳೆ ಅಬಕಾರಿ ನಿರೀಕ್ಷಕ ಕಮಲಾಕರ್‌ ಹೆಗಡೆ, ಸಿಬ್ಬಂದಿ ಮತ್ತು ಬಾರ್‌ ಮಾಲೀಕರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸುತ್ತಿದ್ದರು. ಇದಕ್ಕೆ ಮಹಿಳೆಯರು ಮತ್ತು ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಹಂತದಲ್ಲಿ ಮಾತಿನ ಚಕಮಕಿ ಕೂಡ ನಡೆಯಿತು. ಸ್ಥಳೀಯರ ವಿರೋಧಕ್ಕೆ ಮಣಿದ ಅಧಿಕಾರಿಗಳು ಸ್ಥಳದಿಂದ ಕಾಲ್ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next