Advertisement

ಮುಂದಿನ ವರ್ಷದಿಂದ 6ನೇ ತರಗತಿಗೆ ಬ್ಯಾರಿ ಪಠ್ಯ

12:34 AM Mar 11, 2020 | mahesh |

ಮಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ “ಬ್ಯಾರಿ’ ಪಠ್ಯವನ್ನು ಅಳವಡಿಸಲು ಬ್ಯಾರಿ ಸಾಹಿತ್ಯ ಅಕಾಡೆಮಿಯ ನಿರಂತರ ಪ್ರಯತ್ನಕ್ಕೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಸ್ಪಂದಿಸಿದ್ದು, 2020-21ನೇ ಶೈಕ್ಷಣಿಕ ವರ್ಷದಿಂದಲೇ 6ನೇ ತರಗತಿಗೆ ಬ್ಯಾರಿ ಪಠ್ಯವನ್ನು ಬೋಧಿಸಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಬ್ಯಾರಿ ಭಾಷೆಯನ್ನು ಉಳಿಸಿ- ಬೆಳೆಸುವ ಸಲುವಾಗಿ ಬ್ಯಾರಿ ಭಾಷಿಗರು ತಮ್ಮ ಮಕ್ಕಳಿಗೆ ತೃತೀಯ ಭಾಷೆಯಾಗಿ “ಬ್ಯಾರಿ’ಭಾಷೆಯನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸ ಬೇಕು ಎಂದು ಮನವಿ ಮಾಡಿದರು. ಆರಂಭಿಕ ಹಂತದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಮಕ್ಕಳಿಗೆ ಬೋಧಿಸಲು ಅನುಮತಿ ನೀಡಿದೆ. ಅದರಂತೆ ಉಭಯ ಜಿಲ್ಲೆಗಳ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು ಪೂರಕ ಮಾಹಿತಿ ನೀಡಲು ಎಲ್ಲ ಶಾಲೆಗಳಿಗೆ ಸುತ್ತೋಲೆ ಕಳುಹಿಸಿದೆ ಎಂದರು.

ಈಗಾಗಲೇ ಶಾಲೆಗಳಲ್ಲಿ ಇದಕ್ಕೆ ಬೇಕಾದ ಮಾಹಿತಿ ಕಲೆ ಹಾಕಲಾ ಗುತ್ತಿದೆ. ಅಕಾಡೆ‌ಮಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 6ನೇ ತರಗತಿಗೆ ಬ್ಯಾರಿ ಪಠ್ಯ ಅಳವಡಿಸಲು ಉತ್ಸುಕವಾಗಿದ್ದು, ಶಾಲೆಗಳಲ್ಲಿ ಶಿಕ್ಷಕರು ಈ ಬಗ್ಗೆ ಮಾಹಿತಿ ಕೇಳಿದಾಗ ಎರಡೂ ಜಿಲ್ಲೆಗಳ ಬ್ಯಾರಿ ಸಮುದಾಯದ ಮಕ್ಕಳ ಪೋಷಕರು ಮತ್ತು ಬ್ಯಾರಿ ಭಾಷಿಗರ ಮಕ್ಕಳ ಪೋಷಕರು ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

ಪಠ್ಯ ರಚನಾ ಸಮಿತಿ
ಈಗಾಗಲೇ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆಯು (ಡಿಎಸ್‌ಇಆರ್‌ಟಿ) ಅಕಾಡೆಮಿಯ ಜತೆ ವಿಸ್ತೃತ ಸಭೆ ನಡೆಸಿದೆ. ಅಕಾಡೆಮಿಯು ಬ್ಯಾರಿ ಭಾಷಾ ಪಠ್ಯವನ್ನು ಸಿದ್ಧಪಡಿಸಲು ಪಠ್ಯ ರಚನ ಸಮಿತಿಯನ್ನು ರಚಿಸಿದೆ. ಅದರೊಂದಿಗೆ ಪರಿಶೀಲನಾ ಸಮಿತಿಯನ್ನೂ ರಚಿಸಲಿದೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಎ.ವಿ. ನಾವಡ ಸಹಿತ ಹಲವರು ಈ ಸಮಿತಿಯಲ್ಲಿದ್ದಾರೆ. ಬ್ಯಾರಿ ಭಾಷೆಯನ್ನು ಅಕಾಡೆಮಿಕ್‌ ಭಾಷೆ ಯಾಗಿ ಬೆಳೆಸಲು ನಡೆಸಲಾಗುವ ಈ ಪ್ರಯತ್ನಕ್ಕೆ ಪೂರಕವಾಗಿ ಬೆಂಗಳೂರಿನ ಡಿಎಸ್‌ಇಆರ್‌ಟಿ ಮಂಗಳೂರು ಮತ್ತು ಉಡುಪಿಯ ಡಯೆಟ್‌ ಮೂಲಕ ಈ ಭಾಷೆಯನ್ನು ಕಲಿಸುವ/ಕಲಿಯುವ ಕುರಿತು ಅಂಕಿ ಅಂಶಗಳ ಮಾಹಿತಿಯನ್ನು ಮಾ. 14ರೊಳಗೆ ನೀಡಲು ನಿರ್ದೇಶಿಸಿದೆ ಎಂದರು.

ಕನ್ನಡ ಲಿಪಿ
ಬ್ಯಾರಿ ದ್ರಾವಿಡ ಭಾಷೆಯಾಗಿದ್ದು, ತುಳುವಿನ ಅನಂತರ ಅತೀ ಹೆಚ್ಚು ಜನರು ಮಾತನಾಡುವ ಮತ್ತು ವ್ಯವಹರಿಸುವ ಭಾಷೆ. ಪಠ್ಯ ಪುಸ್ತಕ ಕನ್ನಡ ಲಿಪಿಯಲ್ಲೇ ಇರಲಿದೆ. ಬ್ಯಾರಿ ಭಾಷೆಯನ್ನು ಕನ್ನಡ ಬಲ್ಲ ಶಿಕ್ಷಕರಿಗೂ ಕಲಿಸಲು ಸಾಧ್ಯವಿದೆ. ಬ್ಯಾರಿ ಭಾಷೆ ಯಲ್ಲಿ ಪಠ್ಯಕ್ಕೆ ಪೂರಕವಾಗಿ ವಿಪುಲ ಸಾಹಿತ್ಯವಿದ್ದು ಭಾಷಾ ನಿಘಂಟು, ವ್ಯಾಕರಣ ಗ್ರಂಥಗಳು ಕೂಡ ರಚನೆಯಾಗಿವೆ. ಇದನ್ನೆಲ್ಲಾ ಗಮನಿಸಿ ಬ್ಯಾರಿ ಸಮುದಾಯದ ಮತ್ತು ಬ್ಯಾರಿ ಭಾಷಿಗ ಮಕ್ಕಳ ಹೆತ್ತವರು ಅಕಾಡೆಮಿಯ ಪ್ರಯತ್ನದಲ್ಲಿ ಕೈಜೋಡಿಸ ಬೇಕೆಂದರು.

Advertisement

ಅಕಾಡೆ‌ಮಿಯ ರಿಜಿಸ್ಟ್ರಾರ್‌ ಪೂರ್ಣಿಮಾ, ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾದ ಅಬ್ದುರ್ರಹ್ಮಾನ್‌ ಕುತ್ತೆತ್ತೂರು, ಫ್ಲೋರಾ ಕ್ಯಾಸ್ಟಲಿನೋ, ಆಯಿಶಾ ಯು.ಕೆ., ಹಂಝ ಮಲಾರ್‌ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next