ಮಹಾನಗರ: ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ಬುಧವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಂದಾಯ ಭವನದಲ್ಲಿ ಬ್ಯಾರಿ ಭಾಷಾ ದಿನಾಚರಣೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಯಾವುದೇ ಭಾಷೆ ನಿಂತ ನೀರಾಗಬಾರದು. ಕೊಡು- ಕೊಳ್ಳುವಿಕೆಯ ಮೂಲಕವೇ ಭಾಷೆ ಬೆಳೆಯಲಿದೆ. ಬ್ಯಾರಿ ಭಾಷೆ ಕೂಡ ಅದಕ್ಕೆ ಹೊರತಾಗಿಲ್ಲ. ಸ್ವಂತ ಲಿಪಿಯಿಲ್ಲದ, ಸಾಹಿತ್ಯ ಭಂಡಾರವೂ ಇಲ್ಲದ 1,400ಕ್ಕೂ ಅಧಿಕ ವರ್ಷದ ಇತಿಹಾಸವಿರುವ ಬ್ಯಾರಿ ಭಾಷೆಯು ಆಡು ಮಾತಿನ ಮೂಲಕ ಉಳಿದಿರುವುದು ವಿಶೇಷವಾಗಿದೆ ಎಂದರು.
ರಾಜ್ಯ ಸರಕಾರವು 11 ವರ್ಷದ ಹಿಂದೆ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಘೋಷಿಸಿದೆ. ಅಕಾಡಮಿಯನ್ನು ಘೋಷಿಸಿದ ದಿನವಾದ ಅ. 3ರಂದು ಪ್ರತೀ ವರ್ಷ ಬ್ಯಾರಿ ಭಾಷಾ ದಿನ ಆಚರಿಸಲಾಗುತ್ತಿದೆ. ಭಾಷೆಯ ಮಹತ್ವವು ಜಗತ್ತಿಗೆ ತಿಳಿಸಲು ದಿನಾಚರಣೆಯು ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ನುಡಿದರು.
ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಜೆ. ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ‘ಕೊಲ್ಲಿ ರಾಷ್ಟ್ರಗಳಿಂದ ಮರಳಿ ಬಂದ ನಿರುದ್ಯೋಗಿ ಮುಸ್ಲಿಮರ ತಲ್ಲಣಗಳು’ ಎಂಬ ವಿಷಯದಲ್ಲಿ ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯ ಘೋಷಣಾ ಪತ್ರವನ್ನು ದುಬೈಯ ಬ್ಯಾರೀಸ್ ಕಲ್ಚರಲ್ ಫೋರಂನ ಪೋಷಕ ಹಾಜಿ ಬಿ.ಎಂ. ಮುಮ್ತಾಝ್ ಅಲಿ ಬಿಡುಗಡೆಗೊಳಿಸಿದರು.
ಬ್ಯಾರಿ ಅಕಾಡೆಮಿಯ ಅಧ್ಯಕ್ಷ ಮುಹಮ್ಮದ್ ಕರಂಬಾರ್, ಅಕಾಡಮಿಯ ಸದಸ್ಯ ಬಶೀರ್ ಬೈಕಂಪಾಡಿ, ಅಖೀಲ ಭಾರತ ಬ್ಯಾರಿ ಪರಿಷತ್‌ನ ಗೌರವಾಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ, ಕಾರ್ಯಾಧ್ಯಕ್ಷ ಅಬ್ದುನ್ನಾಸರ್ ಲಕ್ಕಿಸ್ಟಾರ್, ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಕಾರ್ಪೊರೇಟರ್ ಲತೀಫ್ ಕಂದಕ್, ಸ್ಟಾರ್ ಶಿಕ್ಷಣ ಸಂಸ್ಥೆಯ ಮುಹಮ್ಮದ್ ಸಲೀಂ ಮಲಾರ್, ನ್ಯಾಷನಲ್ ಟುಟ್ಯೋರಿಯಲ್‌ನ ಖಾಲಿದ್ ಉಜಿರೆ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ ರಫೀಕ್ ಮಾಸ್ಟರ್, ತಾ.ಪಂ. ಮಾಜಿ ಸದಸ್ಯ ಎನ್ .ಇ. ಮುಹಮ್ಮದ್, ದಲಿತ ಸಂಘಟನೆಯ ಮುಖಂಡ ಹರಿಯಪ್ಪ ಉಪಸ್ಥಿತರಿದ್ದರು. ಯೂಸುಫ್ ವಕ್ತಾರ್ ಸ್ವಾಗತಿಸಿ, ವಂದಿಸಿದರು. ಅಬ್ದುಲ್ ಲತೀಫ್ ನೇರಳಕಟ್ಟೆ ನಿರೂಪಿಸಿದರು.