Advertisement

ಸಂಸದೀಯ ಕಾರ್ಯದರ್ಶಿಗಳ ನೇಮಕಕ್ಕೆ ತಡೆ; ತೀರ್ಪು ಎಚ್ಚರಿಕೆಯಾಗಲಿ

12:39 AM Jan 06, 2020 | mahesh |

ಈ ನೇಮ­ಕಾತಿಗಳನ್ನು ಪ್ರಶ್ನಿಸುವ ಮೂಲಕ ಪ್ರಜ್ಞಾವಂತರು ಆಳುವವರ “ಗೆದ್ದ ಬಳಿಕ ಏನು ಮಾಡಿದರೂ ನಡೆಯುತ್ತದೆ’ ಎಂಬಂಥ ಧೋರಣೆಗೆ ಕಡಿವಾಣ ಹಾಕಿದ್ದಾರೆ.

Advertisement

ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡಿದ್ದ ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ ಕಾಯಿದೆಯನ್ನು ಮತ್ತು ಇದಕ್ಕೆ ಮಾಡಿದ್ದ ತಿದ್ದುಪಡಿಗಳನ್ನು ಅಸಿಂಧುಗೊಳಿಸಿರುವ ಹೈಕೋರ್ಟಿನ ತೀರ್ಪನ್ನು ರಂಗೋಲಿ ಕೆಳಗೆ ತೂರಿಕೊಳ್ಳುವ ಜಾಣ್ಮೆಯನ್ನು ತೋರಿಸುವ ಸರಕಾರಗಳ ಪ್ರವೃತ್ತಿಗೆ ಹಾಕಿದ ಲಗಾಮು ಎಂದು ವ್ಯಾಖ್ಯಾನಿಸಬಹುದು. ಅತೃಪ್ತರು, ಅವಕಾಶ ವಂಚಿತರಿಗೆ ರಾಜಕೀಯ ಸ್ಥಾನಮಾನಗಳನ್ನು ಕಲ್ಪಿಸುವ ಸಲುವಾಗಿ ಕಂಡುಕೊಂಡಿದ್ದ ಈ ಅಡ್ಡಹಾದಿಯನ್ನು ಈ ತೀರ್ಪಿನ ಮೂಲಕ ನ್ಯಾಯಾಲಯ ಮುಚ್ಚಿದಂತಾಗಿದೆ.

ಸಂವಿಧಾನದ 164ನೇ ಪರಿಚ್ಛೇದದ (1-ಎ) ಪ್ರಕಾರ ಸಚಿವರ ಸಂಖ್ಯೆ ಶೇ.15 ಮೀರಬಾರದು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಸಚಿವ ಹುದ್ದೆ ಆಕಾಂಕ್ಷಿಗಳ ಸಾಲು ಬಹಳ ದೀರ್ಘ‌ವಾಗಿರುತ್ತದೆ. ಎಲ್ಲರನ್ನೂ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲದ ಕಾರಣ ಸರಕಾರಗಳು ಕಂಡುಕೊಂಡ ಉಪಾಯವೇ ಸಂಸದೀಯ ಕಾರ್ಯದರ್ಶಿ ಹುದ್ದೆಯ ಸೃಷ್ಟಿ. ಸಂಸದೀಯ ಕಾರ್ಯದರ್ಶಿ ಸಹಾಯಕ ಸಚಿವನ ಸ್ಥಾನಮಾನ ಹೊಂದಿರುತ್ತಾರೆ ಹಾಗೂ ಆಯಾಯ ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಅನುಭವಿಸುತ್ತಾರೆ. ಆಡಳಿತಕ್ಕೆ ಸಂಸದೀಯ ಕಾರ್ಯದರ್ಶಿಗಳಿಂದ ಏನು ಲಾಭವಾಗುತ್ತದೆ ಎಂಬ ಪ್ರಶ್ನೆಗಿನ್ನೂ ಸಮರ್ಪಕ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಅತೃಪ್ತರನ್ನು ಸಮಾಧಾನಿಸಲು ಮುಖ್ಯಮಂತ್ರಿಯಾದವರಿಗೆ ಇದು ಸುಲಭ ಮಾರ್ಗವಾಗಿತ್ತು. ಶಾಸಕರಾದವರು ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿಲ್ಲ ಎಂಬ ನಿಯಮವನ್ನೂ ಈ ಹುದ್ದೆ ಉಲ್ಲಂ ಸುತ್ತದೆ. ಸಂಸದೀಯ ಕಾರ್ಯದರ್ಶಿಗಳಾದವರು ನೇರವಾಗಿ ಯಾವುದೇ ವೇತನ ,ಭತ್ಯೆ ಇತ್ಯಾದಿಗಳನ್ನು ಪಡೆಯುವುದಿಲ್ಲವಾದರೂ ಪರೋಕ್ಷವಾಗಿ ಇದರಿಂದ ಸಿಗುವ ಹಲವು ಲಾಭಗಳ ಫ‌ಲಾನುಭವಿಗಳೇ ಆಗಿರುತ್ತಾರೆ ಎನ್ನುವುದನ್ನು ನ್ಯಾಯಾಲಯಗಳು ಈ ಮಾದರಿಯ ಪ್ರಕರಣಗಳ ಹಲವು ತೀರ್ಪುಗಳಲ್ಲಿ ಉಲ್ಲೇಖೀಸಿರುವುದನ್ನು ಗಮನಿಸಬಹುದು.

ಸಂಸದೀಯ ಕಾರ್ಯದರ್ಶಿ ಹುದ್ದೆ ಸೃಷ್ಟಿಯಾಗಿ ದಶಕಗಳೇ ಕಳೆದಿದ್ದರೂ ಇದು ವ್ಯಾಪಕವಾಗಿ ಸಾರ್ವಜನಿಕ ಚರ್ಚೆಗೆ ಬಂದದ್ದು 2015ರಲ್ಲಿ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ 21 ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸಿದಾಗ. ಭಾರೀ ವಿವಾದ ಮತ್ತು ಟೀಕೆಗೆ ಒಳಗಾಗಿದ್ದ ಈ ನೇಮಕಾತಿ ಚುನಾವಣಾ ಆಯೋಗ, ನ್ಯಾಯಾಲಯ, ಲೆಫ್ಟಿನೆಂಟ್‌ ಗವರ್ನರ್‌ ಕಚೇರಿ ಎಂದೆಲ್ಲ ಅಲೆದಾಡಿತ್ತು. ಕೊನೆಗೆ ನ್ಯಾಯಾಲಯ ಈ ನೇಮಕಾತಿಯನ್ನು ರದ್ದುಗೊಳಿಸಿತು. ಇದಕ್ಕೂ ಮೊದಲು 2009ರಲ್ಲೂ ಗೋವಾ ಸರಕಾರ ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸಿದ್ದೂ ಇದೇ ರೀತಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಮಣಿಪುರ, ಹಿಮಾಚಲ ಪ್ರದೇಶ, ಮಿಜೋರಂ, ಅಸ್ಸಾಂ, ರಾಜಸ್ಥಾನ, ಪಂಜಾಬ್‌ ಸೇರಿ ಇನ್ನೂ ಕೆಲವು ರಾಜ್ಯಗಳು ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸಿ ನ್ಯಾಯಾಂಗದ ಕೆಂಗಣ್ಣಿಗೆ ಗುರಿಯಾದ ಅನುಭವ ಹೊಂದಿವೆ. ಸಂಸದೀಯ ಕಾರ್ಯದರ್ಶಿ ಎನ್ನುವುದು ಕಾಂಗ್ರೆಸ್‌ ಸೃಷ್ಟಿ. 1967ರಲ್ಲಿ ಮಧ್ಯ ಪ್ರದೇಶ ಸರಕಾರ ಮೊದಲ ಬಾರಿಗೆ ಸಂಸದೀಯ ಕಾರ್ಯದರ್ಶಿಯನ್ನು ನೇಮಕ ಮಾಡಿತ್ತು. ಕಾಂಗ್ರೆಸ್‌ ಶಾಸಕ ರಾಜೇಂದ್ರ ಪ್ರಸಾದ್‌ ಶುಕ್ಲ ಆಗ ಸಂಸದೀಯ ಕಾರ್ಯದರ್ಶಿಯಾದವರು. ಅನಂತರ ಉಳಿದ ಪಕ್ಷಗಳು ಸಂದರ್ಭ ಒದಗಿ ಬಂದಾಗಲೆಲ್ಲ ಈ ಮೇಲ್ಪಂಕ್ತಿಯನ್ನು ಅನುಸರಿಸಿಕೊಂಡು ಬಂದಿವೆ. ಉಪ ಮುಖ್ಯಮಂತ್ರಿ ಹುದ್ದೆಯೂ ಒಂದರ್ಥದಲ್ಲಿ ಇದೇ ರೀತಿಯದ್ದು. ಯಾವುದೇ ಸಾಂವಿಧಾನಿಕ ಮಾನ್ಯತೆ ಹೊಂದಿರದ ಈ ಅಲಂಕಾರಿಕ ಹುದ್ದೆಯನ್ನು ಅನುಕೂಲ ಶಾಸ್ತ್ರಕ್ಕಾಗಿ ಸೃಷ್ಟಿಸಲಾಗಿದೆ. ಇದಕ್ಕಾಗಿ ನಡೆಯುತ್ತಿರುವ ಲಾಬಿ, ವಶೀಲಿ, ಹೋರಾಟಗಳನ್ನು ನೋಡುವಾಗ ಈ ಹುದ್ದೆಗೆ ಸಂಬಂಧಿಸಿದಂತೆಯೂ ನ್ಯಾಯಾಲಯ ಈ ಮಾದರಿಯ ತೀರ್ಪೊಂದನ್ನು ನೀಡುವ ಅಗತ್ಯವಿರುವಂತೆ ಕಂಡು ಬರುತ್ತದೆ.

ವಿಶೇಷವೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಸಂಸದೀಯ ಕಾರ್ಯದರ್ಶಿ ಹುದ್ದೆಗಳ ವಿರುದ್ಧ ಹೋರಾಡಿದ್ದು ಪ್ರಜ್ಞಾವಂತ ಜನರೇ ಹೊರತು ರಾಜಕೀಯ ಪಕ್ಷಗಳು ಅಲ್ಲ.ಸಾರ್ವಜನಿಕ ಹಿತಾಸಕ್ತಿ ದಾವೆಗಳ ಮೂಲಕ ಈ ನೇಮಕಾತಿಗಳನ್ನು ಪ್ರಶ್ನಿಸುವ ಮೂಲಕ ಪ್ರಜ್ಞಾವಂತರು ಆಳುವವರ “ಗೆದ್ದ ಬಳಿಕ ಏನು ಮಾಡಿದರೂ ನಡೆಯುತ್ತದೆ’ ಎಂಬಂಥ ಧೋರಣೆಗೆ ಕಡಿವಾಣ ಹಾಕಿದ್ದಾರೆ. ಇಂಥ ಹೋರಾಟಗಳಲ್ಲಿ ರಾಜಕೀಯ ಪಕ್ಷಗಳೇನಾದರೂ ಸೇರಿಕೊಂಡಿದ್ದರೆ ಅದು ತತ್‌ಕ್ಷಣದ ರಾಜಕೀಯ ಲಾಭಕ್ಕಾಗಿಯೇ ಹೊರತು ಸಮಷ್ಟಿಯ ಹಿತದ ದೃಷ್ಟಿಯಿಂದ ಅಲ್ಲ. ಸರಕಾರಗಳು ಹೀಗೆ ಸಂವಿಧಾನದ ಕಣ್ಣಿಗೆ ಮಣ್ಣೆರಚುವ ಚಾಳಿಯನ್ನು ಬಿಡಲು ಈ ತೀರ್ಪು ಒಂದು ಎಚ್ಚರಿಕೆಯಾಗಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next