Advertisement

ಮಾರ್ನಮಿಕಟ್ಟೆ: ತಡೆಗೋಡೆ ಕುಸಿದು ರೈಲು ಸಂಚಾರ ವ್ಯತ್ಯಯ

10:19 AM Jul 12, 2019 | Team Udayavani |

ಮಂಗಳೂರು: ಮಾರ್ನಮಿಕಟ್ಟೆ ಸಮೀಪ ರೈಲು ಬೋಗಿಗಳನ್ನು ತಿರುಗಿಸುವ ಹಳಿ (ಶಂಟಿಂಗ್‌ ನೆಕ್‌) ಬದಿಯಲ್ಲಿ ನಿರ್ಮಿಸಿದ್ದ ತಡೆಗೋಡೆ ಕುಸಿದು ಬುಧವಾರ ರಾತ್ರಿ ಮತ್ತು ಗುರುವಾರ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

Advertisement

ಮಾರ್ನಮಿಕಟ್ಟೆಯ ಬಳಿ ರೈಲು ಕೋಚ್‌ ಯಾರ್ಡ್‌ನಿಂದ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ಫ್ಲಾಟ್‌ಫಾರಂಗೆ ತರುವ ಹಳಿಗಳ ಶಂಟಿಂಗ್‌ ನೆಕ್‌ ಬಳಿ ಬುಧವಾರ ರಾತ್ರಿ ಸುಮಾರು 9.30ರ ವೇಳೆಗೆ ತಡೆಗೋಡೆ ಕುಸಿದ ಕಾರಣ ಸಂಚಾರಕ್ಕೆ ಭಾಗಶಃ ತಡೆ ಉಂಟಾಯಿತು.

ಬುಧವಾರ ರಾತ್ರಿ ರೈಲು ನಂ. 16159 ಚೆನ್ನೈ- ಎಗೊರ್‌ -ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ಅರ್ಧ ತಾಸು, ನಂ. 56641 ಮಡಗಾಂವ್‌- ಮಂಗಳೂರು ಸೆಂಟ್ರಲ್‌ ಪ್ಯಾಸೆಂಜರ್‌, ನಂ. 22635 ಮಡಗಾಂವ್‌ – ಮಂಗಳೂರು ಸೆಂಟ್ರಲ್‌ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ಸುಮಾರು ಒಂದೂವರೆ ತಾಸು ವಿಳಂಬವಾಗಿ ಆಗಮಿಸಿತು. ನಂ.22638 ಮಂಗಳೂರು ಸೆಂಟ್ರಲ್‌-ಚೆನ್ನೈ ಸೆಂಟ್ರಲ್‌ ಎಕ್ಸ್‌ ಪ್ರಸ್‌ ರೈಲು ಸುಮಾರು ಒಂದು ತಾಸು ತಡವಾಗಿ ಸಂಚರಿಸಿತು. ಗುರುವಾರವೂ ಮಂಗಳೂರು ಸೆಂಟ್ರಲ್‌ನಿಂದ ಸಂಚರಿಸುವ ರೈಲುಗಳು ಸುಮಾರು 10ರಿಂದ 15 ನಿಮಿಷ ತಡವಾಗಿ ಸಂಚರಿಸಿದವು.

ತಡೆಗೋಡೆಯನ್ನು ಇತ್ತೀಚೆಗೆ ನಿರ್ಮಿಸಲಾಗಿದ್ದು, ಮಳೆ ನೀರಿನ ರಭಸಕ್ಕೆ ತಡೆಗೋಡೆ ಕುಸಿದಿರುವ ಸಾಧ್ಯತೆಯಿದೆ. ಹಳಿಯ ಮೇಲೆ ಬಿದ್ದಿರುವ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ 4 ಜೆಸಿಬಿಗಳು ಮತ್ತು ಸುಮಾರು 20ಕ್ಕೂ ಅಧಿಕ ಕಾರ್ಮಿಕರನ್ನು ಬಳಸಲಾಗಿದ್ದು, ಗುರುವಾರ ರಾತ್ರಿಯವರೆಗೆ ಮಂದುವರಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next