ದಾಂಡೇಲಿ: ತಾವು ಮಾಡಿದ್ದೆ ಸರಿ ಎಂಬಂತೆ ಸರ್ವಾಧಿಕಾರಿ ಧೋರಣೆಯ ಮೂಲಕ ಹಳೆದಾಂಡೇಲಿ ಭಾಗದ ಜನತೆಯ ನಿದ್ದೆಗೆಡಿಸಿದ ಅರಣ್ಯ ಇಲಾಖೆ ಯಾವ ಪುರುಷಾರ್ಥಕ್ಕಾಗಿ ರಸ್ತೆಗೆ ತಡೆಗೋಡೆ ನಿರ್ಮಿಸಿತು ಎನ್ನುವುದೇ ಯಕ್ಷಪ್ರಶ್ನೆ.
ಅರಣ್ಯ ಇಲಾಖೆಯವರು ಅವರು ಸಹ ಎಲ್ಲರಂತೆ ಮನುಷ್ಯರು ಎನ್ನುವುದನ್ನು ತಿಳಿದು ಕೊಳ್ಳಬೇಕಾಗಿದೆ. ಅದು ಬಿಟ್ಟು ಶತಮಾನಗಳಿಂದ ಸ್ಥಳೀಯ ಜನರ ದೈನಂದಿನ ಬದುಕಿನ ಜೊತೆಗೆ ನಂಟನ್ನು ಹೊಂದಿರುವ ಹಳೆ ದಾಂಡೇಲಿಯ ಸ್ವಾಮಿಲ್ ಹತ್ತಿರದ ರಸ್ತೆಗೆ ಏಕಾಏಕಿ ತಡೆಗೋಡೆ ನಿರ್ಮಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಬೇಕಾದ ಸ್ಥಿತಿ ಯಾಕೆ ಬೇಕಿತ್ತು.
ಅರಣ್ಯ ಇಲಾಖೆಯವರ ಪ್ರತಿಯೊಂದು ಕಾರ್ಯಕ್ರಮಗಳಿಗೆ ಇದೇ ಜನ ಬೇಕಲ್ಲವೆ, ವನ್ಯಜೀವಿ ಸಪ್ತಾಹದ ಮೆರವಣಿಗೆಗೂ ಇದೇ ಜನ ಬೇಕಲ್ಲವೆ, ಜನವಸತಿ ಪ್ರದೇಶಕ್ಕೆ ಬರುವ ವನ್ಯಪ್ರಾಣಿಗಳ ಬಗ್ಗೆ ತಕ್ಷಣ ಮಾಹಿತಿ ನೀಡಿ ಅವುಗಳ ರಕ್ಷಣೆಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಎಂಬಂತೆ ಸಹಕಾರಿಯಾಗಲು ಇದೇ ಜನ ಬೇಕಲ್ಲವೆ. ಇವೆಲ್ಲವುಗಳನ್ನು ಅರಣ್ಯ ಇಲಾಖೆಯವರು ಮರೆತರೇ?. ಹೀಗೆ ನೂರೆಂಟು ಪ್ರಶ್ನೆಗಳು ಅರಣ್ಯ ಇಲಾಖೆಯವರ ಮೇಲಿದೆ.
ಇದೇ ರಸ್ತೆಯಲ್ಲಿರುವ ನಿವಾಸಿಗಳ ಯಾರ್ದಾದರೂ ಮನೆಯೊಂದರಲ್ಲಿ ಯಾರಿಗಾದರೂ ಹೆರಿಗೆ ನೋವು ಸಂಭವಿಸಿದರೇ, ತೀವ್ರ ಅನಾರೋಗ್ಯಕ್ಕೆ ತುತ್ತಾದರೇ ತಕ್ಷಣಕ್ಕೆ ಆಸ್ಪತ್ರೆಗೆ ಎತ್ತಿಕೊಂಡು ಹೋಗಬೇಕಾದ ಸ್ಥಿತಿ ತಂದಿಟ್ಟರಲ್ವಾ.?. ಒಂದು ವೇಳೆ ಇದೇ ರಸ್ತೆಯಲ್ಲಿ ಅರಣ್ಯ ಅಧಿಕಾರಿಗಳ ಸ್ವಂತ ಮನೆಯಿರುತ್ತಿದ್ದರೇ ತಡೆಗೋಡೆ ನಿರ್ಮಿಸುತ್ತಿದ್ದರೇ ಹೀಗೆಲ್ಲ ಪ್ರಶ್ನೆಗಳು ಅರಣ್ಯ ಇಲಾಖೆಯವರ ಮೇಲಿದೆ.
ಮೇಲಾಧಿಕಾರಿಗಳ ಆದೇಶವಿರಬಹುದು. ಅದು ಏನೇ ಇದ್ದರೂ ಸ್ಥಳೀಯ ಜನತೆ ವಿಶ್ವಾಸಗಳಿಸಿಕೊಂಡು,ಸ್ಥಳೀಯ ಜನತೆಯ ಬದುಕಿಗೆ ಅಡ್ಡಿಯಾಗದೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಅಸಾದ್ಯವಾದಾಗ ಈ ರೀತಿಯ ಸಮಸ್ಯೆಗಳು ಉದ್ಭವವಾಗಲು ಸಾಧ್ಯ. ಸ್ಥಳೀಯವಾಗಿ ಇರುವ ವಾಸ್ತವ ಸ್ಥಿತಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ಮೊದಲೆ ತರುತ್ತಿದ್ದಲ್ಲಿ ಹೀಗಾಗುತ್ತಿತ್ತೆ ಎಂಬ ಪ್ರಶ್ನೆ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲಿದೆ.