ಬಂಟ್ವಾಳ: ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಮ್‌ನಿಂದ ಹೊರ ಬರುವ ನೀರಿನ ಹೊಡೆತದ ಪರಿಣಾಮ ಸ್ಥಳೀಯ ಕೃಷಿ ಭೂಮಿ ನದಿ ಪಾಲಾಗುತ್ತಿರುವ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದು, ಅನುದಾನ ಹಾಗೂ ಯಾವ ಯೋಜನೆಯ ಮೂಲಕ ಕಾಮಗಾರಿ ನಡೆಯಲಿದೆ ಎಂಬುದು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.
ಮಂಗಳೂರಿನ ನೀರಿನ ಬೇಡಿಕೆ ಹೆಚ್ಚಾದ ಹಿನ್ನೆಲೆ ಯಲ್ಲಿ ಕೆಲವು ವರ್ಷಗಳ ಹಿಂದೆ ಹೊಸ ಡ್ಯಾಮ್ ನಿರ್ಮಾಣ ಮಾಡಿ ಪ್ರಸ್ತುತ 6 ಮೀ. ನೀರನ್ನು ನಿಲ್ಲಿಸಲಾಗುತ್ತಿದೆ ಇದರಿಂದ ಹೊರಬರುವ ನೀರು ಅಲೆಗಳ ರೂಪದಲ್ಲಿ ನದಿ ಇಕ್ಕೆಡೆಗಳಿಗೆ ಅಪ್ಪಳಿಸಿದ ಪರಿಣಾಮ ಸುಮಾರು 600 ಮೀ. ಉದ್ದಕ್ಕೆ ಅಡಿಕೆ ತೋಟ ನೀರು ಪಾಲಾಗಿತ್ತು. ಹೀಗಾಗಿ ಸ್ಥಳೀಯರು ತುಂಬೆ ಗ್ರಾ.ಪಂ.ಗೆ ತಮ್ಮ ನೋವನ್ನು ತಿಳಿಸಿದ್ದರು.
ಕಳೆದ ನವೆಂಬರ್‌ನಲ್ಲಿ ತುಂಬೆ ಗ್ರಾ.ಪಂ.ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ಕಾರ್ಯ ಮಾಡಿದ್ದು, ಭೂ ಪ್ರದೇಶ ಕುಸಿದು ಕೃಷಿಕರು ಆತಂಕದಲ್ಲಿರುವ ವಿಚಾರ ಮಾಧ್ಯಮಗಳಲ್ಲೂ ಪ್ರಕಟವಾಗಿತ್ತು. ಡ್ಯಾಮ್‌ಗೆ ತಾಗಿಕೊಂಡು ಸುಮಾರು 150 ಮೀ. ವರೆಗೆ ಈಗಾಗಲೇ ತಡೆಗೋಡೆ ಇದ್ದು, ಅಲ್ಲಿನ ಕೃಷಿ ಪ್ರದೇಶಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಮುಂದಿನ ಪ್ರದೇಶ ಸಂಪೂರ್ಣ ನದಿ ಸೇರಿದ್ದು, ಪ್ರಸ್ತುತ ಇರುವ ತಡೆಗೋಡೆಯನ್ನೇ ಮುಂದುವರಿಸಿ ತಡೆಗೋಡೆ ನಿರ್ಮಾಣ ಮಾಡುವ ಕಾರ್ಯ ಮಾಡಬೇಕಿದೆ.
ನೂರಾರು ಕೃಷಿ ಗಿಡಗಳು ನಾಶ
ತುಂಬೆ ಡ್ಯಾಂನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೃಷಿಕರಿಗೆ ಈ ಅವ್ಯವಸ್ಥೆ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸುಮಾರು 600 ಮೀ. ಉದ್ದ ಹಾಗೂ 50 ಮೀ. ಅಗಲಕ್ಕೆ ಕೃಷಿ ಪ್ರದೇಶ ನಾಶವಾಗಿದೆ. ಪರಿಣಾಮ ಸುಮಾರು 250ಕ್ಕೂ ಅಧಿಕ ಅಡಿಕೆ ಗಿಡ, ಬಾಳೆ ಗಿಡ, 60ಕ್ಕೂ ಅಧಿಕ ತೆಂಗಿನಮರಗಳು ನದಿ ಪಾಲಾಗಿದ್ದು, 1.22 ಎಕರೆ ಕೃಷಿ ಭೂಮಿಯಲ್ಲಿ 50 ಸೆಂಟ್ಸ್ ಪ್ರದೇಶ ಈಗಾಗಲೇ ನದಿ ಸೇರಿದೆ ಎಂದು ಕೃಷಿಕರೊಬ್ಬರು ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ಸ್ಥಳೀಯ ಕೃಷಿಕರಾದ ಲೋಕಯ್ಯ, ಭಾಸ್ಕರ, ಗಂಗಾಧರ, ಪುರುಷೋತ್ತಮ, ಲಿಂಗಪ್ಪ, ಆನಂದ ಶೆಟ್ಟಿ, ಮೊಯಿದ್ದೀನ್ ಮೊದಲಾದವರ ಕೃಷಿ ಭೂಮಿ ನಾಶವಾಗಿತ್ತು. ಪ್ರಸ್ತುತ ಮನಪಾದಿಂದ ತಡೆಗೋಡೆ ನಿರ್ಮಾಣಗೊಂಡು ನಾಶವಾದ ಪ್ರದೇಶಕ್ಕೆ ಮತ್ತೆ ಮಣ್ಣು ತುಂಬಿದ್ದಲ್ಲಿ ಕೃಷಿಕರು ಕಳೆದುಕೊಂಡಿರುವ ಭೂ ಪ್ರದೇಶ ಮತ್ತೆ ಅವರಿಗೆ ಸಿಕ್ಕಿದಂತಾಗುತ್ತದೆ. ಆದರೆ ನಾವು ಕಳೆದುಕೊಂಡ ಕೃಷಿಗೆ ಪರಿಹಾರ ನೀಡಬೇಕು ಎಂಬ ಒತ್ತಾಯವೂ ಇದೆ. ಇಲ್ಲಿನ ಕೃಷಿಕರ ಮತ್ತೂಂದು ವಿಶೇಷವೆಂದರೆ ಕೃಷಿಕರ ಮನೆಗಳು ಕಳ್ಳಿಗೆ ಗ್ರಾ.ಪಂ.ವ್ಯಾಪ್ತಿಗೆ ಬರುತ್ತಿದ್ದು, ಅದರ ಕೃಷಿ ಭೂಮಿಯು ತುಂಬೆ ಗ್ರಾ.ಪಂ.ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಕಳ್ಳಿಗೆಯು ಬಂಟ್ವಾಳ ವಿಧಾನಸಭಾ ಕ್ಷೇತ್ರ ಹಾಗೂ ತುಂಬೆಯು ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಬರುತ್ತದೆ. ಹೀಗಾಗಿ ಸ್ಥಳೀಯ ಕೃಷಿಕರು ಎರಡೂ ಕ್ಷೇತ್ರಗಳ ಶಾಸಕರಲ್ಲಿಯೂ ತಮ್ಮ ಸಮಸ್ಯೆ ಪರಿಹಾರಕ್ಕೆ ಆಗ್ರಹವನ್ನಿತ್ತಿದ್ದರು.
ವರದಿ ಪರಿಶೀಲಿಸಿ ಕ್ರಮ
ಡ್ಯಾಮ್‌ನ ಪಕ್ಕದಲ್ಲಿ ಸಂಭವಿಸಿರುವ ಭೂ ಸವೆತಕ್ಕೆ ಸಂಬಂಧಿಸಿದಂತೆ ಪಾಲಿಕೆ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದು, ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಾಂತ್ರಿಕ ವರದಿಯನ್ನು ಪರಿಶೀಲನೆ ಮಾಡಿಕೊಂಡು ಕ್ರಮಕೈಗೊಳ್ಳಲಾಗುವುದು.
–ಪ್ರೇಮಾನಂದ ಶೆಟ್ಟಿ, ಮೇಯರ್, ಮನಪಾ.
ಮನಪಾ ಗಮನಕ್ಕೆ ತಂದಿದ್ದೆವು
ಡ್ಯಾಮ್‌ನಿಂದ ಹೊರಕ್ಕೆ ನೀರು ಹರಿಯುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಮಾಡದ ಪರಿಣಾಮ ನಮ್ಮ ಗ್ರಾಮದ ವ್ಯಾಪ್ತಿಗೆ ಬರುವ ಕೃಷಿ ಪ್ರದೇಶ ನೀರು ಪಾಲಾಗುತ್ತಿರುವ ಕುರಿತು ನಾವು ಮನಪಾ ಮೇಯರ್, ಕಮಿಷನರ್ ಗಮನಕ್ಕೆ ತಂದಿದ್ದು, ಪ್ರಸ್ತುತ ಅದಕ್ಕೆ 2 ಕೋ.ರೂ. ಅನುದಾನ ಇಟ್ಟು ತಡೆಗೋಡೆ ನಿರ್ಮಾಣದ ಭರವಸೆ ನೀಡಿದ್ದಾರೆ
. –ಪ್ರವೀಣ್ ಬಿ.ತುಂಬೆ, ಅಧ್ಯಕ್ಷರು, ಗ್ರಾ.ಪಂ.ತುಂಬೆ
-ಕಿರಣ್ ಸರಪಾಡಿ