Advertisement

ಧಾರಾಕಾರ ಮಳೆಗೆ ತಡೆಗೋಡೆ ಕುಸಿತ

08:30 AM Apr 25, 2020 | mahesh |

ಬೆಂಗಳೂರು: ನಗರದಲ್ಲಿ ಶುಕ್ರವಾರ ಬೆಳಗ್ಗೆ ಸುರಿದ ಧಾರಾಕಾರ ಮಳೆಗೆ ನಗರದ ವಿವಿಧೆಡೆ 30ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಲಕ್ಷ್ಮೀದೇವಿನಗರದಲ್ಲಿ ತಡೆಗೋಡೆ ಕುಸಿದು 18ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಶುಕ್ರವಾರ ಬೆಳಗಿನಜಾವ ಗುಡುಗು, ಮಿಂಚು ಸಹಿತ ಒಂದು ಗಂಟೆಗೂ ಹೆಚ್ಚು ಮಳೆ ಆರ್ಭಟಿಸಿತು. ಪರಿಣಾಮ ನಂದಿನಿ ಲೇಔಟ್‌, ಬೊಮ್ಮನಹಳ್ಳಿ, ಬಸವೇಶ್ವರನಗರ, ರಾಜಾಜಿನಗರ, ಮಲ್ಲೇಶ್ವರ, ಮೂಡಲಪಾಳ್ಯ, ಇಂದಿರಾನಗರ, ಬಿಟಿಎಂ ಲೇಔಟ್‌, ಜಯನಗರ, ಕೊಟ್ಟಿಗೆಹಳ್ಳಿ ಸೇರಿದಂತೆ ವಿವಿಧೆಡೆ 30ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿವೆ. ಇನ್ನು ಇಂದಿರಾ ನಗರದಲ್ಲಿ ಬೃಹತ್‌ ಗಾತ್ರದ ಮರ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಜಖಂಗೊಂಡಿತು. ಲಕ್ಷ್ಮೀ ದೇವಿನಗರದಲ್ಲಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಳ್ಳುವುದರ ಜತೆಗೆ ತಡೆಗೋಡೆ ಕುಸಿದು 18ಕ್ಕೂ ಅಧಿಕ ವಾಹನಗಳು ಜಖಂಗೊಂಡ ಘಟನೆ ನಡೆದಿದೆ. ಗಾಂಧಿನಗರದ ಕಿನೋ ಚಿತ್ರಮಂದಿರ ಬಳಿಕ ರೈಲ್ವೆ ಅಂಡರ್‌ಪಾಸ್‌ ಜಲಾವೃತಗೊಂಡಿತ್ತು.

Advertisement

ರಸ್ತೆ ಕುಸಿತ; 32 ಕುಟುಂಬ ಸ್ಥಳಾಂತರ
ಮಳೆಯಿಂದಾಗಿ ಲಗ್ಗೆರೆ ವಾರ್ಡ್‌ನ ಲಕ್ಷ್ಮೀ ದೇವಿನಗರದಲ್ಲಿ ಸ್ಲಂ ಬೋರ್ಡ್‌ ರಸ್ತೆ ಸಂಪೂರ್ಣವಾಗಿ ಕುಸಿದಿದ್ದು, ರಸ್ತೆಯಲ್ಲಿ ನಿಲ್ಲಿಸಲಾಗಿದ್ದ 12 ಕಾರು, 3 ಆಟೋ ಹಾಗೂ 4 ಬೈಕ್‌ ಕುಸಿದ ರಸ್ತೆಯ ಹಳ್ಳಕ್ಕೆ ಬಿದ್ದಿವೆ. ರಸ್ತೆ ಕುಸಿದ ಬೆನ್ನಲ್ಲೇ ಇಲ್ಲಿನ ಬೋರ್ಡ್‌ನ ಅಪಾರ್ಟ್ಮೆಂಟ್‌ನ ತಡೆಗೋಡೆ ಕುಸಿದಿದೆ. ತಲಾ 16 ಮನೆ ಇರುವ ಜಿ+ 3 ಮಹಡಿಯ ಎರಡು ಬ್ಲಾಕ್‌ ಕುಸಿಯುವ ಭೀತಿ ಉಂಟಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌, ರಸ್ತೆ ನಿರ್ಮಾಣದ ಯೋಜನೆ ಅವೈಜ್ಞಾನಿಕವಾಗಿರುವುದರಿಂದ ರಸ್ತೆ ಕುಸಿದಿದೆ. ಸ್ಲಂ ಬೋರ್ಡ್‌ನ ಕಟ್ಟಡ ರಕ್ಷಿಸಬೇಕಾಗಿದ್ದು, ತಜ್ಞರೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸ್ಲಂ ಬೋರ್ಡ್‌ಆಯುಕ್ತರೊಂದಿಗೆ ಚರ್ಚೆ ಮಾಡುತ್ತೇನೆ ಎಂದರು.

ರಾಜ್ಯದಲ್ಲಿ ಹಳದಿ ಆಲರ್ಟ್‌
ಬೆಂಗಳೂರು:
ರಾಜ್ಯದ ದಕ್ಷಿಣ ಒಳನಾಡು ಹಾಗೂ ಮಲೆನಾಡಿನ ವಿವಿಧ ಜಿಲ್ಲೆಗಳಿಗೆ ಎರಡು ದಿನಗಳ ಕಾಲ ಮಿಂಚು, ಗುಡುಗು ಸಹಿತ ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಈ ಭಾಗದಲ್ಲಿ ಹಳದಿ ಅಲರ್ಟ್‌ನ ಎಚ್ಚರಿಕೆ ನೀಡಿದೆ. ತಾಪಮಾನ ಏರಿಕೆ ಮತ್ತು ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಲವೆಡೆ ಮಳೆಯಾಗುತ್ತಿದ್ದು, ಮುಂದಿನ ಎರಡು ದಿನ ದಕ್ಷಿಣ ಒಳನಾಡಿದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಮುಂದಿನ ಎರಡು ದಿನ ಈ ಭಾಗದಲ್ಲಿ 65 ಮಿ.ಮೀ ನಿಂದ 115 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ತಲಾ 3, ಆನೇಕಲ್‌, ಬೆಂಗಳೂರು ನಗರ, ಕೆಆರ್‌ಎಸ್‌ನಲ್ಲಿ ತಲಾ 2 ಸೆಂ,ಮೀ ಮಳೆಯಾದ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next