Advertisement

ಬ್ಯಾರಿಕೇಡ್‌ ಏಕಾಏಕಿ ತೆರವು: ಅಪಘಾತ ಸಂಭವ ಭೀತಿ?

09:58 AM May 27, 2022 | Team Udayavani |

ಹಳೆಯಂಗಡಿ/ ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುವ ಮೂಲ್ಕಿ ಬಪ್ಪನಾಡು ಪ್ರದೇಶದಿಂದ ಮುಕ್ಕದವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಳವಡಿಸಲಾಗಿದ್ದ ಎಲ್ಲ ಬ್ಯಾರಿಕೇಡ್‌ ಗಳನ್ನು ಏಕಾಏಕಿ ತೆರವು ಮಾಡಲಾಗಿದೆ. ಇದರಿಂದ ವಾಹನಗಳು ವೇಗದಮಿತಿ ಇಲ್ಲದೇ ಸಂಚರಿಸಲಾರಂಭಿಸಿದ್ದು, ಪಾದಚಾರಿಗಳಿಗೆ ಅಪಘಾತದ ಆತಂಕ ಎದುರಾಗಿದೆ.

Advertisement

ಬಪ್ಪನಾಡು ದೇವಸ್ಥಾನದ ದ್ವಾರದ ಬಳಿ, ಮೂಲ್ಕಿ ಬಸ್‌ ನಿಲ್ದಾಣದ ಹತ್ತಿರ, ಕಾರ್ನಾಡು ಬೈಪಾಸ್‌, ಹಳೆಯಂಗಡಿ ಮುಖ್ಯ ಜಂಕ್ಷನ್‌, ಪಾವಂಜೆ ದೇವಸ್ಥಾನದ ಪ್ರದೇಶ, ಮುಕ್ಕದ ಮುಖ್ಯ ಜಂಕ್ಷನ್‌ನಲ್ಲಿ ವಿವಿಧ ಸಂಘ – ಸಂಸ್ಥೆಗಳು, ವ್ಯಾಪಾರಿಗಳು ಸಂಚಾರಿ ಪೊಲೀಸರ ವಿನಂತಿಯಂತೆ ನೀಡಿದ್ದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಈ ಪ್ರದೇಶದಲ್ಲಿ ಅಪಘಾತಗಳು ಸಹ ಸಾಕಷ್ಟು ನಿಯಂತ್ರಣದಲ್ಲಿತ್ತು. ಇದನ್ನು ಸ್ಥಳೀಯ ರಿಕ್ಷಾ ಚಾಲಕರು, ವ್ಯಾಪಾರಿಗಳು, ಸೇವಾ ಸಂಸ್ಥೆಗಳ ಪ್ರಮುಖರು ಬೆಳಗ್ಗೆ ಅಳವಡಿಸಿ, ರಾತ್ರಿ ಸಮಯದಲ್ಲಿ ತೆರವು ಮಾಡುತ್ತಿದ್ದರು.

ಒಂದು ಮೂಲದ ಪ್ರಕಾರ ಹಿರಿಯ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡುವುದರಿಂದ ಈ ವ್ಯವಸ್ಥೆ ಆಗಿದೆ ಎಂದು ಹೇಳಿಕೊಂಡರೂ ಅದನ್ನು ಅಧಿಕಾರಿಗಳೇ ಅಲ್ಲಗಳೆಯುತ್ತಾರೆ. ಉನ್ನತ ಅಧಿಕಾರಿಗಳ ಸೂಚನೆಯನ್ನು ಸಂಚಾರಿ ಪೊಲೀಸರು ಪಾಲಿಸಿದ್ದಾರೆ ಎಂದು ಹೇಳಲಾಗಿದೆ. ಎರಡು ದಿನಗಳಲ್ಲಿ ಬಪ್ಪನಾಡು ಹಾಗೂ ಮೂಲ್ಕಿ ಬಸ್‌ ನಿಲ್ದಾಣದ ಮುಖ್ಯ ಜಂಕ್ಷನ್‌ನಲ್ಲಿ ಟಿಪ್ಪರ್‌ ಹಾಗೂ ಇನೋವಾ ಕಾರು ಮಗುಚಿ ಬಿದ್ದ ಘಟನೆಯೂ ಸಂಭವಿಸಿವೆ. ಹಳೆಯಂಗಡಿ ಜಂಕ್ಷನ್‌ನಲ್ಲಿಯೂ ಸಣ್ಣ ಪುಟ್ಟ ಅಪಘಾತದ ಘಟನೆಗಳೂ ನಡೆದಿದ್ದು ಇದಕ್ಕೆ ವೇಗ ನಿಯಂತ್ರಕ ಇಲ್ಲದೇ ಇರುವುದು ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಹೊರಗಿನ ಪ್ರಯಾಣಿಕರಿಗೆ ತೊಂದರೆ

Advertisement

ಮಳೆಗಾಲದ ಸಮಯದಲ್ಲಿ ಆಗಮಿಸುವ ಹೊರಗಿನ ವಾಹನ ಪ್ರಯಾ ಣಿಕರಿಗೆ ಬ್ಯಾರಿಕೇಡ್‌ಗಳಿಂದ ತೊಂದರೆಯಾಗುತ್ತಿದೆ. ಸಂಚಾರದ ನಿಯಂತ್ರಣ ಇಲ್ಲದೇ ಬ್ಯಾರಿಕೇಡ್‌ಗಳಿಗೆ ಢಿಕ್ಕಿ ಹೊಡೆದು ಸಾಕಷ್ಟು ಸಾವು ನೋವು ಸಂಭವಿಸುತ್ತವೆ. ಸರಿಯಾದ ರಿಫ್ಲೆಕ್ಟರ್‌ ಸಹ ಇರುವುದಿಲ್ಲ, ಮುರಿದಿರುವ ಬ್ಯಾರಿಕೇಡ್‌ ಗಳು ಸಹ ಹೆದ್ದಾರಿ ಸಂಚಾರಕ್ಕೆ ಅಡಚಣೆಯಾಗಿದೆ. ಖಾಸಗಿ ಜಾಹೀರಾತುಗಳನ್ನು ಅಳವಡಿಸಿರುವುದೂ ಕಂಡು ಬಂದಿದೆ. ಕೆಲವರು ಅಂಗಡಿಗಳ ಮುಂದೆ ಅಕ್ರಮವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪಾರ್ಕಿಂಗ್‌ಗೆ ತೊಂದರೆ ಕೊಡುವುದು ಕಂಡು ಬಂದಿದೆ. ಮುಖ್ಯ ಜಂಕ್ಷನ್‌ಗಳಲ್ಲಿ ಅಗತ್ಯವಿದ್ದಲ್ಲಿ ಚರ್ಚಿಸಿ ಅಳವಡಿಸುವ ಚಿಂತನೆ ಮಾಡುತ್ತೇವೆ. -ಹರಿರಾಮ್‌ ಶಂಕರ್‌, ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಕಮಿಷನರೆಟ್‌, ಮಂಗಳೂರು

ನಾಗರಿಕರ ಬೇಡಿಕೆಗೆ ಸ್ಪಂದನೆ  

ಹಳೆಯಂಗಡಿಯ ಮುಖ್ಯ ಜಂಕ್ಷನ್‌ನಲ್ಲಿ ಏಕಾಏಕಿ ಬ್ಯಾರಿಕೇಡ್‌ ತೆರವು ಮಾಡಿರುವುದರಿಂದ ಸಾಕಷ್ಟು ದೂರುಗಳು ಸ್ಥಳೀಯ ರಿಕ್ಷಾ ಚಾಲಕರ ಸಹಿತ ನಿತ್ಯ ಪ್ರಯಾಣಿಕರಿಂದ ಬಂದಿವೆ. ದೂರವಾಣಿ ಮೂಲಕ ಪೊಲೀಸ್‌ ಅಧಿಕಾರಿಗಳಲ್ಲಿ ಮಾತನಾಡಿದ್ದೇನೆ, ಅಧಿಕೃತವಾಗಿ ಪಂಚಾಯತ್‌ನಿಂದ ಪತ್ರವನ್ನು ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ. ಅಪಾಯಕಾರಿ ಜಂಕ್ಷನ್‌ನಲ್ಲಿ ವೇಗ ನಿಯಂತ್ರಣ ಅತೀ ಅಗತ್ಯವಾಗಿ ಬೇಕಾಗಿದೆ. -ಪೂರ್ಣಿಮಾ, ಅಧ್ಯಕ್ಷರು, ಗ್ರಾ.ಪಂ., ಹಳೆಯಂಗಡಿ

Advertisement

Udayavani is now on Telegram. Click here to join our channel and stay updated with the latest news.

Next