ಉಡುಪಿ: ಬ್ಯಾರಿಕೇಡ್ ವ್ಯವಸ್ಥೆ ರಸ್ತೆ ನಿಯಮಗಳಿಗೆ ವಿರೋಧವಾಗಿದ್ದರೂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜಂಕ್ಷನ್‌ಗಳಲ್ಲಿ ಬಹುತೇಕ ಬ್ಯಾರಿಕೇಡ್‌ಗಳಿಂದಲೇ ವಾಹನಗಳನ್ನು ನಿಯಂತ್ರಿಸಲ್ಪಡುವ ಪರಿಸ್ಥಿತಿ ಇದೆ.
ಪ್ರಸ್ತುತ ಎಲ್ಲ ಜಂಕ್ಷನ್‌ಗಳಲ್ಲಿ ನಾಲ್ಕೆçದು ಬ್ಯಾರಿಕೇಡ್ ಗಳನ್ನು ಕಾಣಬಹುದು. ಜಂಕ್ಷನ್‌ಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಬ್ಯಾರಿಕೇಡ್ ಇಲ್ಲದೆ ವಾಹನ ನಿಯಂತ್ರಿಸಲು ಅಸಾಧ್ಯದ ವಾತಾವರಣ ಸೃಷ್ಟಿಯಾಗಿದೆ.
ಎಲ್ಲೆಲ್ಲಿ?
ಅಂಬಲಪಾಡಿ, ಉದ್ಯಾವರ ಬಲಾಯಿಪಾದೆ, ನಿಟ್ಟೂರು ಜಂಕ್ಷನ್, ಅಂಬಾಗಿಲು, ಸಂತೆಕಟ್ಟೆ ಜಂಕ್ಷನ್, ಬ್ರಹ್ಮಾವರದಲ್ಲಿ ಮಹೇಶ್ ಡಿವೈಡರ್, ಬಸ್ ನಿಲ್ದಾಣ, ಆಕಾಶವಾಣಿ, ಕೋಟೇಶ್ವರ, ಸಂಗಮ್, ತಲ್ಲೂರು, ಹೆಮ್ಮಾಡಿ, ಮುಳ್ಳಿಕಟ್ಟೆ, ತ್ರಾಸಿ, ಕಂಬದಕೋಣೆ, ಬೈಂದೂರು, ಪಡುಬಿದ್ರಿ, ಉಚ್ಚಿಲ, ಕಟಪಾಡಿ ಜಂಕ್ಷನ್‌ಗಳು ಬ್ಯಾರಿಕೇಡ್‌ನಿಂದ ಕೂಡಿವೆ.
ಅಪಘಾತ ಪ್ರಮಾಣ ನಿಯಂತ್ರಣಕ್ಕೆ ಶ್ರಮ
ಕೆಲವು ಬ್ಯಾರಿಕೇಡ್‌ಗಳು ಸುಸ್ಥಿತಿಯಲ್ಲಿದ್ದರೂ, ಕೆಲವು ಒಂದರ ಬ್ಯಾರಿಕೇಡ್‌ಗಳು ಚಕ್ರಗಳು ತುಂಡಾಗಿವೆ. ಇನ್ನೂ ಕೆಲವು ಬ್ಯಾರಿಕೇಡ್‌ಗಳು ಸಂಪೂರ್ಣ ತುಕ್ಕು ಹಿಡಿದಿದ್ದು, ಅವುಗಳನ್ನು ತೆರವು ಗೊಳಿಸಬೇಕಿದೆ. ಬ್ಯಾರಿಕೇಡ್‌ಗಳಲ್ಲಿ ರಿಫ್ಲೆಕ್ಟರ್‌ಗಳಿಲ್ಲ. ಸಂತೆಕಟ್ಟೆ-ಉದ್ಯಾವರ ಬಲಾಯಿಪಾದೆ ಹೆದ್ದಾರಿ ಜಂಕ್ಷನ್‌ಗಳಲ್ಲಿ ವಾಹನಗಳ ಓಡಾಟ ಹೆಚ್ಚಳ ವಾಗಿದ್ದು, ಅಪಘಾತ ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಅಪಘಾತ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಶ್ರಮಿಸುತ್ತಿದೆ. ಸಂಘ -ಸಂಸ್ಥೆಗಳು ಬ್ಯಾರಿಕೇಡ್‌ಗಳನ್ನು ಕೊಡುಗೆಯಾಗಿ ನೀಡಿವೆ. ಎಲ್ಲ ಜಂಕ್ಷನ್‌ಗಳಲ್ಲಿ ಸಿಬಂದಿ ನೇಮಿಸಿ ನಿಯಂತ್ರಿಸುವುದು ಕಷ್ಟಸಾಧ್ಯ ಆಗಿರುವುದರಿಂದ ಬ್ಯಾರಿಕೇಡ್ ಇಟ್ಟು ವಾಹನಗಳ ವೇಗವನ್ನು ನಿಯಂತ್ರಿಸಿ ಅಪಘಾತ ತಪ್ಪಿಸಲಾಗುತ್ತದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.
ಮಳೆ-ಗಾಳಿಗೆ ನಿಗಾ ವಹಿಸಬೇಕಿದೆ
ಬ್ಯಾರಿಕೇಡ್‌ಗಳು ಸದಾ ಸುಸ್ಥಿತಿಯಲ್ಲಿ ಇರಬೇಕು ಮತ್ತು ಈ ಬಗ್ಗೆ ಸಂಬಂಧಪಟ್ಟವರು ಆಗಿಂದಾಗ್ಗೆ ನಿಗಾ ವಹಿಸಬೇಕು. ಮಳೆ, ಗಾಳಿಗೆ ಬ್ಯಾರಿಕೇಡ್ ಗಳು ರಸ್ತೆಗೆ ಬಿದ್ದಲ್ಲಿ ವಾಹನ ಸವಾರರಿಗೆ ಇದರಿಂದ ಕಂಟಕವಾಗಬಹುದು. ಜತೆಗೆ ರಿಫ್ಲೆಕ್ಟರ್ ಇಲ್ಲದ ಬ್ಯಾರಿಕೇಡ್‌ಗಳನ್ನು ಮಳೆಯಲ್ಲಿ ಸವಾರರು ಗುರುತಿಸುವುದು ಕಷ್ಟಸಾಧ್ಯ. ಮಳೆ-ಗಾಳಿ ಸಂದರ್ಭ ಬ್ಯಾರಿಕೇಡ್‌ಗಳ ಬಗ್ಗೆ ಸಂಬಂಧಪಟ್ಟ ಹೆದ್ದಾರಿ, ಪೊಲೀಸ್ ಇಲಾಖೆಯವರು ವಿಶೇಷ ಗಮನ ಕೊಡಬೇಕು.
ಅಂಡರ್/ಓವರ್ ಪಾಸ್ ನಿರ್ಮಾಣ
ಜಂಕ್ಷನ್‌ಗಳನ್ನು ಬ್ಯಾರಿಕೇಡ್‌ನಿಂದ ಮುಕ್ತವಾಗಿಸಲು ಅಂಬಲಪಾಡಿ ಜಂಕ್ಷನ್ 27.49 ಕೋ. ರೂ. ವೆಚ್ಚದಲ್ಲಿ ಡಬಲ್‌ಸೆಲ್ ಅಂಡರ್‌ಪಾಸ್ ನಿರ್ಮಾಣ, ಸಂತೆಕಟ್ಟೆಯಲ್ಲಿ 27.4 ಕೋ. ರೂ. ವೆಚ್ಚದಲ್ಲಿ ಓವರ್‌ಪಾಸ್ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮೋದನೆ ನೀಡಿದೆ. ಈ ಯೋಜನೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ಹೆದ್ದಾರಿ ಇಲಾಖೆ ಮೂಲಗಳು ತಿಳಿಸಿವೆ. ಈ 2 ಯೋಜನೆಗಳ ವಿಳಂಬ ಪ್ರಕ್ರಿಯೆ ಯಿಂದ ಸವಾರರು ಪರದಾಡು ವಂತಾಗಿದೆ. ಶೀಘ್ರ ಕಾಮಗಾರಿ ಆರಂಭಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯ.
ನಿಯಮ ಪ್ರಕಾರ ತಪ್ಪು- ಸುರಕ್ಷೆಗಾಗಿ ಸರಿ
ಜಂಕ್ಷನ್‌ಗಳು ವೈಜ್ಞಾನಿಕವಾಗಿ ರೂಪುಗೊಂಡಲ್ಲಿ ಅಥವಾ ಅಂಡರ್/ ಓವರ್‌ಪಾಸ್ ಪ್ರದೇಶಗಳಲ್ಲಿ ಬ್ಯಾರಿಕೇಡ್ ಆವಶ್ಯಕತೆ ಇರುವುದಿಲ್ಲ. ಹೆದ್ದಾರಿಗಳಲ್ಲಿ ನಿಯಮ ಪ್ರಕಾರ ಬ್ಯಾರಿಕೇಡ್ ಅಳವಡಿಸುವಂತಿಲ್ಲ. ಪ್ರಸ್ತುತ ಸವಾರರ ಸುರಕ್ಷತೆಗಾಗಿ ಬ್ಯಾರಿಕೇಡ್‌ಗಳು ಜಂಕ್ಷನ್‌ಗಳಲ್ಲಿ ಅಗತ್ಯವಾಗಿದೆ. ಇಲ್ಲದಿದ್ದರೆ ಜಂಕ್ಷನ್ ಗಳಲ್ಲಿ ಅಪಘಾತಗಳ ಸರಣಿಯೇ ಸಂಭವಿಸಲಿದೆ. ಅಂಬಲಪಾಡಿ, ಸಂತೆಕಟ್ಟೆಯಂಥ ಒತ್ತಡದ ಜಂಕ್ಷನ್ ಗಳಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟ ಅನಂತರ ಅಪಘಾತ ಪ್ರಮಾಣ ಬಹುತೇಕ ಇಳಿಕೆಯಾಗಿದೆ. ಸುಸ್ಥಿತಿಯಲ್ಲಿರುವ ಬ್ಯಾರಿಕೇಡ್‌ಗಳನ್ನು ಮಾತ್ರ ಇಡುತ್ತೇವೆ, ಇಲ್ಲದಿದ್ದಲ್ಲಿ ಅದನ್ನು ಬದಲಾಯಿಸಲಾಗುತ್ತದೆ. ಪ್ರತೀ ವರ್ಷ ಮಳೆ, ಗಾಳಿ ಸಂದರ್ಭ ಪೊಲೀಸ್ ಇಲಾಖೆ ವಿಶೇಷ ನಿಗಾ ವಹಿಸಲಿದೆ.
-ಟಿ. ಸಿದ್ದಲಿಂಗಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕ, ಉಡುಪಿ ಜಿಲ್ಲೆ
ಅವಿನ್ ಶೆಟ್ಟಿ