ಬೀದರ: ಕಾರಂಜಾ ಜಲಾಶಯದಲ್ಲಿ ರೈತರ ಉಪಯೋಗಕ್ಕಾಗಿ ನೀರು ಭರ್ತಿ ಮಾಡಲಾಗುವುದು. ಗೋದಾವರಿ ಬೇಸನ್‌ನ ಬಚಾವತ್ ಆಯೋಗದಡಿ ನಮ್ಮ ಪಾಲಿನ ನೀರನ್ನು ಬೀದರ ಜಿಲ್ಲೆಯಲ್ಲಿ ಸದ್ಬಳಕೆಗೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಜಿಲ್ಲೆಯಲ್ಲಿ ಹೊಸದಾಗಿ ಬಾಂದಾರ, ಸೇತುವೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಜಿಲ್ಲೆಯ ಕಾರಂಜಾ ಜಲಾಶಯಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಅವರು ಮಾತನಾಡಿ, ಬೀದರ ಜಿಲ್ಲೆಯಲ್ಲಿ ಈಗಾಗಲೇ ನಿರ್ಮಿಸಿರುವ ಬ್ಯಾರೇಜ್‌ಗಳಲ್ಲಿನ ದೋಷಗಳನ್ನು ಸರಿಪಡಿಸಲಾಗಿದೆ. ಇದೀಗ ನೀರು ಸಂಗ್ರಹವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರಂಜಾ ಜಲಾಶಯವು 7.5 ಟಿಎಂಸಿ ಸಾಮರ್ಥ್ಯ ಹೊಂದಿದ್ದು, 9.5 ಟಿಎಂಸಿ ಬಳಕೆ ಸಾಮರ್ಥ್ಯ ಹೊಂದಿದೆ. ಮಾಂಜ್ರಾ ನದಿಗೆ ಅಡ್ಡಲಾಗಿ ಅಗತ್ಯಕ್ಕೆ ಅನುಗುಣವಾಗಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಿಸಿ, ಕೆರೆಗಳಿಗೆ ನೀರು ತುಂಬಿಸಲಾಗುವುದು. ಕಾರಂಜಾ ಜಲಾಶಯ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ಸಮೀಕ್ಷೆ ಮಾಡಿ, ಡಿಪಿಆರ್ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಶಾಸಕರಾದ ರಾಜಶೇಖರ ಪಾಟೀಲ, ಬಂಡೆಪ್ಪ ಕಾಶೆಂಪುರ, ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಕರ್ನಾಟಕ ನೀರಾವರಿ ನಿಗಮದ ಮುಖ್ಯ ಅಭಿಯಂತರ ಮಲ್ಲಿಕಾರ್ಜುನ ಗುಂಗೆ, ಕಾರ್ಯಪಾಲಕ ಅಭಿಯಂತರ ಶಿವಕುಮಾರ ಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕಿರಣ ಪಬ್ಟಾ ಇತರರು ಇದ್ದರು.